ಪಾವಗಡ:
ರೈತರಿಗೆ ಮಾಹಿತಿಯಿಲ್ಲದೆ ಪಕ್ಷದ ಕಾರ್ಯಕ್ರಮ : ಆರೋಪ
ಆರು ತಿಂಗಳ ಒಳಗಾಗಿ ತಾಲ್ಲೂಕಿನ ಪ್ರತಿ ಗ್ರಾಮಕ್ಕೂ ತುಂಗಭದ್ರಾ ಕುಡಿಯುವ ನೀರು ಪೂರೈಕೆಯಾಗಲಿದೆ ಎಂದು ಶಾಸಕ ವೆಂಕಟರವಣಪ್ಪ ಭರವಸೆ ನೀಡಿದರು.
ಪಟ್ಟಣದ ಕೃಷಿ ಇಲಾಖೆ ಆವರಣದಲ್ಲಿ ರೈತ ದಿನಾಚರಣೆಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನ ಜನತೆಯ ಬೇಡಿಕೆ ಈಡೇರುವ ಸಮಯ ಸಮೀಪಿಸಿದೆ. ಆರು ತಿಂಗಳಲ್ಲಿ ಕುಡಿಯುವ ನೀರು ಎಲ್ಲಾ ಹಳ್ಳಿಗಳಿಗೂ ಪೂರೈಯಾಗಲಿದೆ ಹಾಗೂ ತಾಲ್ಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯೂ ಕೂಡ ಭರದಿಂದ ಸಾಗುತ್ತಿದೆ ಎಂದರು.
ಕೃಷಿ ಇಲಾಖೆಯ ವತಿಯಿಂದ ರೈತ ದಿನಾಚರಣೆ ಹಮ್ಮಿಕೊಂಡು ಪ್ರಗತಿಪರ ರೈತರನ್ನು ಸನ್ಮಾನಿಸುತ್ತಿರುವುದು ಮತ್ತಷ್ಟು ರೈತರಿಗೆ ಪ್ರೇರಣೆಯಾಗಲಿದೆ. ಕಳೆದ ನವೆಂಬರ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಯಿಂದ ಅತಿವೃಷ್ಟಿ-ಅನಾವೃಷ್ಟಿ ಒಂದೆಡೆಯಾದರೆ, ಅಂತರ್ಜಲ ಮಟ್ಟ ವೃದ್ಧಿಯಾಗಿ ಕೃಷಿ ಚಟುವಟಿಕೆಗಳಿಗೆ ವರದಾನವಾಗಿದೆ ಎಂದರು.
ನಾಗಲಮಡಿಕೆ ಬಿಟ್ಟರೆ ತಾಲ್ಲೂಕಿನಲ್ಲಿ ಯಾವುದೇ ಡ್ಯಾಂ ಇಲ್ಲ. ಅಲ್ಲಿನ ನೀರು ಪಟ್ಟಣದ ಅಗಸರಕುಂಟೆಗೆ ಸರಬರಾಜಾಗಿ, ಪಟ್ಟಣದ ನಾಗರಿಕರಿಗೆ ಕುಡಿಯುವ ನೀರಿಗೆ ಅನುಕೂಲವಲ್ಲದೆ, ಪಟ್ಟಣದ ಸುತ್ತಮುತ್ತ ಅಂತರ್ಜಲ ಮಟ್ಟ ಹೆಚ್ಚಳವಾಗಿದೆ. ನಾಲ್ಕು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರನ್ನಾಗಿ ಮಾಡಿದ ತಾಲ್ಲೂಕಿನ ಜನತೆಯ ಋಣ ತೀರಿಸುವ ಸಲುವಾಗಿ ಜ್ವಲಂತ ಸಮಸ್ಯೆಗಳಿಗೆ ಹೆಚ್ಚು ಒತ್ತನ್ನು ನೀಡಲಾಗಿದೆ ಎಂದರು.
ಇಲಾಖೆಯ ಕಾರ್ಯಕ್ರಮಗಳು ಹಾಗೂ ರೈತರಿಗೆ ಸಕಾಲದಲ್ಲಿ ಬೆಳೆಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡುವ ಕಾರ್ಯ ಇಲಾಖೆಯ ವತಿಯಿಂದ ನಿರಂತರವಾಗಿ ನಡೆಯಬೇಕೆಂದರು.
ಕಾರ್ಯಕ್ರಮದಲ್ಲಿ ನಂಜಪ್ಪ ಗುಜ್ಜನಡು, ಲಿಂಗಮಯ್ಯ ನೀಲಮ್ಮನಹಳ್ಳಿ, ಬಾಪೂಜಿ ಚಿಕ್ಕಹಳ್ಳಿ, ಪವನ್ ರಾಜ್ ರೊಪ್ಪ, ಸಂಜೀವ್ ಕುಮಾರ್ ವಡ್ಡರೇವು, ವಿಜಯಮ್ಮ ಕೋಟಗುಡ್ಡ, ಪ್ರಕಾಶ್ ಬೊಮ್ಮನಾಗತಿಹಳ್ಳಿ ಇವರುಗಳಿಗೆ ಶ್ರೀವಲ್ಲಿ ಬಯೋಟೆಕ್ ಹಾಗೂ ಕೃಷಿ ಇಲಾಖೆ ವತಿಯಿಂದ ಪ್ರಗತಿಪರ ರೈತ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ರೈತ ಸಂಘದ ಅಧ್ಯಕ್ಷರುಗಳಾದ ಪೂಜಾರಪ್ಪ, ಜಿ. ನರಸಿಂಹ ರೆಡ್ಡಿ ಮತ್ತು ಕಿಸಾನ್ ಸಂಘದ ಅಧ್ಯಕ್ಷ ವಿ.ಕೃಷ್ಣರಾವ್ ಮಾತನಾಡಿ ದರು.
ಚಿಕ್ಕಹಳ್ಳಿ ಗ್ರಾಮದ ರೈತ ಬಾಪೂಜಿ ತನ್ನ 5 ಲಕ್ಷ ರೂ. ಮೌಲ್ಯದ ಹಳ್ಳಿಕಾರ್ ಹೋರಿಗಳೊಂದಿಗೆ ಬಂಡಿಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದರು.
ಈ ವೇಳೆ ಶಾಸಕರು ಸೇರಿದಂತೆ ಇತರೆ ರೈತರು ಜೋಡೆತ್ತಿನ ಬಂಡಿಯೊಂದಿಗೆ ಫೋಟೊ ತೆಗೆಸಿಕೊಳ್ಳುವಾಗ ಇದ್ದಕ್ಕಿದ್ದಂತೆ ಬೆದರಿದ ಹೋರಿಗಳು ಒಮ್ಮೆಲೆ ಮೇಲೆ ಹಾರಿ ರೈತರ ಮೇಲೆ ಹಾರಿ ರೈತರತ್ತ ನುಗ್ಗಿದವು.
ಈ ವೇಳೆ ಶಾಸಕರ ಗನ್‍ಮನ್ ಕುಮಾರ್ ಮತ್ತಿತರರು ತಕ್ಷಣ ಶಾಸಕರನ್ನು ಸುರಕ್ಷಿತವಾಗಿ ಅಲ್ಲಿಂದ ಪಕ್ಕಕ್ಕೆ ಕರೆದುಕೊಂಡರು. ಹೋರಿಗಳು ನುಗ್ಗಿದ ರಭಸಕ್ಕೆ ವಿವಿಧ ಇಲಾಖೆಗಳು ಹಾಕಿದ್ದ ಪ್ರದರ್ಶನದ ಮಳಿಗೆಗಳು ಮತ್ತು ಶಾಮಿಯಾನ ಕಿತ್ತು ಹೋಯಿತು. ಸುಮಾರು ಹತ್ತು ನಿಮಿಷಗಳ ಕಾಲ ಹೋರಿಗಳನ್ನು ತಹಬಂದಿಗೆ ತರಲು ಪ್ರಯಾಸ ಪಡಲಾಯಿತು. ಈ ವೇಳೆ ಕೆಲ ಕಾಲ ಆತಂಕ ಸೃಷ್ಟಿಯಾಯಿತು.
ಆಕ್ರೋಶ
ಒಂದು ರಾಜಕೀಯ ಪಕ್ಷದ ಸಭೆಯಂತೆ ಕೃಷಿ ಇಲಾಖೆಯ ವಿಜಯಮೂರ್ತಿ ರೈತ ದಿನವನ್ನು ಆಚರಣೆ ಮಾಡಿದ್ದಾರೆಂದು ರೈತ ಮುಖಂಡ ಗಂಗಾಧರ ನಾಯ್ಕ್, ಪಳವಳ್ಳಿ ದಿನೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಇಲಾಖೆಯ ವತಿಯಿಂದ ನಡೆಯುವ ರೈತರ ದಿನಾಚರಣೆ ಕಾರ್ಯಕ್ರಮದ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿ, ತಾಲ್ಲೂಕಿನ ನಾಲ್ಕೂ ಹೋಬಳಿಗಳ ರೈತರಿಗೆ ಮಾಹಿತಿ ನೀಡಿ, ಕಾರ್ಯಕ್ರಮ ಆಯೋಜಿಸಿಲ್ಲ.
ಪ್ರಗತಿಪರ ರೈತರನ್ನು ಆಯ್ಕೆ ಮಾಡಿ ಅಭಿನಂದಿಸುವಲ್ಲಿ ಕೂಡ ಪಾರದರ್ಶಕತೆ ಇಲ್ಲವಾಗಿದೆ. ತಾಲ್ಲೂಕಿನ ರೈತರಿಗೆ ಮಾಹಿತಿ ನೀಡದೆ ತಮಗೆ ಬೇಕಾದವರನ್ನು ಆಯ್ಕೆ ಮಾಡುವ ಮೂಲಕ ಇಲಾಖೆ ದಾರಿ ತಪ್ಪಿರುವುದನ್ನು ಕಾಣಬಹುದೆಂದು ಗಂಗಾಧರ ನಾಯ್ಕ್ ತಿಳಿಸಿದರು.
ತಹಸೀಲ್ದಾರ್ ಕೆ.ಆರ್.ನಾಗರಾಜ್, ಕೃಷಿ ಸಮಾಜದ ಅಧ್ಯಕ್ಷ ದೊಡ್ಡೆಗೌಡ, ಪಶುವೈದ್ಯ ಡಾ.ಸಿದ್ದಲಿಂಗಯ್ಯ, ತೋಟಗಾರಿಕಾ ಸಹಾಯಕ ನಿರ್ದೇಶಕ ಶಂಕರಮೂರ್ತಿ, ರೇಷ್ಮೆ ಇಲಾಖೆಯ ಅಧಿಕಾರಿ ನಾಗರಾಜ್, ಕೃಷಿ ಸಂಶೋಧನಾ ಕೇಂದ್ರದ ಜಗದೀಶ್, ಶ್ರೀವಲ್ಲಿ ಬಯೊಟೆಕ್‍ನ ಮಂಜುನಾಥ್ ರೆಡ್ಡಿ, ಧನಂಜಯರೆಡ್ಡಿ, ರೈತರು ಹಾಗೂ ರೈತ ಮಹಿಳೆಯರುಗಳು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
