ನಿಟ್ಟೂರು:
ನೂತನ ಕಟ್ಟಡ ನಿರ್ಮಿಸುವಲ್ಲಿ ವ್ಯವಸ್ಥೆ ವಿಫಲ : ಆರೋಪ
ಗುಬ್ಬಿ ತಾಲ್ಲೂಕಿನ ನಿಟ್ಟೂರು ಗ್ರಾಮದ ಎಂ.ಜಿ.ನಗರದಲ್ಲಿ ಅಂಗನವಾಡಿ ಕೇಂದ್ರ ಶಿಥಿಲವಾಗಿ ಬಿದ್ದು ಹೋಗಿದ್ದರೂ ಹೊಸ ಆಂಗನವಾಡಿ ಕೇಂದ್ರ ನಿರ್ಮಿಸುವಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಿಲ್ಲವೆಂದು ಇಲ್ಲಿನ ದಲಿತ ಕುಟುಂಬದ ನಿವಾಸಿಗಳು ದೂರಿದ್ದಾರೆ.
ಗ್ರಾಮದ ಎಂ.ಜಿ.ನಗರದ ಅಂಗನವಾಡಿ ಕೇಂದ್ರ ಶಿಥಿಲಗೊಂಡು ನೆಲಕ್ಕುರುಳಿ ಸುಮಾರು ವರ್ಷಗಳು ಕಳೆದರೂ ಪುಟ್ಟಮಕ್ಕಳು ಅಂಗನವಾಡಿ ಕೇಂದ್ರವಿಲ್ಲದೆ ವಂಚಿತವಾಗಿದ್ದಾತೆ ಎಂದು ಮಕ್ಕಳ ಪೋಷಕರು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ವಿರುಧ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಂಗಲಾಚಿದರೂ ಫಲವಿಲ್ಲ :
ಸುಸಜ್ಜಿತ ಸೌಲಭ್ಯವಿರುವ ನೂತನ ಅಂಗನವಾಡಿ ಕೇಂದ್ರವನ್ನು ನಿರ್ಮಿಸುವಂತೆ ಗ್ರಾಪಂ ಸದಸ್ಯರುಗಳು ಹಾಗೂ ಪಿಡಿಓ ಅವರನ್ನು ಸ್ಥಳಕ್ಕೆ ಬರಮಾಡಿಕೊಂಡು ಸಮಸ್ಯೆಗಳನ್ನು ನೇರವಾಗಿ ಹೇಳಿಕೊಂಡು ಶಿಥಿಲಗೊಂಡಿರುವ ಅಂಗನವಾಡಿ ಕೇಂದ್ರವನ್ನು ತೋರಿಸಿ ಹೊಸ ಕಟ್ಟಡ ನಿರ್ಮಿಸಿಕೊಡುವಂತೆ ಅಂಗಲಾಚಿಕೊಂಡರೂ ಇದುವರೆಗೆ ಯಾವುದೇ ಫಲ ನೀಡಿಲ್ಲ.
ನಿವಾಸಿಗಳಿಂದ ಪ್ರತಿಭಟನೆಯ ಎಚ್ಚರಿಕೆ :
ಹೆಂಚಿನ ಬಾಡಿಗೆ ಮನೆಯಲ್ಲಿ ತಮ್ಮ ಮಕ್ಕಳು ಕೂತು ಕಲಿಕೆಯಲ್ಲಿ ತೊಡಗಬೇಕಾದ ದುರ್ಗತಿ ಬೇಕೆ ಎಂದು ಜನಪ್ರತಿನಿಧಿಗಳ, ಅಧಿಕಾರಿಗಳ ವಿರುದ್ಧ ನಿವಾಸಿಗಳು ಕಿಡಿಕಾರಿದ್ದಾರೆ. ತಮ್ಮ ಮಕ್ಕಳಿಗೊಂದು ಅಂಗನವಾಡಿ ಕೇಂದ್ರದ ಭಾಗ್ಯ ಕಲ್ಪಿಸಲು ತಕ್ಷಣವೇ ಇತ್ತ ಗಮನ ಹರಿಸದಿದ್ದರೇ ನಿಟ್ಟೂರು ಗ್ರಾಪಂ ಎದುರು ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ದಲಿತ ಮಕ್ಕಳೆಂದರೆ ನಿರ್ಲಕ್ಷ್ಯವೆ? :
ಕಳೆದ ವರ್ಷ 2021 ರಲ್ಲಿ ಜಡಿಮಳೆ ಬಂದಾಗ ಅಂಗನವಾಡಿಯಲ್ಲಿ ಮಕ್ಕಳು ಕೂರಲು ವ್ಯವಸ್ಥಿತ ಕೊಠಡಿಯಿಲ್ಲದೆ ಬಾಡಿಗೆ ಮನೆಯೊಂದನ್ನು ತೆಗೆದುಕೊಂಡು ಅಂಗನವಾಡಿ ನಡೆಸಲಾಗುತ್ತಿದೆ ಎಂದು ಇಲ್ಲಿನ ನಿವಾಸಿಗಳು ತಮ್ಮ ಅಳಲನ್ನು ತೋಡಿಕೊಂಡರು.
ಜನಪ್ರತಿನಿಧಿಗಳು, ಅಧಿಕಾರಿಗಳು ದಲಿತ ಕುಟುಂಬಗಳ ಮಕ್ಕಳ ಮೇಲೆ ಮಲತಾಯಿ ಧೋರಣೆ ಅನುಸರಿಸುತ್ತಿದ್ದಾರೆಂದು ದಲಿತ ಕುಟುಂಬಗಳ ಮಕ್ಕಳ ಪೋಷಕರು ಕುಪಿತಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ