ಬೆಂಗಳೂರು:
ಬೆಲೆ ಏರಿಕೆ ಅನಿವಾರ್ಯ ಎಂದ ಸರ್ಕಾರ
ಮದ್ಯಪಾನದ ಬೆಲೆ ಏರಿಸಲು ಸರ್ಕಾರ ನಿರ್ಧರಿಸಿದೆ ಎನ್ನಲಾಗಿದೆ. ಕೋರೋನಾದಿಂದಾಗಿ ಆರ್ಥಿಕ ಚಟುವಟಿಕೆ ಸಂಪೂರ್ಣವಾಗಿ ಕುಸಿದಿದೆ. ಹೀಗಾಗಿ ಸರ್ಕಾರದ ಬೊಕ್ಕಸಕ್ಕೆ ಭಾರೀ ನಷ್ಟವಾಗುತ್ತಿದೆ.
ದೇಸಿಯ ಮದ್ಯದ ಬೆಲೆ ಏರಿಕೆಗೆ ನಿರ್ಧಾರ?
ಪ್ರಮುಖವಾಗಿ ದೇಸಿಯವಾಗಿ ಉತ್ಪಾದನೆಯಾಗುವ ಇಂಡಿಯನ್ ಮೇಡ್ ಲಿಕ್ಕರ್ ಮೇಲಿನ ದರ ಏರಿಕೆಗೆ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ. ಇದರ ಜೊತೆಗೆ ಬಿಯರ್‌ಗಳ ಬೆಲೆಯೂ ಏರಿಕೆಯಾಗೋ ಸಂಭವವಿದೆ. ಶೇ.5ರಿಂದ 10ರಷ್ಟು ಸುಂಕ ಏರಿಕೆಗೆ ನಿರ್ಧರಿಸಲಾಗಿದೆ ಅಂತ ಮೂಲಗಳು ತಿಳಿಸಿವೆ.
28 ಸಾವಿರ ಕೋಟಿ ಆದಾಯದ ಗುರಿ ಹೊಂದಿರುವ ಸರ್ಕಾರ
ಸಾಮಾನ್ಯವಾಗಿ ಮದ್ಯ ಮಾರಾಟದಿಂದಲೇ ಅಂದರೆ ಅಬಕಾರಿ ಇಲಾಖೆಯಿಂದಲೇ ಸರ್ಕಾರಕ್ಕೆ ಅತಿ ಹೆಚ್ಚಿನ ಆದಾಯ ಬರುತ್ತಿದೆ. ಪ್ರಸಕ್ತ ವರ್ಷ ಅಂದರೆ 2022-2023ರಲ್ಲಿ ಸುಮಾರು 28,000 ಕೋಟಿ ಆದಾಯದ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ.
ಹಿಂದಿನ ಬಾರಿಯೂ ಏರಿಕೆಯಾಗಿತ್ತು ಬೆಲೆ
2019-20ರಲ್ಲಿ ಬಿಯರ್ ಮೇಲಿನ ಹೆಚ್ಚುವರಿ ಅಬಕಾರಿ ಸುಂಕವನ್ನು ಶೇ.150ರಿಂದ ಶೇ.175ಕ್ಕೆ ಹೆಚ್ಚಿಸಲಾಗಿತ್ತು. ಡ್ರಾಟ್ ಬಿಯರ್ ಮೇಲೆ ಶೇ.115 ರಿಂದ ಶೇ.150ಕ್ಕೆ, ಮೈಕ್ರೋ ಬ್ರಿವರೇಜಸ್‌ಗಳ ಮೇಲೆ , ವರಿಯಲ್ಲಿ ತಯಾರಾಗುವ ಬಿಯರ್ ಮೇಲೆ 5 ರೂಪಾಯಿಗಳಿಂದ 10 ರೂಪಾಯಿಗಳವರೆಗೆ ಏರಿಸಲಾಗಿತ್ತು. ಜೊತೆಗೆ, ಹೆಚ್ಚುವರಿ ಅಬಕಾರಿ ಸುಂಕವನ್ನು ಪ್ರತಿ ಬಲ್ಕ್ ಲೀ.ಗೆ 12.50 ರೂ. ನಿಂದ 25 ರೂ.ಗೆ ಏರಿಸಲಾಗಿತ್ತು.
ಐಎಂಎಲ್ ಮೇಲೆ ಅಬಕಾರಿ ಸುಂಕವನ್ನು ಶೇ.122ರಿಂದ ಶೇ.150ಕ್ಕೆ ಏರಿಸಲಾಗಿತ್ತು. 2020-21ರ ಬಜೆಟ್‌ನಲ್ಲಿ ಮದ್ಯದ ಮೇಲೆ ಶೇ.6 ಹೆಚ್ಚುವರಿ ಅಬಕಾರಿ ಸುಂಕ ವಿಧಿಸಲಾಗಿತ್ತು. ಆದರೆ, ಇದು ಕಳೆದ ವರ್ಷದ ಲಾಕ್‌ಡೌನ್‌ನಿಂದಾಗಿ ಜಾರಿಗೆ ಬಂದಿರಲಿಲ್ಲ.
ಈ ಬಾರಿ ಬಜೆಟ್‌ನಲ್ಲಿ ಬೀಳಲಿದೆ ಮದ್ಯಪ್ರಿಯರಿಗೆ ಬರೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಾರ್ಚ್ ಮೊದಲ ವಾರದಲ್ಲಿ ಮಂಡಿಸಲಿರುವ ತಮ್ಮ ಬಜೆಟ್‌ನಲ್ಲಿ ಲಿಕ್ಕರ್ ಮತ್ತು ಬಿಯರ್ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ಅಥವಾ ಎಇಡಿ ಹೆಚ್ಚಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ಹೀಗಾಗಿ ಏಪ್ರಿಲ್ 1ರಿಂದ ಆಲ್ಕೋಹಾಲ್‌ಯುಕ್ತ ಪಾನೀಯಗಳ ಬೆಲೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
