ತುಮಕೂರು:
ಸಂಶೋಧನಾ ಲೇಖನಗಳ ಸಂಗ್ರಹ ಕೃತಿ ಕೆಂಬಿಸಲು ಬಿಡುಗಡೆ
ಸಂಶೋಧನಾ ಮತ್ತು ವಿಮರ್ಶಾ ಲೇಖನಗಳ ಸಂಗ್ರಹ ಕೃತಿ ಕೆಂಬಿಸಿಲು ಪುಸ್ತಕವನ್ನು ನಾಡಿನ ಹಿರಿಯ ವಿದ್ವಾಂಸರಾದ ಪ್ರೊ.ರಾಜಪ್ಪ ದಳವಾಯಿ ಲೋಕಾರ್ಪಣೆ ಮಾಡಿದರು. ಡಾ.ಡಿ.ಎನ್.ಯೋಗೀಶ್ವರಪ್ಪ, ಕೆ.ಎಸ್.ಸಿದ್ಧಲಿಂಗಪ್ಪ, ಡಾ.ಕೆ.ಜಿ.ಡಾ.ರತ್ನಮಂಜರಿ, ಡಾ.ಹೆಚ್.ವಿ.ವೀರಭದ್ರಸ್ವಾಮಿ, ಡಾ.ರೇಣುಕಾ ಪ್ರಸಾದ್, ಪ್ರೊ. ಹೆಚ್.ಡಿ.ತಿಪ್ಪೇಸ್ವಾಮಿ, ಡಾ.ನಾಗಭೂಷಣ್ ಬಗ್ಗನಡು, ಗಂಗಣ್ಣ ಇದ್ದಾರೆ.
ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಪದವಿ ಕಾಲೇಜುಗಳಿಗೆ ಪ್ರಾಮುಖ್ಯತೆ ಹೆಚ್ಚಾಗಿದ್ದು, ವಿಶ್ವವಿದ್ಯಾನಿಲಯಗಳು ಹಿಂದಿನ ವೈಭವವನ್ನು ಕಳೆದುಕೊಳ್ಳುವ ಹಂತವನ್ನು ಭವಿಷ್ಯದಲ್ಲಿ ತಲುಪುತ್ತವೆ ಎಂದು ಬೆಂಗಳೂರು ವಿವಿ ಪ್ರಾಧ್ಯಾಪಕ ಮತ್ತು ಹಿರಿಯ ಸಾಹಿತಿಗಳಾದ ಪ್ರೊ.ರಾಜಪ್ಪ ದಳವಾಯಿ ಅಭಿಪ್ರಾಯಪಟ್ಟರು.
ಅವರು ನಗರದ ಸಿದ್ಧಗಂಗಾ ಮಹಿಳಾ ಪದವಿ ಪೂರ್ವ ಕಾಲೇಜಿನ ಶ್ರೀ ಶಿವಕುಮಾರ ಸ್ವಾಮೀಜಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಶ್ರೀ ಸಿದ್ಧಗಂಗಾ ಸಂಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ರತ್ನ ಮಂಜರಿಯವರ ಸಂಶೋಧನಾ ಲೇಖನಗಳ ಸಂಗ್ರಹವಾದ “ಕೆಂಬಿಸಲು” ಎಂಬ ಕೃತಿಯನ್ನು ಬಿಡುಗಡೆ ಮಾಡಿದರು.
ಒಟ್ಟು ಹತ್ತು ವಿಮರ್ಶಾ ಲೇಖನಗಳನ್ನೊಳಗೊಂಡಿರುವ ಕೃತಿಯ ಶೀರ್ಷಿಕೆಯು ಆಕರ್ಷಕವಾಗಿದ್ದು, ಇದನ್ನು ನೇಮಿಚಂದ್ರರು ಬರೆದಿರುವ ಆರು ಕಥೆಗಳ ಬಗ್ಗೆ ವಿಮರ್ಶಿಸಿದ್ದಾರೆ. ಇದರಲ್ಲಿನ ವಿಮರ್ಶಾ ಲೇಖನಗಳು ತಲಸ್ಪರ್ಶಿ ಅಧ್ಯಯನದಿಂದ ಕೂಡಿದ್ದು, ವಿಮರ್ಶಾ ವಲಯದ ಗಮನ ಸೆಳೆಯುವುದರಲ್ಲಿ ಯಶಸ್ವಿಯಾಗಿರುವ ಇವರ ಎಲ್ಲಾ ವಿಮರ್ಶಾ ಲೇಖನಗಳಲ್ಲಿ ಸ್ತ್ರೀವಾದಿತ್ವ ಹೆಚ್ಚು ಪ್ರಾಮುಖ್ಯತೆ ಪಡೆದಿದೆ ಎಂದು ವಿಶ್ಲೇಷಿಸಿದರು.
ಪಿಎಚ್ಡಿ ಗುಣಮಟ್ಟ ಕುಸಿಯುತ್ತಿದೆ
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಮಾತನಾಡಿ, ಇತ್ತೀಚೆಗೆ ನಡೆಯುತ್ತಿರುವ ಬಹುಪಾಲು ಸಂಶೋಧನೆಗಳು ತೀರಾ ಕಳಪೆ ಮಟ್ಟದಿಂದ ಕೂಡಿದ್ದು ಕೇವಲ ಶೀರ್ಷಿಕೆಯನ್ನು ಹೊರತುಪಡಿಸಿದರೆ ಒಳಗಿನ ಹೂರಣವೆಲ್ಲಾ ಪುನರಾವರ್ತಿತವಾಗಿರುತ್ತದೆ.
ಮೂಲ ಆಧಾರಗಳನ್ನೇ ನೋಡದೆ ಯಾವುದೋ ಕೃತಿಯಲ್ಲಿರುವ ಅಡಿ ಟಿಪ್ಪಣಿಗಳನ್ನೆ ಬಳಸಿಕೊಂಡು ಮಹಾಪ್ರಬಂಧ ರಚಿಸುವ ಸಂಶೋಧಕರೂ ಹೆಚ್ಚಾಗಿದ್ದಾರೆ. ಯುಜಿಸಿಯು ಉಪನ್ಯಾಸಕರ ಮುಂಬಡ್ತಿಗಾಗಿ ಕಠಿಣವಾದ ನಿಯಮಗಳನ್ನು ಮಾಡಿರುವುದರಿಂದ ಸಂಶೋಧನಾಸಕ್ತಿ ಇಲ್ಲದವರೂ ಪ್ರವೇಶ ಪಡೆದು ಪಿಹೆಚ್.ಡಿ ಗುಣಮಟ್ಟ ಕಡಿಮೆಯಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕೃತಿಗಳನ್ನು ಕೊಂಡು ಓದುವಂತಾಗಲಿ
ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷÀ ಕೆ.ಎಸ್.ಸಿದ್ಧಲಿಂಗಪ್ಪ ಸಾಹಿತ್ಯ ಪ್ರಚಾರದಲ್ಲಿ ಲೇಖಕ, ಓದುಗ, ಪ್ರಕಾಶಕರ ಪಾತ್ರ ಮಹತ್ವದ್ದಾಗಿದ್ದು, ಕನ್ನಡ ಸಾಹಿತ್ಯ ಕೃತಿಗಳನ್ನು ಕೊಂಡು ಓದುವವರ ಸಂಖ್ಯೆ ಹೆಚ್ಚಾದರೆ, ಸಾಹಿತ್ಯ ಸಂಸ್ಕøತಿ ಪ್ರಚಾರದ ಜೊತೆಗೆ ಲೇಖಕನಿಗೂ ಉತ್ತೇಜನ ನೀಡಿದಂತಾಗುತ್ತದೆ ಎಂದರು.
ಪ್ರಾಧ್ಯಾಪಕರುಗಳಾದ ಡಾ.ಬಿ.ಆರ್. ರೇಣುಕಾಪ್ರಸಾದ್ ಮತ್ತು ಡಾ.ನಾಗಭೂಷಣ್ ಬಗ್ಗನಡು ಕೆಂಬಿಸಿಲು ಕೃತಿಯನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ಶ್ರೀ ಸಿದ್ಧಗಂಗಾ ಪದವಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್.ಪಿ.ವೀರಭದ್ರಸ್ವಾಮಿ, ಪ್ರೊ.ಹೆಚ್.ಡಿ.ತಿಪ್ಪೇಸ್ವಾಮಿ ಮ್ಯಾನೇಜರ್ ಗಂಗಣ್ಣ ಹಾಗೂ ಕೃತಿಗಾರ್ತಿ ಮತ್ತು ಸಿದ್ಧಗಂಗಾ ಸಂಜೆ ಕಾಲೇಜಿನ ಪ್ರಾಂಶುಪಾಲ ಡಾ.ಕೆ.ಜಿ. ರತ್ನಮಂಜರಿ ಉಪಸ್ಥಿತರಿದ್ದರು.ಕನ್ನಡ ಭಾಷಾ ಪ್ರಾಧ್ಯಾಪಕ ಪ್ರಕಾಶ್ ನಿರೂಪಿಸಿದರು. ರಾಮಲಿಂಗಾರೆಡ್ಡಿ ಸ್ವಾಗತಿಸಿದರು. ಸತೀಶ್ ವಂದಿಸಿದರು.
ಮಹಾ ಪ್ರಬಂಧಗಳು ವಿವಿಯ ಗೋಡೌನ್ಗಳಲ್ಲಿ ಅನಾಥವಾಗಿವೆ
ಇಂದು ಸಂಶೋಧನಾ ಕ್ಷೇತ್ರ ಕಳೆಗುಂದಿದೆ. ವಿಶ್ವವಿದ್ಯಾನಿಲಯಗಳಲ್ಲಿ ಕೇವಲ ಡಾಕ್ಟರೇಟ್ ಪದವಿಗಾಗಿ ಸಂಶೋಧನೆಗಳು ನಡೆಯುತ್ತಿವೆಯೇ ಹೊರತು ಅವುಗಳು ಪ್ರಕಟಣೆಯ ಭಾಗ್ಯವನ್ನೇ ಕಾಣುವುದಿಲ್ಲ. ಇಂತಹ ಮಹಾ ಪ್ರಬಂಧಗಳು ವಿಶ್ವವಿದ್ಯಾನಿಲಯದ ಗೋಡೌನ್ಗಳಲ್ಲೋ ಅಥವಾ ಗ್ರಂಥಾಲಯದಲ್ಲೋ ಅನಾಥವಾಗಿವೆ ಎಂದು ಸಂಶೋಧಕ ಡಾ.ಡಿ.ಎನ್.ಯೋಗೀಶ್ವರಪ್ಪ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ