ಹೈದರಾಬಾದ್:
ತೆಲುಗು ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಅಂದರೆ ಅದು ಪ್ರಭಾಸ್. ವಯಸ್ಸು 41 ವರ್ಷವಾದರೂ ಮದುವೆ ಆಗದೇ ಬ್ರಹ್ಮಚಾರಿಯಾಗಿಯೇ ಉಳಿದಿದ್ದಾರೆ. ಸಾಲು ಸಾಲು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಪ್ರಭಾಸ್ ನಟಿಸುತ್ತಿದ್ದು, ಸಿನಿಮಾಗಳಲ್ಲೇ ಮುಳುಗಿ ಹೋಗಿರುವ ಪ್ರಭಾಸ್ ಮದುವೆಯನ್ನೇ ಮರೆತುಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಆದರೆ, ಅಭಿಮಾನಿಗಳು ಪ್ರಭಾಸ್ ಮದುವೆ ಯಾವಾಗ ಎಂದು ಎದುರು ನೋಡುತ್ತಿದ್ದಾರೆ. ಇದೀಗ ಪ್ರಭಾಸ್ ಮದುವೆ ಕುರಿತು ಅವರ ದೊಡ್ಡಮ್ಮ ಆಸಕ್ತಿಕರ ಸಂಗತಿಯೊಂದನ್ನು ಬಹಿರಂಗಪಡಿಸಿದ್ದಾರೆ.
ಸದ್ಯ ಪ್ರಭಾಸ್ ತಮ್ಮ ನಟನೆಯ ರಾಧೆಶ್ಯಾಮ್ ಚಿತ್ರದ ಪ್ರಚಾರದ ಕೆಲಸದಲ್ಲಿ ಬಿಜಿಯಾಗಿದ್ದಾರೆ. ಈ ಚಿತ್ರದಲ್ಲಿ ಪ್ರಭಾಸ್ಗೆ ನಾಯಕಿಯಾಗಿ ಸೌತ್ ಬ್ಯೂಟಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಇದೇ ಮಾರ್ಚ್ 11ರಂದು ಚಿತ್ರ ತೆರೆ ಕಾಣಲಿದೆ. ಈ ಹಿಂದೆಯೇ ಪ್ರಚಾರ ಆರಂಭಿಸಿದ್ದ ಚಿತ್ರತಂಡ ಟ್ರೈಲರ್ ಕೂಡ ಬಿಡುಗಡೆ ಮಾಡಿತ್ತು. ಎಲ್ಲವು ಅಂದುಕೊಂಡಂತೆ ಆಗಿದ್ದರೆ ಕಳೆದ ಜನವರಿಯಲ್ಲಿ ಚಿತ್ರ ತೆರೆಗೆ ಅಪ್ಪಳಿಸಬೇಕಾಗಿತ್ತು. ಆದರೆ, ಕರೊನಾ ಮೂರನೇ ಅಲೆಯಿಂದಾಗಿ ಚಿತ್ರದ ಬಿಡುಗಡೆಯನ್ನು ಮುಂದೂಡಲಾಯಿತು.
ಇನ್ನು ಎರಡೇ ದಿನದಲ್ಲಿ ಚಿತ್ರ ತೆರೆಗೆ ಅಪ್ಪಳಿಸಲಿದೆ. ಚಿತ್ರದ ಪ್ರಚಾರದಲ್ಲಿ ಪ್ರಭಾಸ್ ದೊಡ್ಡಮ್ಮ ಶ್ಯಾಮಲಾ ದೇವಿ ಕೂಡ ಭಾಗವಹಿಸಿದ್ದಾರೆ. ಶ್ಯಾಮಲಾ ದೇವಿ ಅವರು ನಟ ಹಾಗೂ ರಾಜಕಾರಣಿ ಕೃಷ್ಣಮ ರಾಜು ಅವರ ಪತ್ನಿ. ಪ್ರಭಾಸ್ ಬಗ್ಗೆ ಮಾಧ್ಯಮ ಸಂದರ್ಶನದಲ್ಲಿ ಮಾತನಾಡಿರುವ ಅವರು ಹಲವು ಕುತೂಹಲಕಾರಿ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ನಟ ಪ್ರಭಾಸ್ಗೆ ಪುಲ್ಸಾ ಚಾಪ್ಸ್ ಕರಿ ಅಂದರೆ ತುಂಬಾ ಇಷ್ಟವಂತೆ. ಹಾಗೇ ಅವರ ದೊಡ್ಡಪ್ಪ ಕೃಷ್ಣಮ ರಾಜು ಅಂದರೆ ತುಂಬಾ ಇಷ್ಟವಂತೆ. ಅವರನ್ನು ಯಾವಾಗಲೂ ಭೇಟಿ ಮಾಡುವ ಪ್ರಭಾಸ್, ಸಾಕಷ್ಟು ಹೊತ್ತು ಮಾತನಾಡುತ್ತಾರಂತೆ. ಕೃಷ್ಣಮ ರಾಜು ಅವರನ್ನು ಬಿಗ್ ಬಾಜಿ ಎಂದು ಕರೆಯುವ ಪ್ರಭಾಸ್ ನನ್ನನ್ನು ಕಣ್ಣಮ್ಮ ಎಂದು ಕರೆಯುತ್ತಾನೆ. ನಾನು ಅವನನ್ನು ಬಾಬು ಪ್ರಭಾಸ್ ಎಂದು ಕರೆಯುತ್ತೇನೆಂದು ಎಂದು ಶ್ಯಾಮಲಾ ದೇವಿ ಹೇಳಿದರು.
ಪ್ರಭಾಸ್ಗೆ ಪ್ರತಿನಿತ್ಯ ತುಂಬಾ ಕರೆಗಳು ಬರುತ್ತವೆ. ಅದರಲ್ಲೂ ಹೆಚ್ಚು ಕರೆಗಳು ಹುಡುಗಿಯರಿಂದ ಬರುತ್ತದೆ. ಪ್ರಭಾಸ್ ಅವರನ್ನು ತುಂಬಾ ಹೊಗಳುತ್ತಾರೆ. ಅಲ್ಲದೆ, ಹುಡುಗಿಯರ ಜತೆ ಮಾತನಾಡಲು ಪ್ರಭಾಸ್ ತುಂಬಾ ನಾಚಿಕೊಳ್ಳುತ್ತಾನೆ. ಹೀಗಾಗಿ ಕೆಲವು ಸಂದರ್ಭಗಳಲ್ಲಿ ಕರೆಗಳನ್ನು ನಾನು ಸ್ವೀಕರಿಸಿ ಮಾತನಾಡುತ್ತೇನೆ ಎಂದರು.
ಪ್ರಭಾಸ್ ಯಾವುದೇ ಹುಡುಗಿಯನ್ನು ಮದುವೆಯಾಗಲಿ ಅಥವಾ ಪ್ರೇಮ ವಿವಾಹವಾಗಲಿ ನಮಗೆ ಯಾವುದೇ ಸಮಸ್ಯೆ ಇಲ್ಲ. ಮದುವೆ ಎಂಬುದು ವಿಧಿಯ ಕೈಯಲ್ಲಿ ಇರುತ್ತದೆ. ಆದರೆ, ಪ್ರಭಾಸ್ ಖಂಡಿತ ಮದುವೆ ಆಗುತ್ತಾನೆ.
ಹೀಗಾಗಿ ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಅನೇಕ ಹುಡುಗಿಯರು ಮುಂದೆ ಬರುತ್ತಿದ್ದಾರೆ. ಪ್ರಭಾಸ್ ಜೊತೆ ಫೋಟೋ ತೆಗೆಸಿಕೊಡುವಂತೆ ಅನೇಕರು ವಿನಂತಿಸುತ್ತಾರೆ. ಪ್ರಭಾಸ್ ಎಷ್ಟೇ ಯಶಸ್ವಿಯಾದರೂ ತನ್ನನ್ನು ತಾನು ಹೆಮ್ಮೆ ಪಡುವುದಿಲ್ಲ. ಆತನಿಗೆ ಅಹಂ ಇಲ್ಲ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ