ಅಕಾಲಿಕ ಮಳೆ: 99,358 ಹೆಕ್ಟೇರ್ ಕೃಷಿ ಬೆಳೆನಷ್ಟ

ತುಮಕೂರು:

ವಾಸ್ತವಿಕವಾಗಿ 6747.25 ಕೋಟಿ ನಷ್ಟ | ಗೈಡ್‍ಲೈನ್ಸ್ ಆಧಾರದಲ್ಲಿ 536.24 ಕೋಟಿ ನಷ್ಟ ಅಂದಾಜ 

               ಕಳೆದ ತಿಂಗಳು ಸುರಿದ ಅಕಾಲಿಕ ಮಳೆಯಿಂದಾಗಿ ಜಿಲ್ಲೆಯಲ್ಲಿ ಒಟ್ಟು 99339 ಹೆಕ್ಟೇರ್‍ನಷ್ಟು ಬೆಳೆನಷ್ಟ ಆಗಿದ್ದು, ಎನ್‍ಡಿಆರ್‍ಎಫ್ ಗೈಡ್‍ಲೈನ್ಸ್ ಅನುಸಾರ 536.24 ಕೋಟಿ ಬೆಳೆನಷ್ಟ ಆಗಿದೆ ಎಂದು ಜಿಲ್ಲಾಡಳಿತ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಆದರೆ ವಾಸ್ತವಿಕ ಬೆಳೆಯಿಡಲು ಆಗುವ ವೆಚ್ಚದ ಲೆಕ್ಕಾಚಾರದಲ್ಲಿÉ ಜಿಲ್ಲೆಯಲ್ಲಿ 6747.25 ಕೋಟಿ ಬೆಳೆ ನಷ್ಟವಾಗಿದ್ದು, ಗೈಡ್‍ಲೈನ್ಸ್ ಪ್ರಕಾರ ಪ್ರತೀ ಹೆಕ್ಟೇರ್‍ಗೆ 6800ರೂಪಾಯಿಯಂತೆ ಲೆಕ್ಕಹಾಕಿ 536.24 ಕೋಟಿ ನಷ್ಟ ಆಗಿದೆಯೆಂದು ಅಂದಾಜಿಸಿ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಚಿ.ನಾಹಳ್ಳಿಯಲ್ಲಿ ಅತೀ ಹೆಚ್ಚು, ಪಾವಗಡದಲ್ಲಿ ಅತೀ ಕಡಿಮೆ: ಜಿಲ್ಲಾ ಉಸ್ತುವಾರಿ ಸಚಿವ ಜೆ.ಸಿ.ಮಾಧುಸ್ವಾಮಿ ತವರು ಚಿಕ್ಕನಾಯಕನಹಳ್ಳಿ ತಾಲೂಕಲ್ಲೇ ಅತೀ ಹೆಚ್ಚು ಹಾನಿ ಸಂಭವಿಸಿದೆ ಎಂದು ಕೃಷಿ ಕಂದಾಯ ಇಲಾಖೆಯವರು ವರದಿ ಮಾಡಿದ್ದು, 2ನೇ ಅಧಿಕನಷ್ಟ ಕುಣಿಗಲ್ ತಾಲೂಕಿನದ್ದಾಗಿದೆ. ಅತೀ ಕಡಿಮೆ ಹಾನಿ ಪಾವಗಡ ತಾಲೂಕಿನಲ್ಲಾಗಿದೆ. ಆದರೆ ಜಿಲ್ಲೆಗೆ ಕಳೆದ ವಾರ ದಿಢೀರ್ ಭೇಟಿಕೊಟ್ಟ ಕೇಂದ್ರ ತಂಡಅತೀ ಹೆಚ್ಚು ಹಾನಿಗೊಳಗಾದ ಪ್ರದೇಶವಾದ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಭೇಟಿಕೊಡದಿರುವುದು, ಕುಣಿಗಲ್‍ಗೂ ನೆಪ ಮಾತ್ರಕ್ಕೆಂಬಂತೆ ಭೇಟಿಕೊಟ್ಟಿದ್ದು ಬೆಳೆನಷ್ಟ ಪರಿಹಾರ ಸಮರ್ಪಕವಾಗಿ ಸಿಗುವುದೇ ಎಂಬ ಅನುಮಾನಕ್ಕೀಡುಮಾಡಿದೆ.

ರಾಗಿಗೆ ಅಧಿಕ ಹಾನಿ:

ಜಿಲ್ಲೆಯಲ್ಲಿ ಹತ್ತು ತಾಲೂಕಿನಲ್ಲಿ ಬೆಳೆದಿದ್ದ ಕೃಷಿ ಬೆಳೆಗಳ ಪೈಕಿ 87518 ಹೆಕ್ಟೇರ್‍ನಲ್ಲಿ ರಾಗಿ, 658 ಹೆಕ್ಟೇರ್‍ನಷ್ಟು ಭತ್ತ, 1502 ಹೆಕ್ಟೇರ್‍ನಷ್ಟು ಶೇಂಗಾ, 7769 ಹೆಕ್ಟೇರ್‍ನಷ್ಟು ಮೆಕ್ಕೇಜೋಳ ಹಾಗೂ ವಿವಿಧ ಕಾಳಿನ ಬೆಳೆಗಳು 828 ಹೆಕ್ಟೇರ್‍ನಲ್ಲಿ ಹಾನಿಗೀಡಾಗಿದ್ದು, ಒಟ್ಟು ಬೆಳೆಗಳಲ್ಲಿ ರಾಗಿ ಅಧಿಕ ಹಾನಿಗೀಡಾದ ಬೆಳೆಯೆನಿಸಿದೆ.

ಜಾನುವಾರು ಮೇವಿಗೂ ಉಪಯೋಗವಿಲ್ಲ:

ಕಟಾವಿನ ಹಂತಕ್ಕೆ ತಲುಪುತ್ತಿದ್ದ ರಾಗಿ ಅಕಾಲಿಕ ಮಳೆಗೆ ಬಾಗಿ ಜಮೀನಿನಲ್ಲಿ ಕೊಳೆತಿದ್ದು, ಶೇಂಗಾ ಸಹ ಮಳೆಗೆ ಬೂಸ್ಟ್ ಹಿಡಿಯುವ ಸ್ಥಿತಿ ತಲುಪಿದೆ. ಕೊಳೆತ ರಾಗಿ, ಜೋಳದ ಕಡ್ಡಿ ಜಾನುವಾರುಗಳು ತಿನ್ನಲು ಯೋಗವಲ್ಯದಂತಾಗಿದ್ದು ಬೇಸಿಗೆಯಲ್ಲಿ ಜಾನುವಾರುಗಳಿಗೂ ಮೇವಿನ ಕೊರತೆ ಉದ್ಬವಿಸುವ ಆತಂಕ ಎದುರಾಗಿದೆ.

ಸಾಲದ ಬಡ್ಡಿ ಕಟ್ಟಲು ಸಾಲದು ಪರಿಹಾರ:

ಜನಪ್ರತಿನಿಧಿಗಳು, ಅಧಿಕಾರಿಗಳು ಅಧಿವೇಶನ, ಚುನಾವಣೆ ಗುಂಗಿನಲ್ಲಿದ್ದು, ರೈತರ ಕಷ್ಟ ಕೇಳೋರಿಲ್ಲ ಎಂಬ ಅಳಲು ಅನ್ನಧಾತನದ್ದಾಗಿದೆ. ಲಕ್ಷಾಂತರ ಸಾಲ ಮಾಡಿ ಸಾವಿರ ರೂಪದಲ್ಲಿ ಪರಿಹಾರ ಪಡೆಯುವುದರಿಂದ ಸಾಲದ ಬಡ್ಡಿ ಕಟ್ಟಲು ಎಟಕುವುದಿಲ್ಲ ಎಂಬುದು ರೈತರ ಅಳಲಾಗಿದ್ದು, ಬೆಳೆನಷ್ಟದಿಂದ ತನ್ನ ಮನೆಗೆ ತಾನೇ ರಾಗಿ, ಜೋಳ ಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಾಸ್ತವಿಕನಷ್ಟಕ್ಕೂ, ಗೈಡಲೈನ್ಸ್ ನಷ್ಟದ ಲೆಕ್ಕಕ್ಕೂ ಅಜಗಜಾಂತರ

ಎರಡೂವರೆ ಎಕರೆ ಪ್ರದೇಶದ ಪ್ರತೀ ಹೆಕ್ಟೇರ್‍ಗೂ ಎನ್‍ಡಿಆರ್‍ಎಫ್ ನಿಯಮಾನುಸಾರ ಕೇವಲ 6800 ರೂಪಾಯಿ ಪರಿಹಾರ ಮಾತ್ರ ದೊರೆಯಲಿದೆ. ಇದು ಅತೀ ಕಡಿಮೆ ಪರಿಹಾರಧನವೆಂಬ ರೈತರ ಆಕ್ರೋಶದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಎನ್‍ಡಿಆರ್‍ಎಫ್ ಮೊತ್ತದಷ್ಟೇ ತಾನೂ ಪರಿಹಾರ ಮೊತ್ತ ಬಿಡುಗಡೆಮಾಡುವುದಾಗಿ ಘೋಷಿಸಿದೆ ಇನ್ನೂ ಆದೇಶ ಹೊರಬರಬೇಕಿದೆ. ಮುಂದೆ ಆದೇಶವಾಗಿ ಕೇಂದ್ರ ಮತ್ತು ರಾಜ್ಯ ಸರಕಾರದ ಪರಿಹಾರವೂ ಸೇರಿ 6800+6800= 13,600 ರೂಪಾಯಿ ದೊರೆತರೂ ವಾಸ್ತವಿಕ ನಷ್ಟ ಪರಿಹಾರಕ್ಕೂ, ಗೈಡ್‍ಲೈನ್ಸ್ ನಷ್ಟದ ಪರಿಹಾರದಲ್ಲಿ ಅಜಗಜಾಂತರ ವ್ಯತ್ಯಾಸವಾಗಲಿದೆ.

ತಾಲೂಕುವಾರು ಬೆಳೆನಷ್ಟ ಮಾಹಿತಿ (ಹೆಕ್ಟೇರ್, ಕೋಟಿಗಳಲ್ಲಿ)

ಚಿ.ನಾ.ಹಳ್ಳಿ      16928 ಹೆ.       91.09ಕೋಟಿ
ಗುಬ್ಬಿ            12064 ಹೆ.       65.21ಕೋಟಿ
ಕುಣಿಗಲ್        18605 ಹೆ.       100.98ಕೋಟಿ
ತಿಪಟೂರು       13617 ಹೆ.      73.91 ಕೋಟಿ
ತುಮಕೂರು     6076 ಹೆ.         33.02 ಕೋಟಿ
ತುರುವೇಕೆರೆ    9167 ಹೆ.        49.75 ಕೋಟಿ
ಕೊರಟಗೆರೆ     7700 ಹೆ.        40.63 ಕೋಟಿ
ಮಧುಗಿರಿ       6845 ಹೆ.        36.14 ಕೋಟಿ
ಪಾವಗಡ      270.1 ಹೆ.        1.95 ಕೋಟಿ
ಸಿರಾ          8065 ಹೆ.        43.57 ಕೋಟಿ

           –   ಎಸ್.ಹರೀಶ್ ಆಚಾರ್ಯ

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link