ಬೆಂಗಳೂರು:
ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್ ನಾಯಕರು ವಿಧಾನಸೌಧದ ಒಳಗೆ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಇಂದು ಕೂಡ ಮುಂದುವರಿದಿದೆ. ಇಂದು ಸದನದ ಒಳಗೆ ಕಲಾಪ ವೇಳೆ ಕಾಂಗ್ರೆಸ್ ನಾಯಕರು ಇನ್ನಷ್ಟು ಪಟ್ಟು ಹಿಡಿಯುವ ಸಾಧ್ಯತೆ ನಿಚ್ಛಳವಾಗಿದೆ.
ನಿನ್ನೆ ರಾತ್ರಿ ವಿಧಾನಸೌಧದ ಒಳಗೆ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ನಾಯಕರ ಬಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಬಂದು ಮಾತನಾಡಿಸಿದ್ದಾರೆ. ಡಿ ಕೆ ಶಿವಕುಮಾರ್ ಬಳಿ ಬಂದ ಸ್ಪೀಕರ್ ಕಾಗೇರಿ, ನೀವು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಇದ್ದೀರಿ, ಜವಾಬ್ದಾರಿಯುತ ಸ್ಥಾನದಲ್ಲಿ ಇದ್ದೀರಾ. ನಿನ್ನೆ ನೀವು ಅಷ್ಟು ಸಿಟ್ಟಾಗಿದ್ದು ಯಾವತ್ತೂ ನೋಡಿಲ್ಲ ಎಂದರು.
ಈ ವೇಳೆ, ಡಿಕೆಶಿ ಹಳೆ ಘಟನೆಯನ್ನು ಮೆಲಕು ಹಾಕಿದರು. ನನಗೆ ಈ ಹಿಂದೆ ನಮ್ಮಪ್ಪ ಯಾರು ಅಂತ ಪ್ರಶ್ನೆ ಮಾಡಿದ್ರು. ನನ್ನ ಅಮ್ಮ ಇಲ್ಲೇ ಇದ್ದಾದೆ ಕೇಳಿಸ್ತಿನಿ ಬನ್ನಿ ಎಂದಿದ್ದೆ ಎಂದು ಹೇಳುತ್ತಾ. ಆವತ್ತು ಈ ಕುರಿತು ಪೊಲೀಸ್ ಕೇಸ್ ಕೂಡ ಆಗಿತ್ತು, ಅದು ದೊಡ್ಡ ಸುದ್ದಿಯಾಗಿತ್ತು ಎಂದು ಹಳೆಯ ಘಟನೆ ಸ್ಮರಿಸಿದರು.
ಬನ್ನಿ ಕುಳಿತುಕೊಂಡು ಮಾತಾಡಿ, ಇದು ವಿರೋಧ ಪಕ್ಷದ ಸೀಟು ಸ್ಪೀಕರ್ ಸೀಟಲ್ಲ ಎಂದು ತಮಾಷೆಯಿಂದ ಮಾತಾಡಿದಕ್ಕೆ ಕಾಗೇರಿಯವರು, ನಾವು ಕೂಡ 25 ವರ್ಷ ವಿರೋಧ ಪಕ್ಷದಲ್ಲಿದ್ದೆವು ಎಂದರು.
ಸಿಎಂ ಕೂಡ ಬಂದಿದ್ರು, ಮತ್ತೆ ಬರುತ್ತೇವೆ ಅಂದಿದ್ದಾರೆ. ಅವರಿಗೆ ನಾವು ವ್ಯವಸ್ಥೆ ಮಾಡಬೇಕಾ?. ಇಲ್ಲಾ ನೀವು ವ್ಯವಸ್ಥೆ ಮಾಡುತೀರಾ ಅಂತ ಕೇಳಿದ್ರು. ಎಲ್ಲ ನಾವೇ ವ್ಯವಸ್ಥೆ ಮಾಡುತ್ತೇವೆ ಅಂತ ಹೇಳಿದ್ದೇನೆ ಎಂದು ಡಿಕೆಶಿಗೆ ಹೇಳಿದರು. ಆಗ ನಿಮ್ಮ ಖುಷಿ ಏನಿದೆ ಅದು ಮಾಡಿ ಎಂದು ಡಿಕೆಶಿ ಹೇಳಿದರು.
ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಮಾಜಿ ಸಿಎಂ ಸಿದ್ದರಾಮಯ್ಯನವರ ಬಳಿಗೆ ಹೋಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿಸಿದರು. ಏನಾದರೂ ಅಗತ್ಯ ಇದ್ದರೆ ಹೇಳಿ ಎಂದು ಸ್ಪೀಕರ್ ಕಾಗೇರಿ ಸಿದ್ದರಾಮಯ್ಯರ ಬಳಿ ಕೇಳಿಕೊಳ್ಳುತ್ತಾರೆ. ಆಗ ಸಿದ್ದರಾಮಯ್ಯ ಕಳೆದ ಬಾರಿ ಮಲಗಿದ್ದಾಗ ಹೆಗ್ಗಣಗಳು ಕಾಟ ಕೊಟ್ಟಿದ್ದವು ಅಂತಾರೆ.
ಆಗ ಸ್ಪೀಕರ್ ಕಾಗೇರಿ, ಈಗಲೂ ಸಣ್ಣ ಸಣ್ಣ ಇಲಿಗಳಿವೆ ಸಾರ್ ಎಂದು ಪ್ರತಿಕ್ರಿಯಿಸುತ್ತಾರೆ. ಇವತ್ತೂ ಏನಾದರೂ ಇಲಿಗಳು ಬಂದ್ರೆ ನಾನೇ ಬಿಟ್ಟಿದ್ದು ಅಂತ ಮಾತ್ರ ಹೇಳಬೇಡಿ ಎಂದರು. ಆಗ ಎಲ್ಲರೂ ನಗೆಗಡಲಲ್ಲಿ ತೇಲಿದರು.
ಇನ್ನು ವಿಧಾನ ಪರಿಷತ್ ನ ಸಭಾಂಗಣದೊಳಗೆ ಅಹೋರಾತ್ರಿ ಧರಣಿ ನಿರತ ಕಾಂಗ್ರೆಸ್ ನಾಯಕರನ್ನು ಸಭಾಪತಿ ಬಸವರಾಜ ಹೊರಟ್ಟಿ ಭೇಟಿ ಮಾಡಿ ಉಭಯ ಕುಶಲೋಪರಿ ವಿಚಾರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ