ಸ್ಮಾರ್ಟ್‍ಸಿಟಿಯಾಗಬೇಕಿದ್ದ ತುಮಕೂರೀಗ ಕೊರೊನಾ ಸಿಟಿ ; ಎಚ್ಚರ!!!

 ತುಮಕೂರು : 

      ಕೋವಿಡ್ ಅಲೆಯಿಲ್ಲದೆ ಅಭಿವೃದ್ಧಿ ಕಾಮಗಾರಿಗಳು ನಿರೀಕ್ಷೆಯಂತೆ ಪೂರ್ಣಗೊಂಡಿದ್ದರೆ ತುಮಕೂರು ನಗರ ಸ್ಮಾರ್ಟ್‍ಸಿಟಿಯಾಗಿ ಕಂಗೊಳಿಸಬೇಕಿತ್ತು. ಆದರೆ ಕಳೆದ ವರ್ಷ ಎದುರಾದ ಕೋವಿಡ್ ಮೊದಲ ಅಲೆ, ಪ್ರಸಕ್ತ ಕಂಡುಬಂದಿರುವ ಎರಡನೇ ಅಲೆಗೆ ಅಭಿವೃದ್ಧಿ ಕಾಮಗಾರಿಗಳೆಲ್ಲ ನನೆಗುದಿಗೆ ಬಿದ್ದು ತುಮಕೂರು ನಗರ ಕೊರೊನಾ ಸೋಂಕಿನಿಂದ ತತ್ತರಿಸುವಂತಾಗಿದ್ದು, ಜಿಲ್ಲೆಯಲ್ಲೇ ಅತೀ ಹೆಚ್ಚು ಸೋಂಕಿತರು ಸ್ಮಾರ್ಟ್‍ಸಿಟಿ ನಗರದಲ್ಲಿ ಕಂಡುಬರುತ್ತಿರುವುದು ಕಳವಳಕಾರಿ ಸಂಗತಿಯೆನಿಸಿದೆ.

      ಜಿಲ್ಲಾ ಕೇಂದ್ರವಾಗಿರುವ ತುಮಕೂರು ನಗರ ಕೋವಿಡ್ ಸೋಂಕಿತರಿಂದ ಆವೃತ್ತವಾಗುತ್ತಿದ್ದು, ನಗರದ ನಾಲ್ಕು ದಿಕ್ಕಿನಲ್ಲಿರುವ ಆಸ್ಪತ್ರೆಗಳಲ್ಲೂ ಕೊರೊನಾ ಸೋಂಕಿತರೇ ತುಂಬಿ ತುಳುಕುವಂತಾಗಿದೆ. ತುಮಕೂರು ನಗರ ಮಾತ್ರವಲ್ಲದೇ ಜಿಲ್ಲೆಯ ವಿವಿಧ ತಾಲೂಕುಗಳಿಂದಲೂ, ರಾಜಧಾನಿಯಿಂದಲೂ ಹೊರಜಿಲ್ಲೆಗಳಿಂದಲೂ ಸೋಂಕಿತರು ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುವಂತಾಗಿದ್ದು, ಮಹಾನಗರಪಾಲಿಕೆಯವರೇ ತುಮಕೂರಿನ 18 ಬಡಾವಣೆಯನ್ನು ಕೊರೊನಾ ಹಾಟ್‍ಸ್ಪಾಟ್‍ಗಳೆಂದು ಗುರುತಿಸಿದ್ದು, ಪರಿಸ್ಥಿತಿಯ ಭೀಕರತೆಗೆ ನಿದರ್ಶನವೆನಿಸಿದೆ.

ಕೊರೊನಾ ಹಾಟ್‍ಸ್ಪಾಟ್‍ಗಳು:

      ತುಮಕೂರಿನ ಮಾರುತಿ ನಗರ, ಅಶೋಕ ನಗರ, ಜಯನಗರ ಪೂರ್ವ ಮತ್ತು ಪಶ್ಚಿಮ, ಎಸ್‍ಎಸ್.ಪುರಂ, ಎಸ್‍ಐಟಿ ಬಡಾವಣೆ, ವಿಜಯನಗರ, ಗಾಂಧಿ ನಗರ ಮತ್ತು ಸಿಎಸ್‍ಐ ಬಡಾವಣೆ, ಸರಸ್ವತಿಪುರಂ, ಅಮರಜ್ಯೋತಿನಗರ, ಗೂಡ್‍ಶೆಡ್‍ಕಾಲೋನಿ, ಅಗ್ರಹಾರ, ಪಾಂಡುರಂಗನಗರ, ವಿನೋಬನಗರ, ಭೀಮಸಂದ್ರ, ತಿಗಳರಬೀದಿ, ಶಿರಾಗೇಟ್ ಹೌಸಿಂಗ್‍ಬೋಡ್ ಪ್ರದೇಶ, ಚಂದ್ರಮೌಳೆಶ್ವರ ಬಡಾವಣೆ, ಬಂಡೇಪಾಳ್ಯ ಪ್ರದೇಶಗಳಲ್ಲಿ ಕೊರೊನಾ ಸೋಂಕಿತರು ಹೆಚ್ಚಿದ್ದು, ಪ್ರತೀ ಪ್ರದೇಶದಲ್ಲಿ 30-40ಕ್ಕೂ ಅಧಿಕ ಸಕ್ರಿಯ ಸೋಂಕಿತರು ಇರುವುದು ಪತ್ತೆಯಾಗಿದೆ. ಭೀಮಸಂದ್ರದ 3 ಬೀದಿಗಳನ್ನು ಕಂಟೇನ್ಮೆಂಟ್ ವಲಯವೆಂದು ಘೋಷಿಸಲು ಸಹ ಆಯುಕ್ತರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದ್ದಾರೆ.

ಆಂಬುಲೆನ್ಸ್ ಹಾದು ಹೋಗುತ್ತಲೇ ಆತಂಕ:

      ಇನ್ನೂ ನಗರದ ಪ್ರತೀ ಬಡಾವಣೆಗಳಲ್ಲೂ ದಿನಕ್ಕೆ ಮೂರ್ನಾಲ್ಕು ಆಂಬುಲೆನ್ಸ್‍ಗಳು ಪಯಣಿಸುವ ಸದ್ದೇ ಹೆಚ್ಚಾಗಿ ಕೇಳಿಸ ತೊಡಗಿದ್ದು, ಯಾರಿಗೆ ಏನಾಯ್ತಪ್ಪ ಎಂದು ಸ್ಥಳೀಯ ನಿವಾಸಿಗಳು ಬೆಚ್ಚಿಬೀಳುವಂತಾಗಿದೆ. ಅಲ್ಲದೇ ನಗರದ ಆಸ್ಪತ್ರೆಗೆ ದಾಖಲಾಗಲು ಹೋದವರಿಗೆ ಆಕ್ಸಿಜನ್ ಬೆಡ್‍ಗಳ ಕೊರತೆ ಹೆಚ್ಚಾಗಿ ಬಾಧಿಸುತ್ತಿದ್ದು ದಿಢೀರ್ ಸಾಯುವವರ ಸಂಖ್ಯೆ ಅಧಿಕವಾಗಿರುವುದು ಕಳವಳಕಾರಿಯೆನಿಸಿದೆ.

      ಮೃತರ ಸಂಬಂಧಿಕರು, ಪರಿಚಯಸ್ಥರು ವಾಟ್ಸಾಪ್, ಫೇಸ್‍ಬುಕ್ ಸ್ಟೇಟಸ್‍ಗಳಲ್ಲಿ ಅವರ ಫೋಟೋ ಹಾಕಿ ಶ್ರದ್ಧಾಂಜಲಿ ಎಂದು ಬರೆದುಕೊಂಡಾಗಲಷ್ಟೇ ಸತ್ತವರ ವಿಷಯ ತಿಳಿಯುಂತಾಗಿದ್ದು. ಅಯ್ಯೋ ನಮ್ಮ ಬೀದಿಯವರು ಹೋಗ್ಬಿಟ್ರ, ನಮ್ಮ ಪರಿಚಯಸ್ಥರು ಇವ್ರು, ಅಯ್ಯೋ ಛೇ ಹೀಗಾಗಬಾರದಿತ್ತು ಎಂದು ಬಡಾವಣೆ ವಾಸಿಗಳು ಮರುಕಪಡುತ್ತಿದ್ದಾರೆ.

      ಸ್ಯಾನಿಟೈಜ್, ಸ್ವಚ್ಛತೆಗೆ ಕ್ರಮ: ಕೊರೊನಾ ಸೋಂಕಿತರು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಬಡಾವಣೆಗಳ ಚರಂಡಿ ಸ್ವಚ್ಛತೆ, ಸ್ಯಾನಿಟೈಸೇಜನ್‍ಗೆ ಮಹಾನಗರಪಾಲಿಕೆ ಆಡಳಿತ ಕ್ರಮವಹಿಸಿದ್ದು, ಈ ವಾರ್ಡ್‍ಗಳಲ್ಲಿ ಹೆಚ್ಚು ಕೋವಿಡ್ ತಪಾಸಣೆ, ವ್ಯಾಕ್ಸಿನೇಶನ್‍ಗಳಿಗೆ ಒತ್ತುಕೊಟ್ಟಿರುವುದಾಗಿ ಪಾಲಿಕೆ ಆಯುಕ್ತೆ ರೇಣುಕಾ ಮಾಹಿತಿ ನೀಡಿದ್ದಾರೆ. ಆರೋಗ್ಯಾಧಿಕಾರಿಗಳು, ಪೌರಕಾರ್ಮಿಕರು ಸದರಿ ಬಡಾವಣೆಗಳಿಗೆ ತೆರಳಿ ಸ್ವಚ್ಛತೆ, ಜನಜಾಗೃತಿ ಮೂಡಿಸುತ್ತಿದ್ದು, ಸ್ಥಳೀಯ ಪಾಲಿಕೆ ಸದಸ್ಯರಾದ ಈ ಕಾರ್ಯಕ್ಕೆ ಕೈ ಜೋಡಿಸಿದ್ದಾರೆ. ಸ್ಯಾನಿಟೈಜ್‍ಗೆಂದೇ ಪಾಲಿಕೆ ವಾಹನದ ಜೊತೆಗೆ ಎರಡು ಪ್ರತ್ಯೇಕ ವಾಹನವನ್ನು ಬಾಡಿಗೆಗೆ ಪಡೆಯಲಾಗಿದೆ.

    ವಾರ್ಡ್‍ಗೊಬ್ಬರು ನೋಡಲ್ ಅಧಿಕಾರಿಗಳ ನೇಮಕ:

      ಜಿಲ್ಲೆಯ ಕೊರೊನಾ ಹಾಟ್‍ಸ್ಪಾಟ್ ಆಗಿ ತುಮಕೂರು ನಗರ ಪರಿವರ್ತಿತವಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಪರಿಸ್ಥಿತಿ ಮೇಲೆ ನಿಗಾ ವಹಿಸಲು ಪ್ರತೀವಾರ್ಡ್‍ಗೊಬ್ಬರು ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಿದ್ದಾರೆ.
 
ಇವು ಸದ್ಯದ ತುಮಕೂರಿನ ಕೊರೊನಾ ಹಾಟ್‍ಸ್ಪಾಟ್‍ಗಳು!

ಮಾರುತಿ ನಗರ
ಅಶೋಕ ನಗರ
ಜಯನಗರ ಪೂರ್ವ ಮತ್ತು ಪಶ್ಚಿಮ
ಎಸ್‍ಎಸ್.ಪುರಂ
ಎಸ್‍ಐಟಿ ಬಡಾವಣೆ,
ವಿಜಯನಗರ
ಗಾಂಧಿ ನಗರ ಮತ್ತು ಸಿಎಸ್‍ಐ ಬಡಾವಣೆ,
ಸರಸ್ವತಿಪುರಂ,
ಅಮರಜ್ಯೋತಿನಗರ
ಗೂಡ್‍ಶೆಡ್‍ಕಾಲೋನಿ
ಚಿಕ್ಕಪೇಟೆ ಅಗ್ರಹಾರ
ಪಾಂಡುರಂಗನಗರ
ವಿನೋಬನಗರ
ಭೀಮಸಂದ್ರ
ತಿಗಳರಬೀದಿ
ಶಿರಾಗೇಟ್ ಹೌಸಿಂಗ್‍ಬೋರ್ಡ್
ಚಂದ್ರಮೌಳೆಶ್ವರ ಬಡಾವಣೆ
ಬಂಡೇಪಾಳ್ಯ

ಸೋಂಕಿಗಿಲ್ಲ ಬಡವರು, ಸಿರಿವಂತರೆಂಬ ಭೇದ

ಕೊರೊನಾ ಹಾಟ್‍ಸ್ಪಾಟ್‍ಗಳೆಂದು ಗುರುತಿಸಲ್ಪಟ್ಟಿರುವ ನಗರದ ಗಾಂಧಿನಗರ, ಸಿಐಎಸ್‍ಐ ಬಡಾವಣೆ, ಸೋಮೇಶ್ವರಪುರಂ, ಮಾರುತಿನಗರ, ಎಸ್‍ಐಟಿ, ಅಶೋಕನಗರ, ಚಂದ್ರಮೌಳೇಶ್ವರ ಬಡಾವಣೆ, ಸರಸ್ವತಿಪುರಂ, ಜಯನಗರ, ವಿಜಯನಗರ ಪ್ರದೇಶಗಳಲ್ಲಿ ಹಾಲಿ ಶಾಸಕರು, ಸಂಸದರು, ಮಾಜಿಶಾಸಕರು, ನಗರದ ಗಣ್ಯರು, ವಿದ್ಯಾಸಂಸ್ಥೆಗಳ ಪ್ರಮುಖರು, ಅಧಿಕಾರಿಗಳು, ಜಿಪಂ ತಾಪಂ ಹಾಲಿ ಮಾಜಿ ಸದಸ್ಯರುಗಳು ಹೀಗೆ ಪ್ರತಿಷ್ಠಿತರು ವಾಸಿಸುತ್ತಿದ್ದು, ಹೌಸಿಂಗ್‍ಬೋರ್ಡ್, ಬಂಡೇಪಾಳ್ಯ, ಪಾಡುರಂಗನಗರ, ವಿನೋಬನಗರದಲ್ಲಿ ಬಡ ಮಧ್ಯಮವರ್ಗದವರೇ ಹೆಚ್ಚಾಗಿದ್ದಾರೆ. ಸಿರಿವಂತರಿರಲೀ, ಬಡ ಮಧ್ಯಮವರ್ಗದವರಿರಲೀ ಯಾವುದೇ ಭೇದವೆಣಿಸದೆ ಸೋಂಕು ಹಬ್ಬುತ್ತಿದ್ದು, ಎಚ್ಚರಿಕೆ, ನಿಯಮ ಪಾಲನೆಯೊಂದೇ ಸೋಂಕನ್ನು ತಡೆಯಲಿರುವ ಏಕೈಕ ಮಾರ್ಗವೆಂದು ಸಾಬೀತಾಗಿದೆ.
 

      ಹಾಟ್‍ಸ್ಪಾಟೆಗಳೆಂದು ಗುರುತಿಸಲ್ಪಟ್ಟಿರುವ ತುಮಕೂರಿನ 16 ಬಡಾವಣೆಯಲ್ಲಿ ಸ್ವಚ್ಛತೆ ಸ್ಯಾನಿಟೈಜ್ ಮಾಡಲು ಆದ್ಯತೆ ಕೊಟ್ಟಿದ್ದುಇತರೆ ವಾರ್ಡ್‍ಗಳ ಸ್ವಚ್ಛತೆಗೂ ಕ್ರಮವಹಿಸಲಾಗುತ್ತಿದೆ. ಅಂತೆಯೇ ಜಿಲ್ಲಾಡಳಿತ ಪ್ರತೀ ವಾರ್ಡ್‍ಗೆ ಒಬ್ಬರು ನೋಡಲ್ ಅಧಿಕಾರಿಯನ್ನು ನೇಮಿಸಿದ್ದು, ಅವರು ಸಹ ವಾರ್ಡ್ ವೀಕ್ಷಣೆ ಮಾಡಿ ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮವಹಿಸಿದ್ದಾರೆ.ಬುಗುಡನಹಳ್ಳಿ ಜಲಸಂಗ್ರಹಗಾರದಲ್ಲಿ ದುರಸ್ಥಿಯಾಗಿದ್ದ ಒಂದು ಮೋಟಾರ್ ಸಹ ಸರಿಪಡಿಸಿದ್ದು, ನಗರದ ನೀರು ಸರಬರಾಜಿಗೂ ಯಾವುದೇ ತೊಂದರೆಯಿಲ್ಲ. ನಾಗರಿಕರು ವೈಯಕ್ತಿಕವಾಗಿ ಸ್ವಚ್ಛವಾಗಿರುವ ಜೊತೆಗೆ ಕೋವಿಡ್ ಕರ್ಫ್ಯೂ ನಿಯಮ ಕಡ್ಡಾಯ ಪಾಲಿಸಿ ಸೋಂಕು ನಿಯಂತ್ರಣಕ್ಕೆ ಸಹಕರಿಸಬೇಕು.

-ರೇಣುಕಾ, ಮಹಾನಗರ ಪಾಲಿಕೆ ಆಯುಕ್ತರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 ಎಸ್.ಹರೀಶ್ ಆಚಾರ್ಯ

Recent Articles

spot_img

Related Stories

Share via
Copy link
Powered by Social Snap