ಬೆಳಗಾವಿ:
ಉಕ್ರೇನ್‌ನ ಖಾರ್ಕಿವ್‌ನಲ್ಲಿದ್ದ ಗ್ರಾಮದ ವೈದ್ಯಕಿಯ ವಿದ್ಯಾರ್ಥಿ ಸಹೋದರರಾದ ನಾಗೇಶ ಪೂಜಾರಿ, ರಾಕೇಶ ಪೂಜಾರಿ ಮಂಗಳವಾರ ಖಾರ್ಕಿವ್‌ನಿಂದ ಟ್ರೇನ್ ಮೂಲಕ ರಾಖಿವ್‌ಗೆ ಪ್ರಯಾಣ ಬೆಳೆಸಿದ್ದಾರೆ.
ಮಂಗಳವಾರ ವೀಡಿಯೋ ಕಾಲ್ ಮೂಲಕ ಮಾತನಾಡಿದ ನಾಗೇಶ ಪೂಜಾರಿ, 4 ದಿನಗಳಿಂದ ಖಾರ್ಕಿವ್‌ನಲ್ಲಿ ಸುರಕ್ಷತೆಗಾಗಿ ನೆಲಮಳಿಗೆಯಲ್ಲಿ ವಾಸವಾಗಿದ್ದರೂ ದಿನದಿಂದ ದಿನಕ್ಕೆ ಆಹಾರ, ನೀರಿನ ಸಮಸ್ಯೆ ಉಂಟಾಗಿತ್ತು.
ಈ ಎರಡು ದಿನದಲ್ಲಿ ಪರಿಸ್ಥಿತಿ ಗಂಭೀರವಾಗಿತ್ತು. ಖಾರ್ಕಿವ್‌ನ ಜನ ಸ್ವತಃಕೈಯಲ್ಲಿ ಬಂದೂಕು ಎತ್ತಿಕೊಂಡು ಯುದ್ಧಕ್ಕೆ ನಿಂತಿದ್ದರು. ಹೊರಗಡೆ ಹೋಗುವುದು ದುಸ್ತರವಾ ಯಿತು.
ಭಯಾನಕ ಸ್ಥಿತಿ
ಉಕ್ರೇನ್‌ನ ಖಾರ್ಕಿವ್‌ನಲ್ಲಿ ಭಯಾನಕ ಸ್ಥಿತಿ ಇದೆ. ಮೊದಲು ಇಲ್ಲಿಂದ ನಮ್ಮನ್ನು ಕರೆದೊಯ್ಯುವ ಕೆಲಸ ವಾಗಬೇಕು. ಇಲ್ಲಿ ಸಿಲುಕಿರುವ ವರನ್ನು ಕರೆತರುವ ವ್ಯವಸ್ಥೆ ಆಗಬೇಕಿತ್ತು. ಖಾರ್ಕಿವ್‌ನಿಂದ ಬೇರೆ ಪಟ್ಟಣಕ್ಕೆ ಪ್ರಯಾಣಿಸಲು ಸೂಕ್ತ ರಕ್ಷಣೆ ಇಲ್ಲದ್ದಕ್ಕೆ ಇಲ್ಲಿಯೇ ನೆಲಮಾಳಿಗೆಯಲ್ಲಿ ಉಳಿದಿದ್ದೆವು. ಆದರೆ ಪರಿಸ್ಥಿತಿ ತಿಳಿಯಾಗುವ ಯಾವ ಲಕ್ಷಣವೂ ಕಾಣುತ್ತಿಲ್ಲ.
ನಮ್ಮ ಜತೆ ಇದ್ದ ಸ್ನೇಹಿತ ನವೀನ್ ಮೃತಪಟ್ಟಿದ್ದು ಕೇಳಿ ನೋವಾಯಿತು. ಇಲ್ಲಿಯ ಪರಿಸ್ಥಿತಿ ಮತ್ತಷ್ಟು ಗಂಭೀರ ಸ್ವರೂಪ ತಾಳಿದ್ದು, ಹೇಗಾದರೂ ಮಾಡಿ ಖಾರ್ಕಿವ್ ಸಿಟಿ ತೊರೆಯಬೇಕೆಂಬ ನಿರ್ಧಾರ ಮಾಡಿ,
ಏನಾದರೂ ಆಗಲಿ ಅಂತ ಸದ್ಯಕ್ಕೆ ನಾವು ಟ್ರೇನ್ ಹತ್ತಿ ಖಾರ್ಕಿವ್‌ನಿಂದ ರಾಖಿವ್‌ಗೆ 700 ಕಿ.ಮೀ ಪ್ರಯಾಣ ಬೆಳೆಸಿದ್ದೇವೆ. ನಮ್ಮ ಜತೆಗೆ ಹುಡುಗಿಯರೂ ಇದ್ದಾರೆ. ಅವರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆದುಕೊಂಡು ಬರುವ ಜವಾಬ್ದಾರಿಯೂ ನಮ್ಮ ಮೇಲಿದೆ.
ಲಂಚ ಕೊಟ್ಟೆವು
ಸುಮಾರು 15 ಜನ ಒಟ್ಟಿಗೆ ಹೊರಟಿದ್ದೇವೆ. ಟ್ರೇನ್ ಹತ್ತಲು ಪೊಲೀಸರು ಬಿಡುತ್ತಿಲ್ಲ. ಉಕ್ರೇನ್ ಪೊಲೀಸರಿಗೆ ಒಬ್ಬೊಬ್ಬರೂ ನೂರು ಡಾಲರ್ ಲಂಚ ಕೊಟ್ಟು ಟ್ರೇನ್ ಹತ್ತಿ ಪ್ರಯಾಣ ಬೆಳೆಸಿದ್ದೇವೆ.
ಎಲ್ಲೆಲ್ಲಿ ಪೊಲೀಸರು ತೊಂದರೆ ಮಾಡುತ್ತಾರೋ ಅಲ್ಲಲ್ಲಿ ಹಣ ಕೊಟ್ಟು ಪಾರಾಗಿ, ಸುಲಭ ಮಾರ್ಗ ಹುಡುಕಿ ಮುಂದೆ ಸಾಗುವ ನಿರ್ಧಾರ ಮಾಡಿದ್ದೇವೆ. ರಾಖಿವ್ ತಲುಪಿದ ಅನಂತರ ಭಾರತಕ್ಕೆ ಬರಲು ವ್ಯವಸ್ಥೆ ಇದೆ ಎನ್ನಲಾಗುತ್ತಿದೆ. ಮೊದಲು ಖಾರ್ಕಿವ್‌ನಿಂದ ಪಾರಾಗಬೇಕಿತ್ತು. ಈಗ ಪಾರಾಗಿದ್ದೇವೆ ಎಂದು ತಿಳಿಸಿದ್ದಾರೆ.
ಸಂಜೆಯವರೆಗೆ ಸಂಪರ್ಕ ಕಳೆದುಕೊಂಡಿದ್ದರು
4 ವರ್ಷಗಳಿಂದ ನಾಗೇಶ ಮತ್ತು ರಾಕೇಶ ಸಹೋದರರು ವೈದ್ಯಕೀಯ ಪದವಿ ಓದಲು ಉಕ್ರೆನ್‌ನ ಖಾರ್ಕಿವ್ ನಲ್ಲಿದ್ದಾರೆ. ಸೋಮವಾರ ಸಂಜೆಯವರೆಗೂ ಸಂಪರ್ಕದಲ್ಲಿದ್ದವರು ಅನಂತರ ಮಂಗಳವಾರ ಸಂಜೆ 5 ಗಂಟೆಯವರೆಗೂ ಸಂಪರ್ಕ ಕಳೆದುಕೊಂಡಿದ್ದರು.
ಇದರಿಂದ ಕುಟುಂಬಸ್ಥರಿಗೆ ಭಯವಾಗಿತ್ತು. ಟ್ರೇನ್ ಹತ್ತಿ ಖಾರ್ಕಿವ್ ತೊರೆಯುವ ತಯಾರಿಯಲ್ಲಿದ್ದ ಕಾರಣ ಫೋನ್ ಬಂದ್ ಇತ್ತೆಂದು ಕುಟುಂಬದವರಿಗೆ ತಿಳಿದಾಗ ಅವರು ನಿಟ್ಟುಸಿರು ಬಿಟ್ಟರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ