ಚಿಕ್ಕನಾಯಕನಹಳ್ಳಿ
ಭಾರತದಲ್ಲಿ ಕ್ಯಾನ್ಸರ್‍ನಿಂದ ಒಂದು ನಿಮಿಷಕ್ಕೆ ಒಬ್ಬ ಮಹಿಳೆ ಸಾವನ್ನಪ್ಪುತ್ತಿದ್ದಾರೆ ಎಂದು ಸಿದ್ದಾರ್ಥ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ||ಇಂದಿರಾ ಹೇಳಿದರು.
ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಸಿದ್ದಾರ್ಥ ಕಾಲೇಜು ವತಿಯಿಂದ ನಡೆದ ಉಚಿತ ಕ್ಯಾನ್ಸರ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್ ಬಿಟ್ಟರೆ, ಗರ್ಭಚೀಲದ ಬಾಯಿ ಕ್ಯಾನ್ಸರ್ ಅತೀ ದೊಡ್ಡ ಮಟ್ಟದಲ್ಲಿ ಮಹಿಳೆಯನ್ನು ಮಾರಣಾಂತಿಕವಾಗಿ ನುಂಗುತ್ತಿದೆ. ಈ ರೋಗವನ್ನು ತೀವ್ರವಾಗಿ ಬೆಳೆಯದಂತೆ ನೋಡಿಕೊಳ್ಳಬೇಕಾದ ಜವಾಬ್ದಾರಿ ಮರೆತಿರುವುದೆ ಇಂತಹ ಘಟನೆಗೆ ಕಾರಣವಾಗಿದೆ ಎಂದರು.
ಮದುವೆಯಾದ ಹೆಣ್ಣು ಮಕ್ಕಳು ಹಾಗೂ 21 ವಯಸ್ಸಿನ ಹೆಣ್ಣು ಮಕ್ಕಳು ಕ್ಯಾನ್ಸರ್‍ನ ಬಗ್ಗೆ ಹೆಚ್ಚು ಜಾಗೃತರಾಗಬೇಕು. ವಿಶ್ವದ ಮಹಿಳೆಯರಲ್ಲಿ ಮೂರನೇ ಒಂದು ಭಾಗ ಭಾರತದ ಹೆಣ್ಣು ಮಕ್ಕಳು ಇಂತಹ ಭಯಾನಕ ರೋಗಕ್ಕೆ ಒಳಪಡುತ್ತಿದ್ದಾರೆ. ಹ್ಯೂಮನ್ ಪಪಿಲೋಮ ಎಂಬ ವೈರಸ್‍ನ ಇನ್‍ಫೆಕ್ಷನ್‍ನಿಂದ ರೋಗ ತಗುಲಿದರೂ 10 ವರ್ಷದ ನಂತರ ಖಾಯಿಲೆ ಉಲ್ಬಣಗೊಂಡಿರುವುದು ಗೊತ್ತಾಗುತ್ತದೆ.
ಹೀಗಾಗಿ ಮಹಿಳೆಯರಿಗೆ 35 ರಿಂದ 70ನೇ ವಯಸ್ಸಿನಲ್ಲಿ ಅತಿ ಹೆಚ್ಚು ಕಂಡು ಬರುವ ಸಾಧ್ಯತೆ ಇದೆ. ಇಂತಹ ವಯಸ್ಸಿನವರು ಮಾಸಿಕ ಋತುಮತಿಯಾದಾಗ ಕಂಡು ಬರುವ ಲಕ್ಷಣಗಳ ಬಗ್ಗೆ ಜಾಗೃತರಾಗಿ ದೇಹದ ಮೇಲಿನ ಪರಿಣಾಮಗಳನ್ನು ಗಮನಿಸಿ ಪರೀಕ್ಷೆ ಮಾಡಿಸಿಕೊಳ್ಳಬೇಕು, ಆಗ ರೋಗವನ್ನು ತಡೆಯಲು ಸಾಧ್ಯವಾಗುತ್ತದೆ ಎಂದರು.
ತಾಲ್ಲೂಕು ಆಡಳಿತದ ವೈದ್ಯಾಧಿಕಾರಿ ಕೆ.ಎಲ್.ರವಿಕುಮಾರ್ ಮಾತನಾಡಿ, ಕ್ಯಾನ್ಸರ್ ರೋಗ ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ರೋಗ ಹೋಗಲಾಡಿಸಬಹುದು. ಮಿತಿ ಮೀರಿದರೆ ಅಂತಹವರಿಗೆ ಕ್ಯಾನ್ಸರ್ ರೋಗ ನಿಯಂತ್ರಣ ಮಾಡಲುಬೇಕಾದ ಪೂರಕವಾದ ಚಿಕಿತ್ಸೆಯನ್ನು ನೀಡಬಹುದೆ ವಿನಃ ಸಂಪೂರ್ಣವಾಗಿ ಹೋಗಲಾಡಿಸಲು ಸಾಧ್ಯವಿಲ್ಲ. ಹೀಗಿರುವಾಗ ರೋಗಿಯನ್ನು ಧೂಮಪಾನ ಸೇರಿದಂತೆ ನಾನಾ ಚಟುವಟಿಕೆಗಳಿಂದ ದೂರವಿರಿಸಿ ಆರೋಗ್ಯದತ್ತ ಜಾಗೃತರಾಗಬೇಕು. ಇಂತಹ ಚಿಕಿತ್ಸೆಗಳ ಬಗ್ಗೆ ಸ್ವಯಂ ಪರೀಕ್ಷೆಗೆ ಒಳಗಾಗುವುದರಿಂದ ಕ್ಯಾನ್ಸರ್ ಎಂಬ ಆರಂಭಿಕ ಖಾಯಿಲೆಯನ್ನು ಹೋಗಲಾಡಿಸಲು ಸಾಧ್ಯವಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಚರ್ಮರೋಗ ತಜ್ಞ ಡಾ||ವಿಜಯಭಾಸ್ಕರ್, ದಂತ ವೈದ್ಯೆ ಡಾ||ವಿದ್ಯಾ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ಡಾ.ನಟರಾಜು, ಶ್ರೀನಿವಾಸಾಚಾರ್ಯ, ರೇಣುಕಾ, ಜಯಶೀಲ, ಎನ್.ಸಿ.ಡಿ ಸಿಬ್ಬಂದಿಗಳಾದ ಬಾಲಕೃಷ್ಣ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.