ತುಮಕೂರು:
ಪರಿಹಾರಾತ್ಮಕ ಬಜೆಟ್ ನಿರೀಕ್ಷೆಯಲ್ಲಿ ತೆರಿಗೆದಾರ
ಫೆಬ್ರುವರಿ 1 ರಂದು ಕೇಂದ್ರ ಬಜೆಟ್ ಮಂಡನೆಯಾಗುತ್ತಿದೆ. ಕಳೆದ ಎರಡು ವರ್ಷಗಳಿಂದ ಕೊರೊನಾ ಸೆಲೆಗೆ ಸಿಲುಕಿ ನಲುಗಿರುವ ಉದ್ಯಮ ಕ್ಷೇತ್ರ ಹಾಗೂ ತೆರಿಗೆದಾರ ವಲಯ ಹಲವು ನಿರೀಕ್ಷೆಗಳನ್ನು ಈ ಬಜೆಟ್ ಮೇಲೆ ಇಟ್ಟಿದ್ದಾರೆ. ಹಿಂದಿನ ರೀತಿಯಲ್ಲೇ ಒಂದು ರೀತಿಯ ನಿರಾಸೆಯ ವಾತಾವರಣ ಈ ಬಜೆಟ್ನಲ್ಲೂ ಕಾಣುವುದೆ ಅಥವಾ ಹೊಸ ನಿರೀಕ್ಷೆಗಳ ಭರವಸೆ ಈಡೇರುವುದೆ ಎಂಬ ಕುತೂಹಲವಂತೂ ಗರಿಗೆದರಿದೆ.
ಸಂಸತ್ ಬಜೆಟ್ ಅಧಿವೇಶನ ಜನವರಿ 31 ರಿಂದ ಆರಂಭವಾಗಲಿದ್ದು, ಫೆ.1 ರಂದು ನಿರ್ಮಲ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಇದೀಗ ನಾಲ್ಕನೆ ಬಾರಿಗೆ ಬಜೆಟ್ ಮಂಡಿಸಿರುವ ವಿತ್ತ ಸಚಿವರು ಈ ಬಾರಿ ಯಾವ ಯಾವ ವರ್ಗಕ್ಕೆ ಸಿಹಿ-ಕಹಿ ಸುದ್ದಿ ನೀಡಲಿದ್ದಾರೋ ಎಂಬುದರ ಬಗ್ಗೆಯೇ ಹೆಚ್ಚು ಚರ್ಚೆಗಳು ನಡೆಯುತ್ತಿವೆ.
ಕೆಲವು ವರ್ಷಗಳಿಂದ ಬಹು ಮುಖ್ಯವಾಗಿ ಕಾಡುತ್ತಿರುವ ಸಮಸ್ಯೆ ತೆರಿಗೆದಾರ ವರ್ಗದ್ದು. ಆದಾಯ ತೆರಿಗೆ ಹಾಗೂ ಸರಕು ಮತ್ತು ಸೇವಾ ತೆರಿಗೆ ವಲಯದಲ್ಲಿನ ನ್ಯೂನತೆಗಳು ಇನ್ನೂ ಬಗೆಹರಿದಿಲ್ಲ. ಬದಲಿಗೆ ಸಮಸ್ಯೆಗಳ ಮೇಲೆ ಸಮಸ್ಯೆಗಳು ಹಾಗೂ ಸಮಸ್ಯೆಗಳ ಒಳಗೆ ಮತ್ತಷ್ಟು ಸಮಸ್ಯೆಗಳು ಸೇರಿಕೊಳ್ಳುತ್ತಲೆ ಇವೆ. ಈ ಎಲ್ಲ ಸಮಸ್ಯೆಗಳಿಗೆ ಇತಿಶ್ರೀ ಹಾಡುವ ಹೊಸ ವ್ಯವಸ್ಥೆಯ ನಿರೀಕ್ಷೆಯಲ್ಲಿ ಉದ್ಯಮ ಹಾಗೂ ತೆರಿಗೆ ವಲಯ ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ.
ತೆರಿಗೆ ವಲಯದ ವೃತ್ತಿನಿರತರು ಹಾಗೂ ವ್ಯಾಪಾರಸ್ಥರಿಗೆ ವರ್ಷದಿಂದ ವರ್ಷಕ್ಕೆ ಸಮಸ್ಯೆಗಳ ಸರಮಾಲೆಯೇ ಹುಟ್ಟಿಕೊಳ್ಳುತ್ತಿವೆ. ತಮ್ಮ ಕೆಲಸ ಕಡಿಮೆ ಮಾಡಿಕೊಳ್ಳುವ ಬದಲು ಮತ್ತಷ್ಟು ಕೆಲಸ ಕಾರ್ಯಗಳು ವೃದ್ಧಿಯಾಗುತ್ತಿವೆ. ಆದರೂ ಗೊಂದಲಗಳು ನಿವಾರಣೆಯಾಗುತ್ತಿಲ್ಲ. ಆದಾಯ ತೆರಿಗೆ ಮತ್ತು ಜಿ.ಎಸ್.ಟಿ. ವಲಯ ಕುಲಗೆಟ್ಟು ಹೋಗಿದೆ ಎಂದೇ ಆ ಕ್ಷೇತ್ರದ ತಜ್ಞರು ವ್ಯಾಖ್ಯಾನಿಸುತ್ತಿದ್ದಾರೆ. ಅಷ್ಟರಮಟ್ಟಿಗೆ ರೋಸಿ ಹೋಗಿದ್ದಾರೆ.
ತೆರಿಗೆ ಪಾವತಿಗೆ ಸಂಬಂಧಿಸಿದಂತೆ ಇರುವ ವೆಬ್ ಪೋರ್ಟಲ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ತಪ್ಪು ವರದಿಗಳು ಬರುವುದು, ಫೈಲ್ ಮಾಡಿದ್ದು ಒಂದಾದರೆ ಬರುವ ವರದಿ ಮತ್ತೊಂದು, ದಿನಕ್ಕೊಂದು ಆದೇಶಗಳು, ಸುತ್ತೋಲೆಗಳು, ಇವುಗಳನ್ನು ಓದಿ ಅರ್ಥಮಾಡಿಕೊಳ್ಳಲಿಕ್ಕೆ ಆಗದ ಪರಿಸ್ಥಿತಿ. ಇದರೊಳಗೆ ತೆರಿಗೆ ಪಾವತಿ ತಡವಾಗುವುದು, ನೋಟೀಸ್ ಬರುವುದು ಇತ್ಯಾದಿಗಳ ಸರಮಾಲೆಯೆ ಸೃಷ್ಟಿಯಾಗುತ್ತಿದೆ.
ತೆರಿಗೆ ಪಾವತಿಗೆ ತಾವು ತೆರೆದಿರುವ ಖಾತೆಯ ಬ್ಯಾಂಕಿಗೆ ಹೋದರೆ ಎಸ್.ಬಿ.ಐ.ಗೆ ಹೋಗಿ ಎನ್ನುತ್ತಾರೆ. ಅಲ್ಲಿ ಚಲನ್ ತುಂಬಿ ಕೊಟ್ಟರೆ ಬೇರೆ ಬ್ಯಾಂಕ್ ಚಲನ್ ತೆಗೆದುಕೊಳ್ಳುವುದಿಲ್ಲ. ಚೆಕ್ನಲ್ಲಿ ಪಾವತಿ ಮಾಡಿ ಎನ್ನುತ್ತಾರೆ. ಎಸ್.ಬಿ.ಐ.ನಲ್ಲಿ ಅಕೌಂಟ್ ಇಲ್ಲದವರು, ಚೆಕ್ ಪುಸ್ತಕ ಹೊಂದಿಲ್ಲದ ಸಣ್ಣಪುಟ್ಟ ಉದ್ದಿಮೆದಾರರು, ವ್ಯಾಪಾರಸ್ಥರು, ತೆರಿಗೆದಾರರು ಇನ್ನಿಲ್ಲದ ಸಂಕಟ ಅನುಭವಿಸುತ್ತಿದ್ದಾರೆ.
ಬ್ಯಾಂಕ್ನೊಳಗೆ ಆಗುತ್ತಿರುವ ಕಿರಿಕಿರಿಗಳು ಅಷ್ಟಿಷ್ಟಲ್ಲ. ಸಮಸ್ಯೆಗಳನ್ನು ನಿವಾರಣೆ ಮಾಡುವ ವ್ಯವಸ್ಥೆಯೆ ಬ್ಯಾಂಕ್ ಕ್ಷೇತ್ರದಲ್ಲಿ ಇಲ್ಲವಾಗಿದೆ. ಅಲ್ಲಿರುವ ಕಡಿಮೆ ಸಿಬ್ಬಂದಿ ಸಮಸ್ಯೆಗಳನ್ನು ಇತ್ಯರ್ಥಪಡಿಸುವ ಗೋಜಿಗೆ ಹೋಗುತ್ತಿಲ್ಲ. ಎಲ್ಲವೂ ಗ್ರಾಹಕನ ಮೇಲೆ ಬೀಳುತ್ತಿವೆ. ಬ್ಯಾಂಕಿಂಗ್ ಕ್ಷೇತ್ರ ಸುಧಾರಿಸುವತ್ತ ಸರ್ಕಾರ ಹೆಚ್ಚು ಗಮನ ಹರಿಸಬೇಕಿದೆ.
ಇರುವ ಸಾಫ್ಟ್ವೇರ್ ಪೋರ್ಟಲ್ ಪ್ರಕಾರ ಆದಾಯ ತೆರಿಗೆ ಪಾವತಿಸುವ ವ್ಯವಸ್ಥೆ ರೂಢಿಸಿಕೊಳ್ಳುತ್ತಿಲ್ಲ. ಬದಲಿಗೆ ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಸಂಸ್ಥೆ ಅಥವಾ ಕಂಪನಿಗಳ ಇಚ್ಛಾಶಕ್ತಿಗೆ ಅನುಗುಣವಾಗಿ ವರ್ತಿಸುತ್ತಿರುವುದು ಆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ನುಂಗಲಾರದ ತುತ್ತಾಗಿದೆ. ಇಲ್ಲಿ ಬೇಕಿರುವುದು ತೆರಿಗೆದಾರನ ಸಮಸ್ಯೆ ನೀಗಿಸುವುದು, ಸಾಫ್ಟ್ವೇರ್ ಅಭಿವೃದ್ಧಿಪಡಿಸುವ ಕಂಪನಿಯ ಮನಸ್ಸು ತಣಿಸುವುದಲ್ಲ.
ವೆಬ್ ಪೋರ್ಟಲ್ ವ್ಯವಸ್ಥೆ ಸುಧಾರಿಸದ ಕಾರಣ ತೆರಿಗೆ ಪಾವತಿ ಅವಧಿಯನ್ನು ಮುಂದೂಡುತ್ತಲೆ ಬರಲಾಗಿದೆ. ಜೂನ್-ಸೆಪ್ಟೆಂಬರ್ ಅವಧಿಯ ರಿಟರ್ನ್ ಫೈಲ್ ಮಾಡುವ ಅವಧಿಯನ್ನು ಫೆಬ್ರ್ರುವರಿವರೆಗೆ ಮುಂದೂಡಲಾಗಿದೆ. ಇದು ಆದಾಯ ತೆರಿಗೆದಾರರಿಗೆ ಮಾತ್ರವಲ್ಲ, ಜಿ.ಎಸ್.ಟಿ. ಪಾವತಿಯ ಅವಧಿಯೂ ಮುಂದೆ ಹೋಗಿದೆ. ತೆರಿಗೆ ಕ್ಷೇತ್ರದ ವೃತ್ತಿನಿರತರು ಮತ್ತು ವ್ಯಾಪಾರಸ್ಥರು ಕೇಳುವುದೇನೆಂದರೆ ನಮಗೆ ಹತ್ತು ನಿಮಿಷವೂ ಅವಧಿ ವಿಸ್ತರಣೆ ಬೇಡ. ಇದಕ್ಕೆ ಬದಲಿಗೆ ದಿನದ 24 ಗಂಟೆಯೂ ಪೋರ್ಟಲ್ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಿ ಎಂಬುದು.
ಏಪ್ರಿಲ್ನಿಂದ ತೆರಿಗೆಗೆ ಸಂಬಂಧಿಸಿದ ವಾರ್ಷಿಕ ವರ್ಷ ಆರಂಭವಾಗುತ್ತದೆಂದರೆ ಆ ಕ್ಷೇತ್ರದಲ್ಲಿರುವ ಇಲಾಖೆಗಳು ಮಾರ್ಚ್ ತಿಂಗಳಿನಿಂದಲೇ ಎಲ್ಲ ವ್ಯವಸ್ಥೆಯನ್ನೂ ಸಿದ್ಧಪಡಿಸಿಕೊಳ್ಳಬೇಕು. ಆದರೆ ಏಪ್ರಿಲ್ ಮುಗಿದು ಸೆಪ್ಟೆಂಬರ್ ವೇಳೆಗೆ ನಿದ್ರೆಯಿಂದ ಎಚ್ಚೆತ್ತವರಂತೆ ತೆರಿಗೆ ಪಾವತಿಗೆ ಬುಲಾವ್ ನೀಡುವುದು, ಅವಸರ ಮಾಡುವುದು, ತೆರಿಗೆ ಪಾವತಿ ವಿಳಂಬವಾದರೆ ಶುಲ್ಕ ಹಾಕುವುದಾಗಿ ಎಚ್ಚರಿಸುವುದು ಇವೆಲ್ಲವೂ ಮಾನಸಿಕ ಕಿರಿಕಿರಿಗಳು.
ಈ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ ವಲಯ ಎಷ್ಟು ನಿರ್ಲಕ್ಷ್ಯ ಹೊಂದಿದೆ ಎಂದರೆ ಸಮಸ್ಯೆಗಳನ್ನು ಕೇಳಿಸಿಕೊಳ್ಳುವುದೇ ಇಲ್ಲ. ಇದಕ್ಕಾಗಿಯೆ ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಮೇಲಿಂದ ಕೆಳಗಿನ ಹಂತದವರೆಗೆ ಸಾಕಷ್ಟು ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ವಿತ್ತ ಇಲಾಖೆಯ ಅಡಿ ಪ್ರಧಾನ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಅಧೀನ ಕಾರ್ಯದರ್ಶಿ ಹೀಗೆ ಹಲವು ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುವವರು ಇದ್ದಾರೆ.
ಇದಿಷ್ಟು ಸಾಲದೆಂಬಂತೆ ಪಕ್ಷದೊಳಗೆ ಪ್ರಧಾನಿಗೆ ಸಲಹೆ ನೀಡುವ ಒಂದು ಆರ್ಥಿಕ ಕೋಶವಿದೆ. ತುಂಬಾ ಬಲ್ಲ ಬುದ್ಧಿವಂತರು ಈ ಸೆಲ್ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಈ ಸಮಸ್ಯೆಗಳ ಅರಿವಿಲ್ಲವೆ? ನಿತ್ಯವೂ ಸಮಸ್ಯೆಗಳ ಪರಿಚಯ ಮಾಧ್ಯಮಗಳ ಮೂಲಕ ಅಥವಾ ತೆರಿಗೆ ವಲಯದ ವೃತ್ತಿ ನಿರತರೆ ಅಹವಾಲುಗಳನ್ನು ಸಲ್ಲಿಸುತ್ತಾ ಬಂದಿದ್ದಾರೆ. ಹೀಗಿದ್ದೂ ಸಮಸ್ಯೆಗಳ ಕಡೆಗೆ ಗಮನ ಹರಿಸುತ್ತಿಲ್ಲವೆಂದಾದರೆ ನಮ್ಮ ವ್ಯವಸ್ಥೆ ಇಷ್ಟೊಂದು ಕೆಟ್ಟು ಹೋಗಿದೆಯೇ ಎಂದು ಪ್ರಶ್ನಿಸುತ್ತಾರೆ ಆರ್ಥಿಕ ವಲಯದ ತಜ್ಞರು.
ಜಿ.ಎಸ್.ಟಿ. ಜಾರಿಗೆ ತಂದಾಗ 2017 ರಿಂದ ಕೆಲವು ತಪ್ಪುಗಳಾದರೂ ಆರಂಭಿಕ ಎರಡು ವರ್ಷಗಳ ಕಾಲ ಬಡ್ಡಿ ಮತ್ತು ಪೆನಾಲ್ಟಿ ಹಾಕುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದರು. ಆದರೆ ಇವೆಲ್ಲ ಕೇವಲ ಘೋಷಣೆಯಾಗಿಯೆ ಉಳಿದುಬಿಟ್ಟಿವೆ. ಆಗ ಹೇಳಿದ ಕೆಲವು ಅಧಿಕಾರಿಗಳು ಈ ದೇಶವನ್ನೇ ಬಿಟ್ಟು ಬೇರೆ ದೇಶಕ್ಕೆ ಹಾರಿದ್ದಾರೆ. ಅಲ್ಲಿ ನೆಲೆಸಿದ್ದಾರೆ. 2 ವರ್ಷ ದಂಡ ಹಾಕುವುದಿಲ್ಲ ಎಂದು ಹೇಳಿದ ಮೇಲೆ ಅದರಂತೆ ನಡೆದುಕೊಳ್ಳಬೇಕಿತ್ತಲ್ಲವೆ? ಈಗ ನೋಡಿ ಆರಂಭದಿಂದಲೂ ಸಣ್ಣಪುಟ್ಟ ತಪ್ಪುಗಳಿಗೆಲ್ಲ ವ್ಯಾಪಾರಸ್ಥರಿಗೆ ನೋಟೀಸ್ಗಳ ಮೇಲೆ ನೋಟೀಸ್ಗಳು ಬರುತ್ತಲೇ ಇವೆ.
ಒಂದೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಟ್ಯಾಕ್ಸ್ ಕಾಂಪ್ಲಯನ್ಸ್ ಕಡಿಮೆಯಾಗಬೇಕು ಎಂಬ ಸಲಹೆ ನೀಡಿದ್ದರು. ಆದರೆ ಕಡಿಮೆಯಾಗುವುದೆಲ್ಲಿ ಮತ್ತಷ್ಟು ಹೆಚ್ಚಳವಾಗಿದೆ. ಇವುಗಳನ್ನೆಲ್ಲಾ ಪ್ರಧಾನಿ ಗಮನಿಸಬೇಕಿತ್ತಲ್ಲವೆ? ಈ ಸಮಸ್ಯೆಗಳಿಗೆ ಪರಿಹಾರ ಹುಡುಕದೆ ಆರ್ಥಿಕ ಸಬಲತೆಯ ಮಾತುಗಳನ್ನಾಡಿದರೆ ಕೇವಲ ಘೋಷಣೆಯಾಗುವುದಿಲ್ಲವೆ?
ನಮ್ಮ ಈಗಿನ ವ್ಯವಸ್ಥೆ ಹೇಗಿದೆ ಎಂದರೆ ಕಳ್ಳ ವೃತ್ತಿನಿರತ ಕಳ್ಳನಾಗಲು ದಾರಿ ಮಾರ್ಗಗಳು ಹಲವಾರು ಇವೆ. ಆದರೆ ಓರ್ವ ಪ್ರಾಮಾಣಿಕ ತೆರಿಗೆದಾರ ಅಥವಾ ವ್ಯಾಪಾರಸ್ಥ ಒಂದು ಸಣ್ಣ ತಪ್ಪು ಮಾಡಿದರೆ ಆತನನ್ನು ಬಲಿ ಹಾಕಲು ಹಲವು ಕಾನೂನುಗಳಿವೆ. ಇವುಗಳಿಗೆ ಹೆದರಿ ಪ್ರಾಮಾಣಿಕ ತೆರಿಗೆದಾರರು ರಿಟರ್ನ್ ಫೈಲ್ ಮಾಡುತ್ತಲೆ ಬಂದಿದ್ದಾರೆ. ಇಂತಹ ವರ್ಗ ತನ್ನದಲ್ಲದ ತಪ್ಪಿಗೆ ಬೆಲೆ ತೆತ್ತಿರುವ ಉದಾಹರಣೆಗಳು ಹಲವು.
ಓರ್ವ ಉದ್ಯಮಿ 8 ಕೋಟಿ ರೂ.ಗಳ ವಹಿವಾಟು ನಡೆಸಿರುತ್ತಾನೆ. ಸರಕು ಮತ್ತು ಸೇವಾ ತೆರಿಗೆ ಇಲಾಖೆಯ ದಾಖಲೆಗಳಲ್ಲಿ 8 ಕೋಟಿ ಬದಲಿಗೆ 80 ಕೋಟಿ ಎಂದು ನಮೂದಿಸಿಕೊಳ್ಳುತ್ತಾರೆ. ಈ ತಪ್ಪು ನಮೂದು ಇಲಾಖೆಯೊಳಗಿನ ಅಧಿಕಾರಿ ವರ್ಗದಿಂದಲೆ ಆಗಿರುತ್ತದೆ.
ಆದರೆ ಆಗಿರುವ ತಪ್ಪನ್ನು ಸರಿಪಡಿಸುವ ಮಾರ್ಗೋಪಾಯಗಳನ್ನು ಹುಡುಕುವ ಬದಲು 80 ಕೋಟಿ ವಹಿವಾಟು ನಡೆಸಿರುವ ಉದ್ಯಮಿ 8 ಕೋಟಿಗಷ್ಟೆ ತೆರಿಗೆ ಪಾವತಿಸಿದ್ದಾನೆ. ಉಳಿದ ಮೊತ್ತಕ್ಕೆ ನೋಟೀಸ್ ನೀಡಿ ಎಂದು ಸುತ್ತೋಲೆ ರವಾನೆಯಾಗುತ್ತದೆ. ಈ ನೋಟೀಸ್ ಹಿಡಿದು ವ್ಯಾಪಾರಸ್ಥ ಮತ್ತು ತೆರಿಗೆ ವೃತ್ತಿನಿರತರು ಇಲಾಖೆಗಳಿಗೆ ಅಲೆಯಬೇಕು. ಇದೆಂಥಾ ಪರಿಸ್ಥಿತಿ !
ಪೋರ್ಟಲ್ ವ್ಯವಸ್ಥೆ ಮೊದಲು ಸರಿಪಡಿಸಿ
ತೆರಿಗೆದಾರರು, ಸರಕು ಮತ್ತು ಸೇವಾ ತೆರಿಗೆ ಕ್ಷೇತ್ರ ಇನ್ನೂ ಸುಧಾರಿಸಿಲ್ಲ. ಪೋರ್ಟಲ್ ವ್ಯವಸ್ಥೆ ಸರಿಯಾಗದೆ ಕೇವಲ ತೆರಿಗೆದಾರನನ್ನು ದೂಷಿಸಿದರೆ ಪ್ರಯೋಜನವಿಲ್ಲ. ತೆರಿಗೆ ಪಾವತಿಸುವ ಪ್ರಾಮಾಣಿಕ ಜನ ನಮ್ಮಲ್ಲಿದ್ದಾರೆ. ಆದರೆ ಅದನ್ನು ಪಾವತಿಸುವಂತಹ ಸೂಕ್ತ ವ್ಯವಸ್ಥೆಗಳು ನಿರ್ಮಾಣವಾಗಬೇಕು. ಇದರ ಬದಲಿಗೆ ನೋಟೀಸ್ ನೀಡುವ ಪ್ರಕ್ರಿಯೆ, ಬಡ್ಡಿ ಹಾಕುವ, ದಂಡ ಹಾಕುವ ನೋಟೀಸ್ ಪ್ರಕ್ರಿಯೆಗಳೆ ಹೆಚ್ಚುತ್ತಿವೆ.
ಪೋರ್ಟಲ್ ವ್ಯವಸ್ಥೆ ಸುಧಾರಿಸುವ ಕಡೆಗೆ, ದಿನದ 24 ಗಂಟೆ ಸದರಿ ಪೋರ್ಟಲ್ ಕಾರ್ಯನಿರ್ವಹಿಸುವಂತೆ ನೋಡಿಕೊಂಡರೆ ಸಾಕು. ಈ ವ್ಯವಸ್ಥೆ ತನಗೆ ತಾನೆ ಸರಿ ಹೋಗುತ್ತದೆ. ನಮ್ಮಲ್ಲಿ ವಿತ್ತ ಸಚಿವಾಲಯವಿದೆ. ಅದರೊಳಗೆ ನುರಿತ ಅಧಿಕಾರಿಗಳಿದ್ದಾರೆ. ಪ್ರಧಾನ ಮಂತ್ರಿಗಳ ಕೈಕೆಳಗೆ ಒಂದು ಎಕನಾಮಿಕ್ ಸೆಲ್ ಇದೆ. ಇವರೆಲ್ಲ ಏನು ಮಾಡುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ.
-ಎಸ್.ಪ್ರಕಾಶ್, ಹಿರಿಯ ತೆರಿಗೆ ಸಮಾಲೋಚಕರು.
ಹೈಕೋರ್ಟ್ಗಳು ಚಾಟಿ ಬೀಸಿದರೂ ಎಚ್ಚರ ವಹಿಸಿಲ್ಲ
ತೆರಿಗೆ ಇಲಾಖೆಯಲ್ಲಿನ ಅವ್ಯವಸ್ಥೆಗಳು ಮತ್ತು ಗೊಂದಲಗಳ ಬಗ್ಗೆ ದೇಶದ ವಿವಿಧ ಹೈಕೋರ್ಟ್ಗಳು ಅಸಮಾಧಾನ ವ್ಯಕ್ತಪಡಿಸಿವೆ. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಬಗ್ಗೆಯೂ ಹೈಕೋರ್ಟ್ಗಳು ಉಲ್ಲೇಖಿಸಿವೆ. ಸಾಕಷ್ಟು ಆದೇಶಗಳು ಬಂದಿದ್ದರೂ ಇಲಾಖೆಗಳು ಈ ಬಗ್ಗೆ ಗಮನ ಹರಿಸುತ್ತಿಲ್ಲ. ಬದಲಾಗಿ ತಕ್ಕಂತೆ ಮಾರ್ಪಾಡುಗಳನ್ನು ಮಾಡಿ ಮತ್ತಷ್ಟು ಗೊಂದಲ ಸೃಷ್ಟಿಯಾಗುತ್ತಿವೆ.
ಆದಾಯ ತೆರಿಗೆ, ಜಿ.ಎಸ್.ಟಿ. ವ್ಯಾಪ್ತಿಯಲ್ಲಿರುವ ತೆರಿಗೆದಾರರಿಗೆ, ವ್ಯಾಪಾರಸ್ಥರಿಗೆ ಅನುಕೂಲವಾಗುವಂತಹ ಸರಳೀಕೃತ ನಿಯಮಗಳು ಜಾರಿಯಾಗಬೇಕು. ಗೊಂದಲಗಳು ನಿವಾರಣೆಯಾಗಬೇಕು. ತೆರಿಗೆ ಕ್ಷೇತ್ರದಲ್ಲಿರುವವರಿಗೆ ಅರ್ಥವಾಗದ ನಿಯಮಾವಳಿಗಳನ್ನು ಹೇರಿ ಗೊಂದಲಕ್ಕೆ ಸಿಲುಕಿಸಬಾರದು.
ಈ ಬಗ್ಗೆ ಇಲಾಖೆಯ ಉನ್ನತ ಅಧಿಕಾರಿಗಳು, ವಿತ್ತ ಸಚಿವಾಲಯ, ಸಚಿವರುಗಳಾದಿಯಾಗಿ ಪ್ರತಿಯೊಬ್ಬರೂ ಗಮನ ಹರಿಸಿದರೆ ತೆರಿಗೆದಾರರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿದೆ ಎನ್ನುತ್ತಾರೆ ಎಸ್.ಪ್ರಕಾಶ್.
ಉದ್ಯಮ ವಲಯದ ಬಗ್ಗೆ ನಿರ್ಲಕ್ಷ್ಯ
ಉದ್ಯಮ ವಲಯದೊಂದಿಗೆ ವೆಬಿನಾರ್ನಲ್ಲಿ ಈ ಹಿಂದೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿಯವರು ಉದ್ಯಮ ಕ್ಷೇತ್ರ ಅಭಿವೃದ್ಧಿ ಹೊಂದಲು ಸರ್ಕಾರ ಗಮನ ಹರಿಸಲಿದೆ. ಯಾವುದಾದರೂ ಸಮಸ್ಯೆಗಳಿದ್ದಲ್ಲಿ ಅವುಗಳನ್ನು ನೇರವಾಗಿ ನನ್ನ ಗಮನಕ್ಕೆ ತರಬಹುದು, ಪತ್ರ ಬರೆಯಬಹುದು. ಸರ್ಕಾರವು ಈ ಎಲ್ಲ ಸಮಸ್ಯೆಗಳನ್ನು ಪರಿಹರಿಸಲು ಸಿದ್ಧವಿದೆ.
ತಂತ್ರಜ್ಞಾನವನ್ನು ಅಳವಡಿಸಿಕೊಂಡು ಮುಂದಿನ ದಿನಗಳಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರ ರೂಪಿಸಲಾಗುವುದು ಎಂದಿದ್ದರು. ಈಸ್ ಆಫ್ ಡೂಯಿಂಗ್ ಬಗ್ಗೆ ಒತ್ತಿ ಹೇಳಿದ್ದರು. ಆದರೆ ಈ ಕ್ಷೇತ್ರದಲ್ಲಿ ತೆಲ ಎತ್ತಿರುವ ಹಲವು ಸಮಸ್ಯೆಗಳಿಗೆ ಪ್ರಧಾನಿಯವರು ಮಾತನಾಡುತ್ತಿಲ್ಲ. ಈ ಬಗ್ಗೆ ಉದ್ಯಮ ವಲಯದಲ್ಲಿ ಸಾಕಷ್ಟು ಅಸಮಾಧಾನವಿದೆ.
– ಸಾ.ಚಿ.ರಾಜಕುಮಾರ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ