ಕಲಬುರಗಿ:
ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ‘ಸ್ವಾಮಿತ್ವ ಹಕ್ಕುಪತ್ರ ವಿತರಣೆ’ಗೆ ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 24ರಂದು ಕಲಬುರಗಿ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದೆ.
‘ರಾಜ್ಯದ ಶಿವಮೊಗ್ಗ, ವಿಜಯನಗರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಸ್ವಾಮಿತ್ವ ಹಕ್ಕುಪತ್ರ ವಿತರಣೆ ಕಾರ್ಯಕ್ರಮಗಳು ನಡೆಯಲಿವೆ.
ಕಲಬುರಗಿ ತಾಲ್ಲೂಕಿನ ಭೀಮಳ್ಳಿ ಗ್ರಾಮದಲ್ಲಿ ಕೂಡ ಈ ಸಮಾರಂಭಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಪ್ರಧಾನಿ ಭೇಟಿಯ ಬಗ್ಗೆ ನಮಗೆ ಅಧಿಕೃತ ಮಾಹಿತಿ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ಯಶವಂತ್ ಗುರುಕರ್ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ ರೇವೂರ ಅವರು, ‘ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟ ಭೀಮಳ್ಳಿ ಗ್ರಾಮದಲ್ಲಿ ಸ್ವಾಮಿತ್ವ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಲಾಗಿದೆ.
ನನ್ನ ಕ್ಷೇತ್ರಕ್ಕೆ ಪ್ರಧಾನಿ ಅವರು ಬರುತ್ತಿರುವ ಸುದ್ದಿ ಸಂತಸದಾಯಕ. ಈಗಾಗಲೇ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿದ್ದೇನೆ. ಅತ್ಯಂತ ಹಿಂದುಳಿದ ಈ ಭಾಗಕ್ಕೆ ಪ್ರಧಾನಿ ಬಂದರೆ ನಮಗೆ ಆನೆಬಲ ಬಂದಂತೆ. ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳುತ್ತೇವೆ’ ಎಂದರು.
ಹಳ್ಳಿಗಳಲ್ಲಿನ ಆಸ್ತಿಗಳ ಹಕ್ಕನ್ನು ಜನರಿಗೇ ಮಾಡಿಕೊಡುವುದು ‘ಸ್ವಾಮಿತ್ವ’ ಯೋಜನೆಯ ಉದ್ದೇಶ. ರಾಜ್ಯದ 16 ಜಿಲ್ಲೆಗಳಲ್ಲಿ ಇದರ ಡ್ರೋಣ್ ಸರ್ವೆ ಮಾಡಲಾಗುತ್ತಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ