ಭತ್ತದ ಬದಲಿಗೆ 2ನೇ ಬೆಳೆಯಾಗಿ ಎಣ್ಣೆಕಾಳುಗಳನ್ನು ಬೆಳೆಯುವಂತೆ ರೈತರಿಗೆ ಜಾಗೃತಿ ಮೂಡಿಸಿ ಎಂದು ಕರ್ನಾಟಕ ಸರ್ಕಾರದ ಕೃಷಿ ಸಚಿವರಾದ ಬಿ.ಸಿ ಪಾಟೀಲ್ ಅವರು ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಪ್ರವಾಸಿ ಮಂದಿರದ ಸಭಾಂಗಣದಲ್ಲಿ ಕೃಷಿ ಇಲಾಖೆ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿ, ಮಾತನಾಡಿದರು.
ಕೊಪ್ಪಳ ಜಿಲ್ಲೆಯ ಗಂಗಾವತಿ ಸೇರಿ ಹಲವು ಭಾಗಗಳಲ್ಲಿ ಹೆಚ್ಚಾಗಿ ಭತ್ತವನ್ನು ಬೆಳೆಯಲಾಗುತ್ತದೆ. ಮೊದಲ ಮತ್ತು ಎರಡನೇ ಬೆಳೆಯಾಗಿ ಭತ್ತವನ್ನೆ ಮಾತ್ರ ಬೆಳೆಯುತ್ತಾರೆ. ಇದರಿಂದ ಎರಡನೇ ಬೆಳೆಯಲ್ಲಿ ನಿರೀಕ್ಷೆಗಿಂತ ಅಧಿಕ ಇಳುವರಿ ಬರದೇ ಭೂಮಿಯ ಫಲವತ್ತತೆಯೂ ಸಹ ಕಡಿಮೆಯಾಗುತ್ತದೆ.
ಆದ್ದರಿಂದ ರೈತರು ಮೊದಲ ಬೆಳೆಯಲ್ಲಿ ಮಾತ್ರ ಭತ್ತವನ್ನು ಬೆಳೆಯಬೇಕು ಹಾಗೂ ಎರಡನೇ ಬೆಳೆಯಲ್ಲಿ ಶೇಂಗಾ, ಸೂರ್ಯಕಾಂತಿ, ಸೋಯಾಬೀನ್ ದಂತಹ ಎಣ್ಣೆಕಾಳು ಬೆಳೆಗಳನ್ನು ಬೆಳೆಯುವುದರಿಂದ ಹೆಚ್ಚು ಇಳುವರಿ ಬರುವುದರ ಜೊತೆಗೆ ಮಣ್ಣಿನ. ತೇವಾಂಶವನ್ನು ಸಹ ಕಾಪಾಡಿಕೊಳ್ಳುವಂತಾಗುತ್ತದೆ.
ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೃಷಿ ಇಲಾಖೆ ಎಲ್ಲಾ ಅಧಿಕಾರಿಗಳು ವಿಶೇಷವಾಗಿ ಇಲಾಖೆ ಸಹಾಯಕ ನಿರ್ದೇಶಕರು ತಮ್ಮ ತಾಲ್ಲೂಕು ವ್ಯಾಪ್ತಿಯ ಒಂದೊAದಾಗಿ ಗ್ರಾಮ ಪಂಚಾಯತಿಯನ್ನು ದತ್ತು ಪಡೆದುಕೊಂಡು ಅರಿವು ಮೂಡಿಸಬೇಕು ಎಂದರು.
ಫಸಲ್ ವಿಮಾ ಯೋಜನೆಯಡಿ 2015-16ನೇ ಸಾಲಿನಲ್ಲಿ 330 ಜನರಿಗೆ ಇನ್ಸೂರೆನ್ಸ್ ನೀಡುವುದು ಬಾಕಿ ಇದ್ದು, ಈ ಬಗ್ಗೆ ಅಧಿಕಾರಿಗಳು ಸಂಬಧಿಸಿದ ರೈತರ ಗ್ರಾಮಗಳಲ್ಲಿ ಜಾಗೃತಿ ಮೂಡಿಸಬೇಕು. ಈ ಪ್ರಕರಣವನ್ನು ಹತ್ತು ದಿನಗಳೊಳಗಾಗಿ ಇತ್ಯರ್ಥ ಪಡಿಸಿ ಪರಿಹಾರ ಮೊತ್ತವನ್ನು ರೈತರಿಗೆ ದೊರಕುವಂತೆ ಮಾಡಬೇಕು.
ಹೈನುಗಾರಿಕೆ ಯೋಜನೆಯಡಿ ರೈತರು ತಮ್ಮ ಬಳಿ ಇದ್ದ ಹಸುಗಳನ್ನು ಹಾಜರುಪಡಿಸಿ ಈ ಯೋಜನೆಯಡಿ ಸೌಲಭ್ಯ ಪಡೆಯುತ್ತಿದ್ದಾರೆ. ಯೋಜನೆ ಫಲಾನುಭವಿಗಳು ಹೈನುಗಾರಿಕೆ ಮಾಡುತ್ತಿದ್ದಾರೆಯೇ ಎಂಬುವುದರ ಬಗ್ಗೆ ಸಂಬAಧಿಸಿದ ಅಧಿಕಾರಿಗಳು ಪರಿಶೀಲಿಸಬೇಕು. ಯೋಜನೆಯ ಸೌಲಭ್ಯ ಕಲ್ಪಿಸಲು ಮೊದಲು ರೈತರಿಂದ ಒಟ್ಟು ಮೊತ್ತವನ್ನು ಪಾವತಿಸಿಕೊಂಡು,
ಅಧಿಕಾರಿಗಳು ಖುದ್ದಾಗಿ ಉತ್ತಮ ತಳಿಯ ರಾಸುಗಳನ್ನು ರೈರಿಗೆ ನೀಡಬೇಕು. ನಂತರ ಸಹಾಯಧನಮೊತ್ತವನ್ನು ನೀಡಿ. ಕೇವಲ ಸಹಾಯಧನ ಪಡೆಯುವುದಕ್ಕಾಗಿ ಮಾತ್ರ ಈ ಯೋಜನೆಯಾಗದಿರಲಿ ಎಂದು ಸೂಚನೆ ನೀಡಿದರು.
ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ನವೆಂಬರ್ ಮಾಹೆಯಲ್ಲಿ ಬಂದಂತಹ ಅತೀವೃಷ್ಟಿ ಮಳೆಯಿಂದ ಹಾನಿಯಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳನ್ನು ಒಂದು ವಾರದಲ್ಲಿ ತ್ವರಿತವಾಗಿ ಕಂದಾಯ, ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಮೂಲಕ 49,002 ಹೆಕ್ಟರ್ ಪ್ರದೇಶವನ್ನು ಜಂಟಿ ಸಮೀಕ್ಷೆ ಮಾಡಿ ಬೆಳೆಹಾನಿಯಾದ 60,521 ರೈತರಿಗೆ ರೂ. 40.79 ಕೋಟಿ ಪರಿಹಾರ ಮೊತ್ತವನ್ನು ರೈತರ ಖಾತೆಗೆ ನೇರವಾಗಿ ಡಿಬಿಟಿ ಮೂಲಕ ಜಮೆ ಮಾಡಲಾಗಿದೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿಯಲ್ಲಿ ಜಿಲ್ಲೆಯ 1.52 ಲಕ್ಷ ಅರ್ಹ ರೈತರುಗಳಿಗೆ 10ನೇ ಕಂತಿನ ಮೊತ್ತ 30.61 ಕೋಟಿ ರೈತರ ಖಾತೆಗೆ ಜಮೆ ಆಗಿರುತ್ತದೆ. ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಡಿ 2020-21ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಅರ್ಹ 19,654 ರೈತರುಗಳಿಗೆ 19.35 ಕೋಟಿ ಹಾಗೂ ಹಿಂಗಾರು ಹಂಗಾಮಿನಲ್ಲಿ 5647 ರೈತರಿಗೆ 5.61 ಕೋಟಿ ಬೆಳೆವಿಮೆ ರೈತರ ಖಾತೆಗೆ ಜಮೆ ಆಗಿರುತ್ತದೆ ಎಂದರು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಶಿಷ್ಯವೇತನ ಯೋಜನೆಯಡಿ ರೈತರ ಮಕ್ಕಳ ಹೆಚ್ಚಿನ ಹಾಗೂ ಉನ್ನತ ಶಿಕ್ಷಣವನ್ನು ಪ್ರೋತ್ಸಾಹಿಸಲು ಹೊಸ ಶಿಷ್ಯವೇತನ ಯೋಜನೆಯನ್ನು ನಮ್ಮ ಸರ್ಕಾರವು ಜಾರಿಗೆ ತಂದಿದ್ದು, ಪ್ರೌಢ ಶಿಕ್ಷಣ 8 ರಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ರೈತ ಕುಟುಂಬದ ಹೆಣ್ಣು ಮಕ್ಕಳಿಗೆ ವಾರ್ಷಿಕ ರೂ. 2000 ಹಾಗೂ ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಿದ
ನಂತರ ಹೆಚ್ಚಿನ ವಿಧ್ಯಾಭ್ಯಾಸಕ್ಕಾಗಿ ಉನ್ನತ ಶಿಕ್ಷಣಕ್ಕೆ ಪ್ರವೇಶ ಪಡೆದ ರೈತ ಕುಟುಂಬದ ಎಲ್ಲಾ ವಿದ್ಯಾರ್ಥಿಗಳಿಗೆ ವಾರ್ಷಿಕ ರೂ. 2500 ರಿಂದ ರೂ 11,000 ಗಳ ವರೆಗೆ ಶಿಷ್ಯವೇತನ ನೀಡಲಾಗುತ್ತದೆ. ಇಲ್ಲಿಯವರೆಗೆ ಕೊಪ್ಪಳ ಜಿಲ್ಲೆಯ 17157 ವಿದ್ಯಾರ್ಥಿಗಳಿಗೆ ರೂ. 4.14 ಕೋಟಿ ಶಿಷ್ಯವೇತನವನ್ನು ಡಿ.ಬಿ.ಟಿ ಮೂಲಕ ಬ್ಯಾಂಕ್ ಖಾತೆಗೆ ಪಾವತಿಸಲಾಗಿರುತ್ತದೆ.
ಸಭೆಯಲ್ಲಿ ಜಂಟಿ ಕೃಷಿ ನಿರ್ದೇಶಕರಾದ ಸದಾಶಿವ ಮಾತನಾಡಿ, 2021ನೇ ಸಾಲಿನಲ್ಲಿ ಜಿಲ್ಲೆಯ ವಾಡಿಕೆ ಮಳೆ 614 ಮೀ.ಮೀ. ಗೆ 640 ಮೀ.ಮೀ. ವಾಸ್ತವಿಕ ಮಳೆಯಾಗಿರುತ್ತದೆ. ಶೇಕಡಾ 4 ರಷ್ಟು ಹೆಚ್ಚು ಮಳೆಯಾಗಿರುತ್ತದೆ. ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯ ಬಿತ್ತನೆ ಗುರಿ 3.08 ಲಕ್ಷ ಹೆಕ್ಟರ್ಗೆ 3.09 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಶೇ. 100 ರಷ್ಟು ಬಿತ್ತನೆಯಾಗಿರುತ್ತದೆ.
ಹಾಗೂ ಹಿಂಗಾರು ಹಂಗಾಮಿನಲ್ಲಿ 1.55 ಲಕ್ಷ ಹೆಕ್ಟರ್ಗೆ 1.73 ಲಕ್ಷ ಹೆಕ್ಟರ್ ಪ್ರದೇಶದಲ್ಲಿ ಶೇ. 112 ರಷ್ಟು ಬಿತ್ತನೆಯಾಗಿರುತ್ತದೆ. ಈ ವರ್ಷ ಮುಂಗಾರು ಹಾಗೂ ಹಿಂಗಾರು ಹಂಗಾಮು ಜಿಲ್ಲೆಗೆ ಆಶಾದಾಯಕವಾಗಿರುತ್ತದೆ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಕೊಪ್ಪಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಿ.ಫೌಜಿಯಾ ತರನ್ನುಮ್, ಅಪರ ಜಿಲ್ಲಾಧಿಕಾರಿ ಎಂ.ಪಿ ಮಾರುತಿ ಸೇರಿದಂತೆ ಕೃಷಿ ಇಲಾಖೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ