ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಧ ಕೋಟಿ ವದಂತಿ?

ತುಮಕೂರು:

ಸಹಾಯವಾಣಿ ತೆರೆದ ಕೆಇಎ : ನೇಮಕಾತಿ ಅಕ್ರಮಕ್ಕೆ ಬಿಗಿ ಕಡಿವಾಣ

ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಖಾಲಿ ಇರುವ 1,242 ಸಹಾಯಕ ಪ್ರಾಧ್ಯಾಪಕರ ಹುದ್ದೆಗಳಿಗೆ ಇದೇ ಮಾ. 12-16 ರವರೆಗೆ ಪರೀಕ್ಷೆ ನಡೆಯುತ್ತಿದ್ದು, ಕೆಇಎಯು ಈಗಾಗಲೇ ಪ್ರವೇಶ ಪತ್ರಗಳನ್ನೂ ಬಿಡುಗಡೆ ಮಾಡಿದೆ. ಈ ನಡುವೆ ಪರೀಕ್ಷೆಯಲ್ಲಿ ಭಾರೀ ಅಕ್ರಮ ನಡೆಯುತ್ತಿದೆ ಎಂಬ ವದಂತಿಗಳ ವಾಸನೆಯ ಜಾಡು ಹಿಡಿದ ಕೆಇಎಯು ಅಕ್ರಮಕ್ಕೆ ಕಡಿವಾಣ ಹಾಕಲು ಸಹಾಯವಾಣಿ (9901581708) ಆರಂಭಿಸಿದೆ.

ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಸಲು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಉನ್ನತ ಶಿಕ್ಷಣ ಇಲಾಖೆಯು ಅಗತ್ಯಬಿದ್ದರೆ ಫೇಸ್‍ಬುಕ್ ಲೈವ್ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಲು ಚಿಂತನೆ ನಡೆಸಿದೆ ಎಂಬ ಮಾಹಿತಿ ಪತ್ರಿಕೆಗೆ ಲಭ್ಯವಾಗಿದೆ.

ಮಧ್ಯವರ್ತಿಗಳಿಂದ ವದಂತಿ :

ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಲಕ್ಷಾಂತರ ಸಂಬಳವಿದೆ. ಹಾಗಾಗಿ ಪರೀಕ್ಷೆ ಬರೆಯುತ್ತಿರುವವರು ಈ ಹುದ್ದೆಯನ್ನು ಆಸೆಗಣ್ಣಿನಿಂದ ನೋಡುವುದು ಸಹಜ. ಈ ಅಂಶವನ್ನೆ ಬಂಡವಾಳ ಮಾಡಿಕೊಂಡ ಮಧ್ಯವರ್ತಿಗಳು, ಕೆಲ ರಾಜಕೀಯ ನಾಯಕರುಗಳ ಹಿಂಬಾಲಕರು ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿರುವುದಾಗಿ ವದಂತಿ ಹಬ್ಬಿಸಿದ್ದರು ಎನ್ನಲಾಗಿದೆ.

ಹುದ್ದೆ ಕೊಡಿಸಲು 30-50 ಲಕ್ಷ ರೂ. ವರೆಗೆ ಹಣದ ಡೀಲ್ ನಡೆಯುತ್ತಿವೆ ಎಂಬ ಮಾತುಗಳು ಕೇಳಿಬಂದಿದ್ದವು. ಈ ಎಲ್ಲಾ ಅಂಶಗಳನ್ನು ಅವಲೋಕಿಸಿರುವ ಕೆಇಎಯು ಪರೀಕ್ಷಾ ಪಾರದರ್ಶಕತೆಗಾಗಿ ಕಠಿಣ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.

ಕೆಇಎಯಿಂದ ಬಂದೋಬಸ್ತ್ :

ನೇಮಕಾತಿ ಪ್ರಕ್ರಿಯೆಯ ಅಂಗವಾಗಿ ಈಗಾಗಲೇ ಘೋಷಿಸಿರುವಂತೆ ಮಾರ್ಚ್ 12 ರಿಂದ 16 ರವರೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಪರೀಕ್ಷೆಗೆ ಬರಲಿರುವವರು ಸೂಚಿತ ಸಂಹಿತೆಯನ್ನು ಕಡ್ಡಾಯವಾಗಿ ಪಾಲಿಸಬೇಕು. ಇದುವರೆಗೂ ಪ್ರವೇಶ ಪತ್ರವನ್ನು ಡೌನ್‍ಲೋಡ್ ಮಾಡಿಕೊಳ್ಳದೆ ಇರುವ ಅಭ್ಯರ್ಥಿಗಳು ಪ್ರಾಧಿಕಾರದ ಜಾಲತಾಣದ ಮೂಲಕ ಪ್ರವೇಶಪತ್ರವನ್ನು ತೆಗೆದುಕೊಳ್ಳಬೇಕು.

ಪರೀಕ್ಷೆಯು ಬೆಂಗಳೂರು, ಮೈಸೂರು, ಮಂಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ ಮತ್ತು ಕಲಬುರಗಿಗಳಲ್ಲಿ ನಡೆಯಲಿದೆ ಎಂದು ಕೆಇಎ ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ. ಪರೀಕ್ಷಾ ಅಕ್ರಮಕ್ಕೆ ಕಡಿವಾಣ ಹಾಕುಬ ನಿಟ್ಟಿನಲ್ಲಿ ಕೆಇಎಯು ವಸ್ತ್ರ ಸಂಹಿತೆ, ಆಧುನಿಕ ತಂತ್ರಜ್ಞಾನ ಬಳಕೆಯಂತಹ ಬಿಗಿ ಬಂದೋಬಸ್ತ್ ಕ್ರಮಗನ್ನು ಪರೀಕ್ಷೆಯಲ್ಲಿ ಅಳವಡಿಸಲು ಮುಂದಾಗಿದೆ.

ಅಕ್ರಮ ತಡೆಗೆ ತಂತ್ರಜ್ಞಾನ ಬಳಕೆ :

ಕೆಲ ಮಧ್ಯವರ್ತಿಗಳು ಪರೀಕ್ಷಾರ್ಥಿಗಳಿಗೆ ಕೆಲಸ ಕೊಡಿಸುತ್ತೇವೆ ಎಂದು ನಂಬಿಸಿ ಲಕ್ಷಾಂತರ ರೂ.ಗಳಿಗೆ ಬೇಡಿಕೆ ಇಟ್ಟಿದ್ದಾರೆ ಎಂಬ ಅಂಶ ತಿಳಿದುಬಂದಿದೆ. ಅಭ್ಯರ್ಥಿಗಳು ವದಂತಿ ನಂಬಿ ಹಣ ಕಳೆದುಕೊಳ್ಳಬಾರದು. ಅಗತ್ಯ ಬಿದ್ದರೆ ಫೇಸ್‍ಬುಕ್ ಲೈವ್ ಕಣ್ಗಾವಲಿನಲ್ಲಿ ಪರೀಕ್ಷೆ ನಡೆಸಬೇಕೆಂಬ ಚಿಂತನೆಯೂ ಇದೆ ಎಂಬ ಮಾಹಿತಿಯು ಉನ್ನತ ಶಿಕ್ಷಣ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.

ಪಾರದರ್ಶಕತೆಗಾಗಿ ಸಂದರ್ಶನವಿಲ್ಲ :

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯು ಸರ್ಕಾರಿ ನಿಯಮಗಳಿಗೆ ಅನುಗುಣವಾಗಿ, ಪ್ರತಿಭೆಯನ್ನು ಆಧರಿಸಿ ನಡೆಯುತ್ತಿದೆ. ಈ ಬಗ್ಗೆ ಅಭ್ಯರ್ಥಿಗಳು ವದಂತಿಗಳನ್ನು ನಂಬಿ, ಮೋಸ ಹೋಗಬಾರದು.

ಈ ಪ್ರಕ್ರಿಯೆಯಲ್ಲಿ ಭ್ರಷ್ಟಾಚಾರಕ್ಕಾಗಲಿ, ಅವ್ಯವಹಾರಕ್ಕಾಗಲಿ ಕಿಂಚಿತ್ತೂ ಆಸ್ಪದವಿಲ್ಲ, ಲಿಖಿತ ಪರೀಕೆಯಲ್ಲಿ ತೆಗೆದುಕೊಂಡ ಒಟ್ಟು ಅಂಕಗಳ ಆಧಾರದ ಮೇಲೆ ನೇಮಕಾತಿ ನಡೆಯುತ್ತದೆ. ಪಾರರ್ದಶಕವಾಗಿ ನಡೆಸಬೇಕು ಎನ್ನುವ ಕಾರಣಕ್ಕೆ ಸಂದರ್ಶನ ಕೂಡ ಇಟ್ಟಿಲ್ಲ ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ರಮ್ಯಾ ಅವರು ಸ್ಪಷ್ಟಪಡಿಸಿದ್ದಾರೆ.

ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆಯುತ್ತಿವೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ವರ್ಷದಿಂದ ಈ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿರುವ ನಮಗೆ ಈ ಸುದ್ದಿ ಆಘಾತವನ್ನೆ ತಂದಿದೆ. ದುಡ್ಡಿದ್ದವರಿಗಷ್ಟೆ ಸರ್ಕಾರಿ ಕೆಲಸ ಎಂದಾಗಬಾರದು. ಸರ್ಕಾರವು ಪಾರದರ್ಶಕ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಂಡು ಪ್ರತಿಭಾನ್ವಿತರ ಹಿತ ಕಾಯಲಿ.

-ಹೊನ್ನಪ್ಪ, ಪರೀಕ್ಷೆ ಬರೆಯುತ್ತಿರುವ ಅಭ್ಯರ್ಥಿ

 

ಅಭ್ಯರ್ಥಿಗಳಿಗೆ ಯಾವುದಾದರೂ ಆಮಿಷ ಒಡ್ಡಲು ಯಾರಾದರೂ ಪ್ರಯತ್ನಿಸುತ್ತಿದ್ದರೆ ಅಥವಾ ವದಂತಿಗಳನ್ನು ಹರಡುತ್ತಿರುವವರು ಕಂಡುಬಂದರೆ ಮೊಬೈಲ್ ಸಂಖ್ಯೆ 9901581708 ಕ್ಕೆ ನೇರವಾಗಿ ಕಚೇರಿ ಸಮಯದಲ್ಲಿ ಕರೆ ಮಾಡಬಹುದು, ಇಲ್ಲವೇ ವಾಟ್ಸ್‍ಆ್ಯಪ್ ಮೂಲಕ ತಿಳಿಸಬಹುದು. ಈ ಮಾಹಿತಿಯನ್ನು ಗೌಪ್ಯವಾಗಿಟ್ಟು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.

-ರಮ್ಯಾ, ಕಾರ್ಯನಿರ್ವಾಹಕ ನಿರ್ದೇಶಕರು, ಕೆಇಎ

 

      -ಚಿದಾನಂದ್ ಹುಳಿಯಾರು

            ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link