ತುಮಕೂರು
ಖಾಸಗಿ ಲೇವಾದೇವಿದಾರರಿಂದ ಸಾಲ ಪಡೆದು ತೀರಿಸಲಾಗದೆ ಶೋಷಣೆಗೊಳಗಾದ ಬಡವರನ್ನು ಸಾಲದ ಋಣದಿಂದ ಮುಕ್ತಗೊಳಿಸುವ ಕರ್ನಾಟಕ ಋಣ ಪರಿಹಾರ ವಿಧೇಯಕವನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ಸಾಲ ಋಣ ಮುಕ್ತರಾಗಬಯಸುವ ಬಡವರು ಅರ್ಜಿ ಸಲ್ಲಿಸಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಭೂರಹಿತ ಕೃಷಿ ಕಾರ್ಮಿಕರು, ದುರ್ಬಲ ವರ್ಗದವರು, ಸಣ್ಣ ರೈತರಿಗೆ ಸಾಲ ನೀಡಿ ಅಧಿಕ ಬಡ್ಡಿ ವಿಧಿಸಿ ಕಾನೂನುಬಾಹಿರ ಕ್ರಮಗಳಿಂದ ಅವರನ್ನು ಶೋಷಿಸುತ್ತಿರುವುದನ್ನು ತಪ್ಪಿಸಲು ಋಣ ಮುಕ್ತ ಪರಿಹಾರ ವಿಧೇಯಕವು ನೆರವಾಗುತ್ತದೆ ಎಂದು ಸರ್ಕಾರದ ಸುತ್ತೋಲೆಯಲ್ಲಿ ಹೇಳಿದೆ.
ಲೇವಾದೇವಿದಾರರು ಮತ್ತು ಗಿರವಿದಾರರಿಂದ ಸಾಲ ಪಡೆದವರು ಅರ್ಜಿ ಸಲ್ಲಿಸಬಹುದು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಆದರೆ ನಗರದ ಉಪವಿಭಾಗಾಧಿಕಾರಿ ಕಚೇರಿ ಗೋಡೆ ಮೇಲೆ ಅಂಟಿಸಿರುವ ಸೂಚನಾ ಫಲಕದಲ್ಲಿ ‘ಕರ್ನಾಟಕ ಋಣ ಮುಕ್ತ ಪರಿಹಾರ ಕಾಯ್ದೆ 2018ರಲ್ಲಿ ಸರ್ಕಾರ ಸೂಚಿಸಿರುವಂತೆ ಮುತ್ತೂಟ್ ಫೈನಾನ್ಸ್, ಮಣಿಪ್ಪುರಂ, ಬ್ಯಾಂಕ್ ಹಾಗೂ ವಿವಿಧ ಸಂಘಸಂಸ್ಥೆಗಳಿಗೆ ಅನ್ವಯವಾಗುವುದಿಲ್ಲ.
ಗಿರವಿ ಅಂಗಡಿಯಲ್ಲಿ ಅಡಮಾನವಿಟ್ಟವರಿಗೆ ಮಾತ್ರ ಈ ಆದೇಶ ಅನ್ವಯವಾಗುತ್ತದೆ’ ಎಂದು ಪ್ರಕಟಿಸಲಾಗಿದೆ. ಇದು ಅರ್ಜಿದಾರರಲ್ಲಿ ಗೊಂದಲ ಉಂಟು ಮಾಡುತ್ತದೆ. ಗಿರವಿ ಅಂಗಡಿಗಳಲ್ಲಿ ಒಡವೆ ಅಡಮಾನವಿಟ್ಟು ಸಾಲ ಒಡೆದವರು ಮಾತ್ರವೇ ಈ ಕಾಯ್ದೆ ಪ್ರಯೋಜನಕ್ಕೆ ಒಳಪಡುತ್ತಾರೆಯೆ, ಖಾಸಗಿಯವರಲ್ಲಿ ಒಡವೆ, ಆಸ್ತಿ ಪತ್ರ, ಚೆಕ್, ವಾಹನ ಅಡಮಾನವಿಟ್ಟು ಸಾಲಪಡೆದವರಿಗೂ ಅನ್ವಯವಾಗುತ್ತದೆಯೆ ಎಂಬ ಪ್ರಶ್ನೆ ಮೂಡಿಸುತ್ತದೆ.
ಸಾಲದಿಂದ ಹೆಚ್ಚು ಶೋಷಣೆಗೆ ಒಳಗಾಗುತ್ತಿರುವುದು ಮೀಟರ್ ಬಡ್ಡಿಯವರಿಂದ, ಸಾಲಕ್ಕಾಗಿ ಅವರು ನೀಡುವ ಕಿರುಕುಳ ಕುಟುಂಬವನ್ನೇ ನೋವಿಗೀಡು ಮಾಡುತ್ತದೆ. ಅಂತಹ ಸಾಲಗಳ ಬಗ್ಗೆ ಈ ಕಾಯ್ದೆಯಲ್ಲಿ ಪ್ರಸ್ತಾಪವಿದ್ದಂತಿಲ್ಲ. ಯಾವುದೇ ಪರವಾನಗಿ ಪಡೆಯದೆ ಕಾನೂನು ಬಾಹಿರವಾಗಿ ಬಡ್ಡಿ ವ್ಯವಹಾರ ಮಾಡುವವರ ಪ್ರಕರಣ ಈ ಕಾಯ್ದೆ ವ್ಯಾಪ್ತಿಗೆ ಬರುವುದಿಲ್ಲವೆ, ಸಾಲದ ಋಣ, ಕಿರಿಕುಳದಿಂದ ಮುಕ್ತರಾಗಬೇಕಾಗಿರುವುದು ಇಂತಹ ಪ್ರಕರಣಗಳ ಪರಿಹಾರಕ್ಕಾಗಿ ಎಂದು ಅರ್ಜಿ ಸಲ್ಲಿಸಲು ಬಂದಿದ್ದ ಅನೇಕರ ಅಭಿಪ್ರಾಯವಿದು.
ಆದರೆ, ಋಣ ಮುಕ್ತ ಪರಿಹಾರ ಕಾಯ್ದೆ ಕೇವಲ ಗಿರವಿ ವ್ಯವಹಾರದವರನ್ನೇ ಗುರಿಯಾಗಿರಿಸಿಕೊಂಡಂತಿದೆ ಎನ್ನುವ ಅನುಮಾನಗಳು ಮೂಡುತ್ತವೆ, ಇದರಿಂದ ಸಾಲ ಮಾಡಿ ಶೋಷಣೆಗೊಳಗಾದ ಹೆಚ್ಚು ಜನರಿಗೆ ಈ ಕಾಯ್ದೆ ಪ್ರಯೋಜನವಾಗುವುದಿಲ್ಲ, ಮೇಲ್ನೋಟಕ್ಕೆ ಇದೊಂದು ಅಮಾಯಕ ಜನರ ಕಣ್ಣೊರೆಸುವ ಕಾರ್ಯಕ್ರಮ ಎಂದು ಹಲವರು ಟೀಕಿಸಿದರು.
ಋಣ ಪರಿಹಾರ ಕಾಯ್ದೆ ಒಂದು ವರ್ಗವನ್ನು ಗುರಿಯಾಗಿಸಿಕೊಂಡು ಜಾರಿಗೆ ತಂದಂತಿದೆ. ಜೊತೆಗೆ ಅರ್ಜಿದಾರರಲ್ಲೂ ಗೊಂದಲ ಮಾಡಿಸಲಾಗುತ್ತಿದೆ. ಜನರಿಗೆ ಸ್ಷಷ್ಟವಾದ ಮಾಹಿತಿ ನೀಡುತ್ತಿಲ್ಲ. ವಿಶೇಷವಾಗಿ ಗಿರವಿ ಅಂಗಡಿಯವರನ್ನು ಗುರಿಯಾಗಿಸಿಕೊಂಡು ಈ ಕಾಯ್ದೆ ಜಾರಿಗೆ ತರಲಾಗಿದೆ ಎಂದು ತುಮಕೂರು ಪಾನ್ ಬ್ರೋಕರ್ಸ್ ಅಂಡ್ ಜುವೆಲ್ಲರ್ಸ್ ಅಸೋಸಿಯೇಷನ್ ಅಧ್ಯಕ್ಷ ಪೂರನ್ ಕುಮಾರ್(ಜೆಪಿ) ಅಸಮಾಧಾನ ವ್ಯಕ್ತಪಡಿಸಿದರು.
ಗಿರವಿ ಅಂಗಡಿಯವರು ಲೈಸೆನ್ಸ್ ಪಡೆದು, ಸೆಕ್ಯೂರಿಟಿ ಡಿಪಾಸಿಟ್ ಕಟ್ಟಿ, ಇನ್‍ಕಮ್ ಟ್ಯಾಕ್ಸ್ ಕಟ್ಟಿ ನಿಯಮಾನುಸಾರ ವ್ಯವಹಾರ ಮಾಡುತ್ತಿದ್ದಾರೆ. ಆದರೆ ಅನಧಿಕೃತವಾಗಿ ಬಡ್ಡಿ ವ್ಯವಹಾರ ಮಾಡುವ, ಜನರನ್ನು ಹೆಚ್ಚು ಶೋಷಣೆ ಮಾಡುವ ಮೀಟರ್ ಬಡ್ಡಿಯವರ ಸಾಲದ ವಿಚಾರ ಈ ಕಾಯ್ದೆಯಲ್ಲಿ ಪ್ರಸ್ತಾಪ ಮಾಡಿಲ್ಲ. ಅವರನ್ನು ಗೂಂಡಾ ಕಾಯ್ದೆಯಡಿ ಬಂಧಿಸಬಹುದು, ಆದರೆ ಅವರು ಬಲಿಷ್ಠವಾಗಿದ್ದಾರೆ ಎಂದು ಕೈಬಿಟ್ಟು ಅಮಾಯಕ ಗಿರವಿ ವ್ಯವಹಾರದವರನ್ನು ಗುರಿ ಮಾಡಲಾಗಿದೆ ಎಂದು ಆಪಾದಿಸಿದರು.
ಈ ಕಾಯ್ದೆಯನ್ವಯ ಗಿರವಿ ಅಂಗಡಿಯಲ್ಲಿ ಒಡವೆ ಅಡಮಾನ ಮಾಡಿ ಸಾಲ ಪಡೆದು ಮರು ಪಾವತಿ ಮಾಡಿದವರಿಗೆ ಸರ್ಕಾರದಿಂದ ಆ ಒಡವೆ ಬಿಡಿಸಿ ನೀಡಲಾಗುತ್ತದೆ ಎಂದು ಗೊತ್ತಾಗಿದೆ. ಆದರೆ, ಒಡವೆಗೆ ಸಾಲ ನೀಡಿದ ಗಿರವಿ ಅಂಗಡಿಯವರಿಗೆ ಸಾಲದ ಬಾಬ್ತು ಹಣವನ್ನು ಸರ್ಕಾರ ನೀಡುವುದಿಲ್ಲವಂತೆ, ಇದು ಯಾವ ನ್ಯಾಯ, ರೈತರ ಸಾಲ ಮನ್ನಾ ಪ್ರಕರಣಗಳಲ್ಲಿ ಸರ್ಕಾರ ಬ್ಯಾಂಕುಗಳಿಗೆ ಸಾಲದ ಹಣ ಪಾವತಿ ಮಾಡುತ್ತದೆ, ಸಾಲ ಕೊಟ್ಟ ಗಿರವಿ ಅಂಗಡಿಯವರು ಏನು ಪಾಪ ಮಾಡಿದ್ದಾರೆ ಎಂದು ನಗರದ ಗಿರವಿ ಅಂಗಡಿ ಮಾಲೀಕ ರಮೇಶ್ ಹೇಳುತ್ತಾರೆ.
ಸಾಲ ಪಡೆದವರಿಗೆ ಗಿರವಿ ಅಂಗಡಿಯವರು ಕಿರುಕುಳ ನೀಡುತ್ತಾರೆಯೆ? ಇಲ್ಲಿ ಸಾಲ ಮಾಡಿದವರು ಕಿರುಕುಳ ತಾಳದೆ ಆತ್ಮಹತ್ಯೆಗೆ ಪ್ರಯತ್ನಿಸಿದ ಉದಾಹರಣೆಗಳವೆಯೆ? ಮೀಟರ್ ಬಡ್ಡಿಯವರ ಕಿರುಕುಳ ಬಗ್ಗೆ ಅದೆಷ್ಟು ಕೇಸುಗಳು ಪೊಲೀಸ್ ಸ್ಟೇಷನ್ನಿಗೆ ಬಂದಿಲ್ಲ ಎಂದು ರಮೇಶ್ ಹೇಳುತ್ತಾರೆ.
ಬಡವರನ್ನು ಸಾಲದಿಂದ ಮುಕ್ತ ಮಾಡಬೇಕೆಂಬ ಕಾಳಜಿ ಸರ್ಕಾರಕ್ಕೆ ಇದ್ದರೆ ಮೊದಲು ಕಾನೂನುಬಾಹಿರವಾಗಿ ಬಡ್ಡಿವ್ಯವಹಾರ ಮಾಡುವುದನ್ನು ತಡೆಯಬೇಕು. ಇವರಿಂದ ಅಧಿಕ ಬಡ್ಡಿಗೆ ಸಾಲ ಸಾಲ ಪಡೆದ ಬಡವರನ್ನು ಸಾಲದಿಂದ ಋಣ ಮುಕ್ತಗೊಳಿಸಿ ಅವರ ಸಂಸಾರ ಉಳಿಸಲಿ. ಸಾಲ ನೀಡಿ ಹಿಂಸೆ ಮಾಡುವ, ಶೋಷಣೆ ಮಾಡುವ ಮೀಟರ್ ಬಡ್ಡಿ ದಂಧೆಗೆ ಸರ್ಕಾರ ಕಡಿವಾಣ ಹಾಕಲಿ ಎಂದು ಅರ್ಜಿ ಸಲ್ಲಿಸಲು ಬಂದಿದ್ದ ರಾಮಲಿಂಗಪ್ಪ ಹೇಳಿದರು.
ಗಿರವಿ ಅಂಗಡಿಯವರು ಋಣ ಪರಿಹಾರ ಕಾಯ್ದೆ ವಿರುದ್ಧ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ತೀರ್ಪು ಅವರ ಪರವಾದರೆ ಈ ಕಾಯ್ದೆ ಬಗ್ಗೆ ಸರ್ಕಾರ ಮುಂದೆ ಯಾವ ತೀರ್ಮಾನ ತೆಗೆದುಕೊಳ್ಳಬಹುದು ಎಂಬುದು ಗೊತ್ತಿಲ್ಲ ಎನ್ನುತ್ತಾರೆ.
ನಾವು ಕಾನೂನು ಬದ್ದವಾಗಿ ವ್ಯಹಾರ ಮಾಡುತ್ತಿದ್ದೇವೆ, ನಮ್ಮ ವ್ಯವಹಾರದ ಸಾಲದ ಹಣ ನೀಡದೆ ಸರ್ಕಾರ ಒಡವೆಗಳಿಗೆ ಬಿಡಿಸಿಕೊಟ್ಟರೆ ನಾವು ಬೀದಿಗೆ ಬರಬೇಕೆ ಎಂದು ಪ್ರಶ್ನಿಸಿದ ಪೂರನ್ ಕುಮಾರ್, ಋಣ ಪರಿಹಾರ ಕಾಯ್ದೆ ನೀತಿಗಳ ವಿರುದ್ಧ ಸಾವಿರಾರು ಗಿರವಿ ವ್ಯವಹಾರಸ್ಥರು ಹೈಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಈ ತಿಂಗಳ 12 ರಂದು ವಿಚಾರಣೆ ಇದೆ, ನ್ಯಾಯಾಲಯ ನಮಗೆ ನ್ಯಾಯ ದೊರಕಿಸುತ್ತದೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
ಸಾವಿರಾರು ಅರ್ಜಿ
ಅದೇನೆ ಇರಲಿ, ಋಣ ಮುಕ್ತ ಪರಿಹಾರಕ್ಕಾಗಿ ರಾಜ್ಯಾದ್ಯಂತ ಅರ್ಜಿ ಸಲ್ಲಿಸುತ್ತಿದ್ದಾರೆ. ಜಿಲ್ಲೆಯಲ್ಲಿ ತುಮಕೂರು, ಮಧುಗಿರಿ ಹಾಗೂ ತಿಪಟೂರು ಉಪವಿಭಾಗ ವ್ಯಾಪ್ತಿಯಲ್ಲಿ ಅರ್ಹರು ಆಯಾ ಉಪವಿಭಾಗಾಧಿಕಾರಿಗಳಿಗೆ ಸಾವಿರಾಉ ಅರ್ಜಿ ಸಲ್ಲಿಸಿದ್ದಾರೆ.
ಆದರೆ, ಈ ಕಾಯ್ದೆ ಬಗ್ಗೆ ವ್ಯಾಪಕ ಪ್ರಚಾರವಿಲ್ಲ, ಪೂರಕ ಮಾಹಿತಿ ನೀಡುವವರಿಲ್ಲ ಎನ್ನವಂತಾಗಿದೆ. ಋಣ ಪರಿಹಾರ ಕಾಯ್ದೆ ಪ್ರಕಾರ ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಮತ್ತು ದುರ್ಬಲ ವರ್ಗಕ್ಕೆ ಸೇರಿದ ವ್ಯಕ್ತಿ ಅರ್ಜಿ ಸಲ್ಲಿಸಬಹುದು. ಎಲ್ಲ ಮೂಲಗಳಿಂದ ವಾರ್ಷಿಕ 1.2 ಲಕ್ಷ ರೂ.ಗಳಿಗಿಂತ ಕಡಿಮೆ ವರಮಾನ ಇರಬೇಕು. ಖಾಸಗಿ ಲೇವಾದೇವಿದಾರರು ಮತ್ತು ಗಿರವಿದಾರರಿಂದ 2019 ರ ಜುಲೈ 23 ಕ್ಕೆ ಮೊದಲು ಪಡೆದಿರುವ ಸಾಲಕ್ಕೆ ಈ ಕಾಯ್ದೆ ಅನ್ವಯವಾಗುತ್ತದೆ.
ಸಹಕಾರ ಸಂಘಗಳು, ಸೌಹಾರ್ದ ಸಹಕಾರ ಸಂಘಗಳು, ಆರ್.ಬಿ.ಐ. ಕಾಯ್ದೆಯಡಿ ನಿಯಂತ್ರಿಸಲ್ಪಡುವ ಬ್ಯಾಂಕೇತರ ಹಣಕಾಸು ಸಂಸ್ಥೆಗಳು, ಬ್ಯಾಂಕುಗಳು, ಸಹಕಾರ ಸಂಘಗಳ ನೋಂದಣಿ ಕಾಯ್ದೆ 1960 ರ ಅಧಿನಿಯಮ 17 ರಲ್ಲಿ ನೋಂದಾಯಿತವಾಗಿರುವ ಅತಿಸಣ್ಣ ಹಣಕಾಸು ಸಂಸ್ಥೆಗಳು, ಚಿಟ್Àಫಂಡ್ ಕಾಯ್ದೆಯಲ್ಲಿ ನೋಂದಣಿಗೊಂಡ ಚಿಟ್ ಕಂಪನಿಗಳಿಂದ ಪಡೆದಿರುವ ಸಾಲವು ಪರಿಹಾರಕ್ಕೆ ಅರ್ಹವಿರುವುದಿಲ್ಲ.
2019 ರ ಜುಲೈ 23 ರಿಂದ 90 ದಿನಗಳೊಳಗೆ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಅರ್ಜಿ ನಮೂನೆ-2 ರಲ್ಲಿ ಸಾಲ ಪಡೆದವರು ಹಗೂ ಜಾಮೀನುದಾರರು ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅಗತ್ಯ ದಾಖಲಾತಿಗಳು
ಅರ್ಜಿ ಜೊತೆಗೆ ಆಧಾರ್ ಕಾರ್ಡ್, ವೋಟರ್ ಐಡಿಕಾರ್ಡ್, ಬಿ.ಪಿ.ಎಲ್. ರೇಷನ್ ಕಾರ್ಡ್, ಸಣ್ಣ ರೈತರಾಗಿದ್ದಲ್ಲಿ ತಹಸೀಲ್ದಾರರಿಂದ ಪಡೆದ ಸಣ್ಣ ರೈತ ದೃಢೀಕರಣ ಪತ್ರ ಹಾಗೂ 1.2ಲಕ್ಷ ರೂ. ಒಳಗಿನ ಆದಾಯ ಪ್ರಮಾಣ ಪತ್ರ ಮತ್ತು ಕೃಷಿ ವರಮಾನವಲ್ಲದೆ ಬೇರೆ ಮೂಲದ ವರಮಾನ ಹೊಂದಿಲ್ಲವೆಂಬ ಘೋಷಣೆ, ಭೂರಹಿತ ಕೃಷಿ ಕಾರ್ಮಿಕರಾಗಿದ್ದಲ್ಲಿ ತಹಸೀಲ್ದಾರರಿಂದ ಪಡೆದ ಕೃಷಿ ಕಾರ್ಮಿಕ ದೃಢೀಕರಣ ಪತ್ರ, ದುರ್ಬಲ ವರ್ಗಗಳಿಗೆ ಸೇರಿದವರಾಗಿದ್ದಲ್ಲಿ ತಹಸೀಲ್ದಾರರಿಂದ ಪಡೆದ ಆದಾಯ ಪ್ರಮಾಣ ಪತ್ರ ಹಾಗೂ ದುರ್ಬಲ ವರ್ಗಕ್ಕೆ ಸೇರಿದವರೆಂದು ತಾನು ಸಣ್ಣ ರೈತನಾಗಿರುವುದಿಲ್ಲ, ಭೂರಹಿತ ಕೃಷಿ ಕಾರ್ಮಿಕನಾಗಿರುವುದಿಲ್ಲ ಎಂಬ ಸ್ವಯಂ ದೃಢೀಕರಣ ಪತ್ರ, ಸಾಲ ಪಡೆದಿರುವ ಬಗ್ಗೆ ದಾಖಲಾತಿಗಳನ್ನು ಲಗತ್ತಿಸಬೇಕು ಎಂದು ಸಾರ್ವಜನಿಕರಿಗೆ ಸೂಚಿಸಲಾಗಿದೆ.
ಇಲ್ಲೂ ವ್ಯವಹಾರ
ಮಾರಮ್ಮನ ಜಾತ್ರೆಯಲ್ಲಿ ಮಾರಿದ್ದೆಲ್ಲಾ ಲಾಭ ಎನ್ನುವಂತೆ ಋಣ ಪರಿಹಾರ ಕಾಯ್ದೆಗೆ ಅರ್ಜಿ ಸ್ವೀಕಾರ ಆರಂಭವಾಗುತ್ತಿದ್ದಂತೆ ಸರ್ಕಾರಿ ಕಚೇರಿಗಳ ಅರ್ಜಿ ಫಾರಂ ಮಾರುವ, ಭರ್ತಿ ಮಾಡಿ ವ್ಯವಹಾರ ಮಾಡುವ ಸಂತೆಗಳಂತಾಗಿವೆ. 10 ರೂಪಾಯಿಗೊಂದು ಒಡವೆ ಫಾರಂ ಎಂದು ಜನರನ್ನು ಕೂಗಿ ಕರೆದು ಮಾರಾಟ ಮಾಡಲಾಗುತ್ತಿದೆ. ಈ ಕಾಯ್ದೆ ಬಗ್ಗೆ ಜನರಿಗೆ ಮೊದಲೇ ಗೊಂದಲಗಳಿವೆ, ಇಂತಹ ಸಂದರ್ಭವನ್ನು ಇವರು ಬಳಸಿಕೊಳ್ಳುತ್ತಿದ್ದಾರೆ.
ಕಚೇರಿಯಲ್ಲಿ ಈ ಫಾರಂಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಹೇಳಲಾಗರೂ ಸರಿಯಾದ ಮಾರ್ಗದರ್ಶನವಿಲ್ಲದೆ, ಬಂದವರನ್ನು ದಿಕ್ಕು ತಪ್ಪಿಸುವ ಪ್ರಯತ್ನಗಳೂ ಇಲ್ಲಿ ನಡೆಯುತ್ತಿವೆ. ಅರ್ಜಿ ಫಾರಂ ಖರೀದಿಸಿ ಮುಂದೇನು ಎನ್ನುವಾಗ ಇನ್ನೊಬ್ಬ ಬಂದು ಫಾರಂ ಪಡೆದು ಭರ್ತಿ ಮಾಡಿ, ಆ ವ್ಯಕ್ತಿ ತಂದಿದ್ದ ಆಧಾರ್ ಕಾರ್ಡ್, ಓಟರ್ ಐಡಿ ಮತ್ತಿತರ ದಾಖಲಾತಿಗಳ ಝೆರಾಕ್ಸ್ ಮಾಡಿಸಿ ಕೊಟ್ಟು ಇಂತಿಷ್ಟು ಹಣ ಪಡೆದು ಎಸಿ ಆಫೀಸಿಗೆ ಕೊಡಿ ಎನ್ನುತ್ತಾನೆ.
ಇದೇ ನೆಪದಲ್ಲಿ ಝೆರಾಕ್ಸ್‍ನವರು ದುಪ್ಪಟ್ಟು ಬೆಲೆ ನಿಗಧಿ ಮಾಡಿ ವ್ಯಾಪಾರ ಮಾಡುತ್ತಿದ್ದಾರೆ. ಇದು ಸಾಲದೆಂಬಂತೆ ನಿಮ್ಮ ಸಾಲವನ್ನು ಮುಕ್ತ ಮಾಡಿಸುತ್ತೇನೆ ಎಂದು ಸಾವಿರ, ಎರಡು ಸಾವಿರ ರೂ.ಗಳ ಡೀಲ್ ಕುದುರಿಸುವವರೂ ಕಚೇರಿ ಆವರಣದಲ್ಲಿ ಹುಟ್ಟಿಕೊಂಡಿದ್ದಾರೆ.ಜಿಲ್ಲಾಡಳಿತ ಇದಕ್ಕೆಲ್ಲಾ ಕಡಿವಾಣ ಹಾಕಿ ಅರ್ಜಿ ಸಲ್ಲಿಸಲು ಬರುವವರಿಗೆ ಸೂಕ್ತ ಸಲಹೆ ಮಾರ್ಗದರ್ಶನ ನೀಡಬೇಕಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








