ನವದೆಹಲಿ:
ಜಗತ್ತಿನ ಶಕ್ತಿಯುತ ಪಾಸ್ ಪೋಟ್ ಗಳ ಪಟ್ಟಿಯನ್ನು ಹೆನ್ಲಿ ಪಾಸ್‌ಪೋರ್ಟ್ ಸೂಚ್ಯಂಕ ಪ್ರಕಟಿಸಿದೆ.ಶ್ರೇಯಾಂಕವು ಇಂಟರ್ನ್ಯಾಷನಲ್ ಏರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ (IATA) ದ ಡೇಟಾವನ್ನು ಆಧರಿಸಿದ್ದು, IATA ಪ್ರಪಂಚದಾದ್ಯಂತ ಪ್ರಯಾಣ ಮಾಹಿತಿಯ ಅತ್ಯಂತ ವ್ಯಾಪಕವಾದ ಮತ್ತು ನಿಖರವಾದ ಡೇಟಾಬೇಸ್ ನ್ನು ಹೊಂದಿದೆ.
ಈ ಸೂಚ್ಯಂಕದ ಪ್ರಕಾರ, ಭಾರತ ತನ್ನ ಶ್ರೇಯಾಂಕವನ್ನು ಸೆನೆಗಲ್ ಮತ್ತು ತಜಿಕಿಸ್ತಾನ್ ನಂತಹ ರಾಷ್ಟ್ರಗಳೊಂದಿಗೆ ಹಂಚಿಕೊಂಡಿದೆ. ಭಾರತದ ಪಾಸ್ಪೋರ್ಟ್ ಮೂಲಕ 58 ದೇಶಗಳಿಗೆ ವೀಸಾ ಮುಕ್ತ ಪ್ರವೇಶ ಸಾಧ್ಯವಿದೆ. ಸಿಂಗಾಪುರ ಪಾಸ್ಪೋರ್ಟ್ ದೇಶದಲ್ಲಿ ಅತಿ ಶಕ್ತಿಶಾಲಿ ಪಾಸ್ಪೋರ್ಟ್ ಆಗಿದ್ದು, ವಿಶ್ವಾದ್ಯಂತ 195 ದೇಶಗಳಿಗೆ ವೀಸಾ ಮುಕ್ತ ಪ್ರವೇಶವನ್ನು ಕಲ್ಪಿಸುತ್ತದೆ. ಫ್ರಾನ್ಸ್, ಇಟಾಲಿ, ಜರ್ಮನಿ, ಸ್ಪೇನ್ ಜಪಾನ್ ನೊಂದಿಗೆ 2 ನೇ ಸ್ಥಾನ ಹಂಚಿಕೊಂಡಿದ್ದು, 192 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶ ಕಲ್ಪಿಸುತ್ತವೆ.
3 ನೇ ಸ್ಥಾನದಲ್ಲಿ ಆಸ್ಟ್ರಿಯಾ, ಫಿನ್ ಲ್ಯಾಂಡ್, ಐರ್ಲ್ಯಾಂಡ್, ಲಕ್ಸೆಂಬರ್ಗ್, ನೆದರ್ಲ್ಯಾಂಡ್ಸ್, ದಕ್ಷಿಣ ಕೊರಿಯಾ ಮತ್ತು ಸ್ವೀಡನ್ ದೇಶಗಳಿದ್ದು, 191 ರಾಷ್ಟ್ರಗಳಿಗೆ ವೀಸಾ ಮುಕ್ತ ಪ್ರವೇಶ ನೀಡುತ್ತಿವೆ. ನ್ಯೂಜಿಲೆಂಡ್, ನಾರ್ವೆ, ಬೆಲ್ಜಿಯಂ, ಡೆನ್ಮಾರ್ಕ್ ಮತ್ತು ಸ್ವಿಟ್ಜರ್ಲೆಂಡ್ ಜೊತೆಗೆ ಯುನೈಟೆಡ್ ಕಿಂಗ್‌ಡಮ್ ನಾಲ್ಕನೇ ಸ್ಥಾನದಲ್ಲಿದೆ. ಆಸ್ಟ್ರೇಲಿಯಾ ಮತ್ತು ಪೋರ್ಚುಗಲ್ 5 ನೇ ಸ್ಥಾನವನ್ನು ಹಂಚಿಕೊಂಡರೆ, ಯುನೈಟೆಡ್ ಸ್ಟೇಟ್ಸ್ 186 ದೇಶಗಳಿಗೆ ವೀಸಾ ಮುಕ್ತ ಪ್ರವೇಶದೊಂದಿಗೆ 8 ಸ್ಥಾನಕ್ಕೆ ಇಳಿದಿದೆ.
ಭಾರತದ ಪಾಸ್‌ಪೋರ್ಟ್ ಪಟ್ಟಿಯಲ್ಲಿ 82 ನೇ ಸ್ಥಾನದಲ್ಲಿದೆ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಂತಹ ಜನಪ್ರಿಯ ಸ್ಥಳಗಳು ಸೇರಿದಂತೆ 58 ದೇಶಗಳಿಗೆ ಭಾರತದ ಪಾಸ್ಪೋರ್ಟ್ ಮೂಲಕ ವೀಸಾ ಇಲ್ಲದೆ ಪ್ರಯಾಣಿಸಲು ನಾಗರಿಕರಿಗೆ ಅವಕಾಶವಿದೆ. ನೆರೆಯ ಪಾಕಿಸ್ತಾನವು 100 ನೇ ಸ್ಥಾನದಲ್ಲಿದೆ, ಪಾಸ್‌ಪೋರ್ಟ್ ಹೊಂದಿರುವವರಿಗೆ 33 ದೇಶಗಳಿಗೆ ಪ್ರವೇಶವನ್ನು ಒದಗಿಸುತ್ತದೆ. ಪಟ್ಟಿಯ ಕೆಳಭಾಗದಲ್ಲಿ ಅಫ್ಘಾನಿಸ್ತಾನವು 26 ಸ್ಥಳಗಳಿಗೆ ಸುಲಭ ಪ್ರವೇಶವನ್ನು ಹೊಂದಿದೆ.
