ಬೆಂಗಳೂರು :
20 ಸಾವಿರ ಮಂದಿ ಮಲೇರಿಯಾ ರೋಗಕ್ಕೆ ಪ್ರತಿವರ್ಷ ಭಾರತದಲ್ಲಿ ಜೀವ ತೆರುತ್ತಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2021ರಲ್ಲಿ ವಿಶ್ವದೆಲ್ಲೆಡೆಯಿಂದ 21.7 ಕೋಟಿ ಪ್ರಕರಣಗಳು ವರದಿಯಾಗಿವೆ ಮತ್ತು 6 ಲಕ್ಷಕ್ಕೂ ಹೆಚ್ಚು ಮಂದಿ ಈ ಸೋಂಕಿಗೆ ಬಲಿಯಾಗಿದ್ದಾರೆ.
ಇದರಲ್ಲಿ ಆಫ್ರಿಕಾದ್ದೇ ಸಿಂಹಪಾಲು. ಹಾಗಾಗಿ ಮೊದಲಿಗೆ ಆಫ್ರಿಕಾ ಮಲೇರಿಯ ದಿನ ಎಂದು ಪ್ರಾರಂಭವಾದ ಅರಿವಿನ ದಿನವನ್ನು, ಎಪ್ರಿಲ್ 25ರಂದು ವಿಶ್ವ ಮಲೇರಿಯಾ ಜಾಗೃತಿ ದಿನ (World Malaria Day) ಎಂದು ಗುರುತಿಸಲಾಗಿದೆ. ಮಲೇರಿಯಾ ವಿರುದ್ಧದ ಜಾಗತಿಕ ಹೋರಾಟದಲ್ಲಿ ಮೇಲುಗೈ ಸಾಧಿಸಬೇಕೆಂಬ ಉದ್ದೇಶದಿಂದ, ಈ ರೋಗದ ಕುರಿತಾದ ತಿಳಿವಳಿಕೆ, ಬಾರದಂತೆ ಜಾಗೃತಿ ಮತ್ತು ಬಂದಾಗ ತೆಗೆದುಕೊಳ್ಳಬೇಕಾದ ಎಚ್ಚರಿಕೆಗಳ ಕುರಿತು ಅರಿವನ್ನು ಮೂಡಿಸುವ ಉದ್ದೇಶದಿಂದ- “ನನ್ನ ಆರೋಗ್ಯ, ನನ್ನ ಹಕ್ಕು” (My Health, My Right) ಎಂಬ ಘೋಷವಾಕ್ಯವನ್ನು ಈ ಸಾಲಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಹಾಗಾಗಿ ರೋಗ ಬಾರದಂತೆ ತಡೆಯುವ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಹಂಚಿಕೊಳ್ಳುವ ಸಮಯವಿದು.
ತಡೆಯುವುದು ಹೇಗೆ?
ಈ ಬಾರಿಯ ಕಠೋರ ಬೇಸಿಗೆಯ ಪರಿಣಾಮವಾಗಿ ಎಲ್ಲೆಡೆ ಸೊಳ್ಳೆಗಳ ಸಂಖ್ಯೆ ಹೆಚ್ಚಿರುವುದು ಕಾಣುತ್ತದೆ. ಹಾಗಾಗಿ, ವೃದ್ಧಿಯಾಗುವ ಸೊಳ್ಳೆಗಳನ್ನು ನಾಶ ಮಾಡಲೇಬೇಕು. ಎಲ್ಲಾದರೂ ನೀರು ನಿಂತಿದ್ದರೆ ಅಲ್ಲೆಲ್ಲ ಕೀಟನಾಶಕ ಸಿಂಪಡಿಸಿ ತುರ್ತಾಗಿ ಸೊಳ್ಳೆಗಳ ಹೆಚ್ಚಳ ನಿಲ್ಲಿಸಬೇಕು. ಸೊಳ್ಳೆಗಳ ಹೆಚ್ಚಳ ತಡೆಯುವುದು ಈ ರೋಗ ನಿವಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಾಗಾಗಿ ಮನೆಯ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇರಿಸಿಕೊಳ್ಳಿ.
ಮಾತ್ರವಲ್ಲ, ಸೊಳ್ಳೆಗಳು ಕಚ್ಚದಂತೆ ರೆಪೆಲ್ಲೆಂಟ್‌ಗಳನ್ನು ಬಳಸುವುದು ಅಗತ್ಯ. ಕಿಟಕಿಗಳಿಗೆ ಸೊಳ್ಳೆ ಪ್ರವೇಶಿಸದಂಥ ಪರದೆಗಳು ಮತ್ತು ರಾತ್ರಿ ಮಲಗುವಾಗಲೂ ಪರದೆ ಬಳಸುವುದು ಸೂಕ್ತ. ತುಂಬು ಬಟ್ಟೆಗಳನ್ನು ಧರಿಸುವುದು ಸರಿಯಾದ ಕ್ರಮ. ಸೊಳ್ಳೆಗಳು ಹೆಚ್ಚು ಚಟುವಟಿಕೆಯಲ್ಲಿರುವ ಹೊತ್ತಿನಲ್ಲಿ ಮನೆಯೊಳಗೇ ಇರಿ. ಮಲೇರಿಯ ನಿರೋಧಕತೆ ಉದ್ದೀಪಿಸುವಂಥ ಲಸಿಕೆಗಳು ಮಕ್ಕಳಿಗಾಗಿ ಲಭ್ಯವಿದೆ. ಈ ಬಗ್ಗೆ ವೈದ್ಯರಲ್ಲಿ ಮಾತಾಡುವುದು ಕ್ಷೇಮ.
ಬರಲು ಕಾರಣವೇನು?
ಪ್ಲಾಸ್ಮೋರಿಯಂ ಎಂಬ ಏಕಕೋಶ ಜೀವಿಯಿಂದ ಬರುವ ರೋಗವಿದು. ಈ ಜೀವಿಯ ಪ್ರಸರಣಕ್ಕೆ ಪೂರಕವಾಗಿ ಒದಗುವುದು ಅನಾಫಿಲಿಸ್ ಸೊಳ್ಳೆಗಳು. ಕಚ್ಚುವ ಸೊಳ್ಳೆಗಳ ಮೂಲಕ ಮಾನವದ ದೇಹವನ್ನು ಪ್ರವೇಶಿಸುವ ರೋಗಾಣು, ಯಕೃತ್‌ನಲ್ಲಿ ಸಂತಾನಾಭಿವೃದ್ಧಿ ನಡೆಸುತ್ತದೆ. ರೋಗಾಣುಗಳು ಸಾಕಷ್ಟು ವೃದ್ಧಿಯಾಗಿ, ಸೋಂಕು ಪಸರಿಸುವ ಹೊತ್ತಿನಲ್ಲಿ ರೋಗ ಲಕ್ಷಣಗಳು ಕಾಣಲು ಆರಂಭಿಸುತ್ತವೆ. ಇದಕ್ಕೆ ಸಾಮಾನ್ಯವಾಗಿ ಸೋಂಕು ತಗುಲಿದ ನಂತರ, 10 ದಿನಗಳಿಂದ ನಾಲ್ಕು ವಾರಗಳವರೆಗೂ ಬೇಕಾಗುತ್ತದೆ.
ಲಕ್ಷಣಗಳೇನು?
ತೀವ್ರ ಜ್ವರ, ಚಳಿನಡುಕ, ತಲೆನೋವು, ಮೈಕೈ ನೋವು, ವಾಂತಿ, ವಿಪರೀತ ಸುಸ್ತು- ಇವು ಸಾಮಾನ್ಯವಾಗಿ ಮಲೇರಿಯ ರೋಗಿಯಲ್ಲಿ ಕಂಡುಬರುವ ಲಕ್ಷಣಗಳು. ಮಕ್ಕಳಲ್ಲಿ ಇವಿಷ್ಟರ ಜೊತೆಗೆ ಕೆಮ್ಮು ಮತ್ತು ಡಯರಿಯ ಸಹ ಬರಬಹುದು. ಮಲೇರಿಯದಿಂದ ಕಾಮಾಲೆ (ಜಾಂಡೀಸ್) ಮತ್ತು ರಕ್ತಹೀನತೆ (ಅನಿಮಿಯ) ಸಹ ಬರಬಹುದು. ಇಂಥ ಯಾವುದೇ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ರಕ್ತಪರೀಕ್ಷೆ ಮಾಡಿಸಲು ವೈದ್ಯರು ಸೂಚಿಸುತ್ತಾರೆ. ತ್ವರಿತವಾಗಿ ಚಿಕಿತ್ಸೆ ದೊರೆಯದಿದ್ದರೆ, ಯಕೃತ್ ಸಮಸ್ಯೆ, ಶ್ವಾಸಕೋಶಗಳಲ್ಲಿ ನೀರು ತುಂಬುವುದು, ನ್ಯುಮೋನಿಯ, ದೃಷ್ಟಿಯ ತೊಂದರೆ, ಕಿಡ್ನಿ ವೈಫಲ್ಯ- ಹೀಗೆ ಹಲವು ರೀತಿಯಲ್ಲಿ ಆರೋಗ್ಯ ಕೈಕೊಟ್ಟು ಸಾವು ವಕ್ಕರಿಸಬಹುದು.