ಮೈತ್ರಿಗೆ ಮಣೆ ಹಾಕದ ತುಮಕೂರು ಮತದಾರ

ತುಮಕೂರು:

   ಬಹು ನಿರೀಕ್ಷೆಯೊಂದಿಗೆ ತುಮಕೂರು ಕ್ಷೇತ್ರದಲ್ಲಿ ಸ್ಪರ್ಧೆಯೊಡ್ಡಿದ್ದ ಮೈತ್ರಿ ಅಭ್ಯರ್ಥಿಯನ್ನು ತಿರಸ್ಕರಿಸುವ ಮೂಲಕ ತುಮಕೂರು ಮತದಾರ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳಿಗೆ ಮಂಗಳಾರತಿ ಮಾಡಿದ್ದಾನೆ.

     ತುಮಕೂರು ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಇದೇ ಪ್ರಥಮ ಬಾರಿಗೆ ಈ ಕ್ಷೇತ್ರದಿಂದ ಕಾಂಗ್ರೆಸ್ ಚಿನ್ಹೆ ಚುನಾವಣೆಯಲ್ಲಿ ಕಾಣದಾಗಿತ್ತು. ಬದಲಿಗೆ ಜೆಡಿಎಸ್ ಚಿಹ್ನೆಗೆ ಮತ ಹಾಕಬೇಕಿತ್ತು. ಕಾಂಗ್ರೆಸ್ ಹಾಗೂ ಜೆಡಿಎಸ್ ಎರಡೂ ಪಕ್ಷಗಳು ಜಿಲ್ಲೆಯಲ್ಲಿ ಪ್ರಬಲ. ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಂದ ಹಿಡಿದು ವಿಧಾನಸಭೆಯ ಚುನಾವಣೆಯವರೆಗೆ ಎರಡೂ ಪಕ್ಷಗಳು ತನ್ನದೇ ಆದ ಅಸ್ತಿತ್ವವನ್ನು ತೋರ್ಪಡಿಸಿಕೊಂಡು ಬಂದಿವೆ.

    ಈ ಹಿನ್ನೆಲೆಯನ್ನು ಗಮನಿಸಿದರೆ 11 ವಿಧಾನಸಭಾ ಕ್ಷೇತ್ರಗಳ ಪೈಕಿ 2018ರವರೆಗೆ ಕಾಂಗ್ರೆಸ್ ಮತ್ತು ಬಿಜೆಪಿಯೇ ಇಲ್ಲಿ ಪ್ರಾಬಲ್ಯತೆ ಮೆರೆದಿದೆ. 2018ರ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಬಿಜೆಪಿ ನಾಲ್ಕು ವಿಧಾನಸಭಾ ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ.

     ಈಗಲೂ ಜಿಲ್ಲೆಯಲ್ಲಿ ಹಲವು ಕಡೆ ಜೆಡಿಎಸ್ ಹಿಡಿತವಿದೆ. ಆ ಪಕ್ಷದ ಶಾಸಕರು ಮೂರು ಕಡೆಗಳಲ್ಲಿದ್ದಾರೆ. ಈ ಹಿನ್ನೆಲೆಯನ್ನು ಗಮನಿಸಿಯೇ ದೇವೇಗೌಡರು ಇಲ್ಲಿ ಮತ್ತೊಮ್ಮೆ ಸ್ಪರ್ಧೆಗೆ ಇಳಿದಿದ್ದರು. ಆದರೆ ಲೆಕ್ಕಾಚಾರಗಳು ಉಲ್ಟಾ ಆಗಿವೆ. ಯಾವ ನಿರೀಕ್ಷೆಯೊಂದಿಗೆ ಇಲ್ಲಿ ಸ್ಪರ್ಧೆ ಮಾಡಿದ್ದರೋ ಅಂತಹ ನಿರೀಕ್ಷಿತ ಫಲಿತಾಂಶ ಇಲ್ಲಿ ಸಾಧ್ಯವಾಗಿಲ್ಲ. ಜಾತಿ ಲೆಕ್ಕಾಚಾರಗಳಾಗಲಿ, ಜೆಡಿಎಸ್ ಪ್ರಾಬಲ್ಯವಾಗಲಿ ಯಾವುದೂ ಕೆಲಸಕ್ಕೆ ಬಂದಂತೆ ಕಾಣುತ್ತಿಲ್ಲ. ಇವೆಲ್ಲವನ್ನೂ ಮೀರಿದ ಫಲಿತಾಂಶ ಇಲ್ಲಿ ವ್ಯಕ್ತವಾಗಿದೆ.

      ವಿಫಲವಾದ ಮೈತ್ರಿ: ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಇಲ್ಲಿ ಫಲ ಕೊಟ್ಟಂತೆ ಕಾಣುತ್ತಿಲ್ಲ. ನಾಮಪತ್ರ ಸಲ್ಲಿಸಿದ ನಂತರ ಉಭಯ ಪಕ್ಷಗಳ ಕೆಲವು ನಾಯಕರು ಬಹಿರಂಗವಾಗಿ ವೇದಿಕೆಯಲ್ಲಿ ಕಾಣಿಸಿಕೊಂಡರಾದರೂ ಅಖಾಡಕ್ಕೆ ಇಳಿದು ಕೆಲಸ ಮಾಡುವ ಕಾರ್ಯಕ್ಕೆ ಮುಂದಾಗಲಿಲ್ಲ ಎಂಬ ವ್ಯಾಖ್ಯಾನಗಳು ಕೇಳಿಬರುತ್ತಿವೆ.

      ಕಾಂಗ್ರೆಸ್‍ನವರನ್ನು ಮನವೊಲಿಸುವ, ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಕಾರ್ಯ ಜೆಡಿಎಸ್ ವಲಯದಲ್ಲಿ ಆಗಲೇ ಇಲ್ಲ. ಕಾರ್ಯಕರ್ತರನ್ನು ಒಗ್ಗೂಡಿಸುವ ಪ್ರಯತ್ನ ಕಾಂಗ್ರೆಸ್ ಮುಖಂಡರಿಂದಲೂ ಆಗಲಿಲ್ಲ. ಲೋಕಸಭಾ ಚುನಾವಣೆಯಲ್ಲಿ ಇದು ಸಾಧ್ಯವಾಗದ ಮಾತು. ಮುಖಂಡರುಗಳ ಮಾತುಗಳನ್ನು ಕೇಳುವ ಸ್ಥಿತಿಯಲ್ಲಿ ಇಲ್ಲಿನ ಕಾರ್ಯಕರ್ತರು ಇರಲಿಲ್ಲ. ಇಲ್ಲಿ ಮಾತ್ರವಲ್ಲ, ಮಂಡ್ಯ ಸೇರಿದಂತೆ ಬಹಳಷ್ಟು ಕಡೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಲ್ಲಿಯೇ ಬಹಳಷ್ಟು ಅಸಮಾಧಾನ ವ್ಯಕ್ತವಾಗಿತ್ತು. ಮೈತ್ರಿಗೆ ಅಪಸ್ವರ ಎದುರಾಗಿತ್ತು.

      ಹಾಸನದಲ್ಲಿ ಮೈತ್ರಿ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡ ರೀತಿಯಲ್ಲಿ ಮಂಡ್ಯ ಹಾಗೂ ತುಮಕೂರಿನಲ್ಲಿ ನಡೆಯಲಿಲ್ಲ. ತುಮಕೂರಿನಲ್ಲಿ ಮಾತ್ರ ಮೈತ್ರಿಗಿಂತ ಹೆಚ್ಚಾಗಿ ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ವಿರೋಧಿ ಅಲೆಯೇ ಹೆಚ್ಚಾಯಿತು. ನಮಗೆ ಟಿಕೆಟ್ ಸಿಕ್ಕಿದ್ದರೆ ಖಂಡಿತ ಗೆಲುವು ಸಾಧಿಸುತ್ತಿದ್ದೆವು ಎಂಬ ಕಾಂಗ್ರೆಸ್ ಹೇಳಿಕೆಗಳ ಹಿಂದೆ ಒಂದಷ್ಟು ಸತ್ಯವೂ ಅಡಗಿರಬಹುದು.

       ದೇವೇಗೌಡರು ಮಾಜಿ ಪ್ರಧಾನಿಯಾಗಿರಬಹುದು, ಜೆಡಿಎಸ್ ವರಿಷ್ಠರೂ ಆಗಿರಬಹುದು. ಆದರೆ ತುಮಕೂರಿನ ಮತದಾರ ಅದೇಕೋ ಅವರನ್ನು ಒಪ್ಪಿಕೊಳ್ಳುವ ಮನಸ್ಸು ಮಾಡಲಿಲ್ಲ. ಜಾತಿ ರಾಜಕಾರಣವು ಈ ಬಾರಿ ಪ್ರಭಾವ ಬೀರಿದಂತೆ ಕಂಡುಬರಲಿಲ್ಲ. 2014 ರ ಚುನಾವಣೆಯಲ್ಲಿ ಒಕ್ಕಲಿಗ ಪ್ರಾಬಲ್ಯ ಕೆಲಸ ಮಾಡಿದ್ದರಿಂದಲೇ ಮುದ್ದಹನುಮೇಗೌಡರ ಗೆಲುವಿಗೆ ಕಾರಣವಾಗಿತ್ತು. ಜೆಡಿಎಸ್ ಶಾಸಕರಿರುವ ಕ್ಷೇತ್ರಗಳಲ್ಲೂ ಮುದ್ದಹನುಮೇಗೌಡರು ಸಾಕಷ್ಟು ಮತಗಳ ಮುನ್ನಡೆ ಕಾಯ್ದುಕೊಂಡಿದ್ದರೆಂದರೆ ಅದರ ಆಂತರ್ಯ ಏನೆಂಬುದನ್ನು ಬಿಡಿಸಿ ಹೇಳಬೇಕಿಲ್ಲ.

       ಇದೇ ವಿಷಯ 2019ರ ಚುನಾವಣೆಯ ಸಂದರ್ಭದಲ್ಲಿಯೂ ಎದುರಾಯಿತು. ಅಂದಿನ ರಾಜಕೀಯ ಗುಟ್ಟನ್ನು ಕೆಲವರು ಬಹಿರಂಗವಾಗಿಯೇ ಹೇಳಿಕೊಳ್ಳುತ್ತಾ ಮುಖಂಡರುಗಳ ಮುಖದಲ್ಲಿ ನೀರಿಳಿಸಿದ್ದೂ ಉಂಟು. ದೇವೇಗೌಡರು ತನ್ನ ಕ್ಷೇತ್ರವನ್ನು ಮೊಮ್ಮಗನಿಗೆ ಬಿಟ್ಟುಕೊಟ್ಟು ಇಲ್ಲಿ ಕುಟುಂಬ ರಾಜಕಾರಣ ಮಾಡಲು ಬಂದಿದ್ದಾರೆ. ಕೊನೆಯ ಹಂತದ ಈ ಚುನಾವಣೆಯನ್ನು ಇಲ್ಲಿಯೇ ಏಕೆ ಆರಿಸಿಕೊಳ್ಳಬೇಕಾಗಿತ್ತು? ಇನ್ನಾವುದೂ ಸ್ಥಳ ಇರಲಿಲ್ಲವೆ ಎಂಬ ಆರೋಪಗಳಿಂದ ಹಿಡಿದು ಹಲವು ನಕಾರಾತ್ಮಕ ಪ್ರಶ್ನೆಗಳು ಕ್ಷೇತ್ರದಲ್ಲಿ ಹುಟ್ಟಿಕೊಂಡವು. ಇದೆಲ್ಲವನ್ನೂ ಮೀರಿ ಕೆಲಸ ಮಾಡಿದ್ದೆಂದರೆ ನೀರಾವರಿ ವಿಷಯ.

      ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಹರಿಯದೇ ಇರಲು ದೇವೇಗೌಡರ ಹಾಗೂ ಅವರ ಕುಟುಂಬ ಕಾರಣ ಎಂಬ ಭಾವನಾತ್ಮಕ ವಿಷಯಗಳು ಹೆಚ್ಚು ಚರ್ಚೆಗೆ ಬಂದವು. ಮೈತ್ರಿಯಲ್ಲಿ ಮೂಡದ ಒಮ್ಮತ, ಭಾವನಾತ್ಮಕ ವಿಷಯಗಳು, ಪಕ್ಷದೊಳಗೆ ಗುಂಪುಗಾರಿಕೆ ಇವೆಲ್ಲವೂ ಕ್ರಮೇಣ ಮೈತ್ರಿ ಅಭ್ಯರ್ಥಿಯ ವಿರುದ್ಧವಾಗಿಯೇ ನಿಲ್ಲತೊಡಗಿದವು.

ನೋಟಾಗೆ 10285 ಮತಗಳು

        ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ನೋಟಾಗೆ 10285 ಮತಗಳು ಲಭ್ಯವಾಗಿವೆ. ಕಳೆದ ಬಾರಿ 12934 ಮತಗಳು ನೋಟಾಗೆ ಬಿದ್ದಿದ್ದವು. ಕಣದಲ್ಲಿರುವ ಅಭ್ಯರ್ಥಿಗಳು ಯಾರೂ ಇಷ್ಟವಿಲ್ಲ ಎಂದಾದರೆ ನೋಟಾ (ಮೇಲ್ಕಂಡ ಯಾರಿಗೂ ನನ್ನ ಮತವಿಲ್ಲ) ಬಳಸಲು 2014ರ ಚುನಾವಣೆಯ ಮೂಲಕ ಹೊಸ ವ್ಯವಸ್ಥೆಯನ್ನು ಚುನಾವಣಾ ಆಯೋಗ ಅಸ್ತಿತ್ವಕ್ಕೆ ತಂದಿತ್ತು. ಅಂದರೆ, ಎಲ್ಲ ಮತದಾರರನ್ನು ಮತಗಟ್ಟೆಯತ್ತ ಸೆಳೆಯುವುದೇ ಇದರ ಉದ್ದೇಶ. ಆದರೆ ಆರಂಭದ ಪ್ರಥಮ ಬಾರಿ ಜಾರಿಗೆ ತಂದ ಸಂದರ್ಭದಲ್ಲೇ 12934 ಮತಗಳು ನೋಟಾಗೆ ಬಿದ್ದಿದ್ದರಿಂದ ಆತಂಕವೂ ಎದುರಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap