ಅಗತ್ಯ ಕಚ್ಚಾಸಾಮಗ್ರಿಗಳ ಬೆಲೆ ಏರಿಕೆ

ಬೆಂಗಳೂರು:

ಸಣ್ಣ ಕೈಗಾರಿಕೆಗಳಿಗೆ ತೀರಾ ಅಗತ್ಯವಾಗಿರುವ ಕಬ್ಬಿಣ ಮತ್ತಿತರ ಮೂಲ ಕಚ್ಛಾ ವಸ್ತುಗಳು ದಿನದಿಂದ ದಿನಕ್ಕೆ ತೀವ್ರ ಪ್ರಮಾಣದಲ್ಲಿ ಏರಿಕೆಯಾಗುತ್ತಿದ್ದು, ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಪೀಣ್ಯ ಕೈಗಾರಿಕಾ ಸಂಘ, ಮತ್ತಿತರ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಏಷ್ಯಾದ ಅತಿದೊಡ್ಡ ಕೈಗಾರಿಕಾ ವಲಯವಾಗಿರುವ ಪೀಣ್ಯದಲ್ಲಿ ಕೈಗಾರಿಕೆಗಳನ್ನು ಬಂದ್ ಮಾಡಿ ಪೀಣ್ಯದ ಆಲ್ ಇಂಡಿಯಾ ಕೌನ್ಸಿಲ್ ಆಫ್ ಅಸೋಸಿಯೇಷನ್ ಆಫ್ ಎಂ.ಎಸ್.ಎಂ.ಇ ಎದುರು ಭಾರಿ ಪ್ರತಿಭಟನೆ ನಡೆಸಿದರು.

ವಿವಿಧ ಸಂಘಟನೆಗಳ ಮುಖಂಡರು ಜನ ವಿರೋಧಿ ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಮೊಳಗಿಸಿ, ಭಾರಿ ಆಕ್ರೋಶ ಹೊರ ಹಾಕಿದರು. ಈ ಭಾಗದಲ್ಲಿ ಕೈಗಾರಿಕಾ ವಲಯ ಬಹುತೇಕ ಸ್ಥಬ್ದಗೊಂಡಿತ್ತು. ಪರಿಸ್ಥಿತಿ ಹೀಗೆಯೆ ಮುಂದುವರೆದರೆ ಮುಂದೆ ಕೈಗಾರಿಕೆಗಳ ಪರಿಸ್ಥಿತಿ ಹೇಗೆ? ನಮ್ಮ ಕುಟುಂಬ, ನಮ್ಮನ್ನು ನಂಬಿಕೊಂಡಿರುವ ಕಾರ್ಮಿಕರ ಸ್ಥಿತಿಗತಿ ಏನು ಎನ್ನುವ ಆತಂಕ, ಸಿಟ್ಟನ್ನು ಪ್ರತಿಭಟನಾಕಾರರು ಹೊರ ಹಾಕಿದರು.

ಪೀಣ್ಯದ ಸಣ್ಣ ಕೈಗಾರಿಕಾ ಸಂಘದ ಅಧ್ಯಕ್ಷ ಬಿ. ಮುರಳಿ ಕೃಷ್ಣ ಮಾತನಾಡಿ, ಕಬ್ಬಿಣ ಮತ್ತಿತರ ಮೂಲ ಕಚ್ಛಾ ವಸ್ತುಗಳ ಬೆಲೆ ಕೈಗೆಟುಕದ ರೀತಿಯಲ್ಲಿ ಏರಿಕೆಯಾಗುತ್ತಿದೆ. ಬೆಲೆ ನಿಯಂತ್ರಣಕ್ಕೆ ಸರ್ಕಾರಗಳು ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕನಿಷ್ಠ ಪಕ್ಷ ಬೆಲೆ ನಿಯಂತ್ರಣ ಮಾಡಲು ಸಭೆಗಳನ್ನು ಸಹ ನಡೆಸುತ್ತಿಲ್ಲ. ಬೆಲೆ ನಿಯಂತ್ರಣಕ್ಕೆ ಯಾವುದೇ ಪ್ರತಿಬಂಧಕ ಕ್ರಮಗಳನ್ನೂ ಕೂಡ ಸರ್ಕಾರಗಳು ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಹಿಂದಿನ ಸರ್ಕಾರಗಳು ಕಬ್ಬಿಣ, ಸಿಮೆಂಟ್ ಮತ್ತಿತರ ವಸ್ತುಗಳ ಬೆಲೆ ನಿಯಂತ್ರಿಸಲು ನಿಯಮಿತವಾಗಿ ಸಭೆಗಳನ್ನು ನಡೆಸುತ್ತಿದ್ದವು. ಇದಕ್ಕಾಗಿ ಸಚಿವರು, ಅಧಿಕಾರಿಗಳ ನೇತೃತ್ವದಲ್ಲಿ ಉನ್ನತಮಟ್ಟದ ಸಮಿತಿಗಳನ್ನು ರಚಿಸಿ ಬೆಲೆ ನಿಯಂತ್ರಣಕ್ಕೆ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಈಗಿನ ಸರ್ಕಾರಗಳು ಸಣ್ಣ ಕೈಗಾರಿಕೆಗಳು ಮತ್ತು ಜನ ಸಾಮಾನ್ಯರ ವಿಷಯದಲ್ಲಿ ಅತೀವ ನಿರ್ಲಕ್ಷ್ಯ ವಹಿಸುತ್ತಿವೆ ಎಂದು ವಾಗ್ದಾಳಿ ನಡೆಸಿದರು.

ಕಚ್ಛಾ ವಸ್ತುಗಳ ಬೆಲೆ ಏರಿಕೆಯಿಂದ ಜನ ಸಾಮಾನ್ಯರು ಸಣ್ಣ ಮನೆಗಳನ್ನು ಕಟ್ಟಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಸಾಮಾನ್ಯ ಜನತೆ, ಸಣ್ಣ ಕೈಗಾರಿಕೆಗಳು ದಿಕ್ಕೆ ತೋಚದಂತಾಗಿವೆ. ನಾವು ಇದೀಗ ಕೈಗಾರಿಕೆಗಳನ್ನು ಬಂದ್ ಮಾಡದೆ ಬೇರೆ ದಾರಿಯೇ ಇಲ್ಲದಂತಾಗಿದೆ. ಒಂದು ವೇಳೆ ಕೈಗಾರಿಕೆಗಳು ಶಾಶ್ವತವಾಗಿ ಬಂದ್ ಆದರೆ ಊಹಿಸಲೂ ಸಾಧ್ಯವಾಗದಷ್ಟು ಸಮಸ್ಯೆಗಳು ಎದುರಾಗಲಿವೆ. ಕೋವಿಡ್‍ನಿಂದ ಈಗಾಗಲೆ ಉದ್ಯೋಗವಿಲ್ಲದೆ ಪರಿತಪಿಸುತ್ತಿರುವ ಜನ ಸಾಮಾನ್ಯರು ಭಾರಿ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಬಿ. ಮುರಳಿ ಕೃಷ್ಣ ಆತಂಕ ವ್ಯಕ್ತಪಡಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link