ಬೆಂಗಳೂರು:
‘ಈ ಒಂದು ವಿಚಾರಕ್ಕೆ ನಾನು ಸಂಭ್ರಮಿಸಬೇಕೋ ಅಥವಾ ಮರುಕಪಡಬೇಕೋ ಗೊತ್ತಿಲ್ಲ. ಏಕೆಂದರೆ, ಅಪುಪ ನಟನೆಯ ಕೊನೆಯ ಸಿನಿಮಾದಲ್ಲಿ ನಾನು ನಾಯಕಿ. ಅವರಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಆಗದಿದ್ದರೂ, ಎಲ್ಲವನ್ನು ಅರಿತು ಮುನ್ನಡೆಯಬೇಕಾಗಿದೆ.
ಆದರೆ, ಅವರೊಂದಿಗೆ ನಾನು ಎರಡು ಸಿನಿಮಾಗಳಲ್ಲಿ ನಟಿಸಿದ್ದೇನೆ. ಅವರಿಂದ ಸಾಕಷ್ಟು ಕಲಿತಿದ್ದೇನೆ. ಆ ವಿಚಾರದಲ್ಲಿ ನಾನು ಅದೃಷ್ಟವಂತೆ’- ಹೀಗೆ ಕೊಂಚ ಮೆದುವಾಗಿಯೇ ಹೇಳಿಕೊಂಡರು ನಟಿ ಪ್ರಿಯಾ ಆನಂದ್.
ಅಪ್ಪು ಅಂದರೆ ನಿಷ್ಕಲ್ಮಶ ನಗು:
‘ಅಪ್ಪು ಅವರನ್ನು ಯಾವತ್ತೇ ಭೇಟಿ ಮಾಡಿದರೂ ಅವರ ಮೊಗದಲ್ಲಿ ಮೊದಲು ಕಾಣಿಸುವುದು ಮಗುವಿನ ನಗು. ನಗುಮೊಗದಲ್ಲಿಯೇ ನಮ್ಮನ್ನೆಲ್ಲ ಸೆಟ್ಗೆ ಅವರು ಬರಮಾಡಿಕೊಳ್ಳುತ್ತಿದ್ದರು. ಅವರಿಂದ ನಾನು ಏನನ್ನಾದರೂ ಕಲಿತಿದ್ದೇನೆ ಎಂದರೆ ಅದು ಅವರ ನಗು. ಸದಾ ನಗುತಲಿರಬೇಕು. ಖುಷಿ ಖುಷಿಯಾಗಿರಬೇಕು ಎಂಬುದು ಅವರ ಪಾಲಿಸಿ. ಅದನ್ನೇ ನಾನೂ ಅಳವಡಿಸಿಕೊಂಡಿದ್ದೇನೆ’ ಎನ್ನುತ್ತಾರೆ ಪ್ರಿಯಾ.
ಕನ್ನಡ ಜತೆಗೆ ಮುದ್ದೆ ತಿನ್ನೋದನ್ನೂ ಕಲಿಸಿದ್ರು:
‘ಪುನೀತ್ ಅವರು ಒಳ್ಳೆಯ ಊಟವನ್ನು ಸಖತ್ ಎಂಜಾಯ್ ಮಾಡುತ್ತಿದ್ದರು. ಅದರಲ್ಲೂ ಅವರಿಗೆ ನಾನ್ವೆಜ್ ಬಲು ಇಷ್ಟ. ಶೂಟಿಂಗ್ ಸಮಯದಲ್ಲಿ ಯಾವೆಲ್ಲ ಭಾಗಕ್ಕೆ ಹೋಗುತ್ತಿದ್ದೆವೋ ಅಲ್ಲಿನ ಆಚಾರ ವಿಚಾರ ಮತ್ತು ಅಲ್ಲಿನ ಆಹಾರ ಪದ್ಧತಿಯನ್ನು ತಿಳಿಸಿಕೊಡುತ್ತಿದ್ದರು. ನನಗೆ ಕನ್ನಡ ಕಲಿಸಿಕೊಡುವುದರ ಜತೆಗೆ ಮುದ್ದೆ ತಿನ್ನೋದನ್ನೂ ಹೇಳಿಕೊಟ್ಟಿದ್ದರು …’
ತೆರೆಹಿಂದೆಯೂ ಹೀರೋ:
‘ನಾಯಕಿಯಾಗಿ ಪುನೀತ್ ಜತೆಗೆ ಎರಡು ಸಿನಿಮಾಗಳಲ್ಲಿ ನಾನು ನಟಿಸಿರಬಹುದು. ಆದರೆ, ಅದೆಲ್ಲದಕ್ಕಿಂತ ಹೆಚ್ಚಾಗಿ ಅವರ ಅಪಾರ ಅಭಿಮಾನಿಗಳಲ್ಲಿ ನಾನೂ ಒಬ್ಬಳು. ಏಕೆಂದರೆ, ಅಪುಪ ಕೇವಲ ತೆರೆಮೇಲಷ್ಟೇ ಹೀರೋ ಆಗಿರಲಿಲ್ಲ. ತೆರೆ ಹಿಂದೆಯೂ ನಾಯಕನಾಗಿದ್ದರು. ಶೂಟಿಂಗ್ ಸೆಟ್ಗಳಲ್ಲಿ ಸಮಸ್ಯೆ ಹೇಳಿಕೊಂಡು ಬಂದವರಿಗೆ ಸಹಾಯ ಮಾಡಿದ್ದನ್ನು ನಾನು ಕಂಡಿದ್ದೇನೆ’ ಎನ್ನುತ್ತಾರೆ ಪ್ರಿಯಾ ಆನಂದ್.
ಕೊನೇ ಕ್ಷಣಕ್ಕೆ ಜೇಮ್ಸ್ ಸಿಕ್ತು:
”ರಾಜಕುಮಾರ’ ಸಿನಿಮಾದ ಬಳಿಕ ‘ಜೇಮ್್ಸ ‘ನಲ್ಲಿಯೂ ಪುನೀತ್ ಜತೆ ನಟಿಸಲು ಕೊನೇ ಕ್ಷಣದಲ್ಲಿ ಅವಕಾಶ ಬಂತು. ಬೇರೇನೂ ಯೋಚಿಸದೆ ನಟಿಸಲು ಒಪ್ಪಿಕೊಂಡೆ. ಅದು ನನ್ನ ಅತ್ಯುತ್ತಮ ನಿರ್ಧಾರಗಳಲ್ಲಿ ಒಂದು ಎಂದು ನನಗೆ ಈಗ ಅನಿಸುತ್ತಿದೆ. ಅವರೊಂದಿಗೆ ಸಮಯ ಕಳೆದಿದ್ದೇ ನನಗೆ ಸಿಕ್ಕ ದೊಡ್ಡ ಉಡುಗೊರೆ’ ಎಂದು ಮಾತು ಮುಗಿಸುತ್ತಾರೆ.
ಅಪ್ಪುನೇ ಬ್ರ್ಯಾಂಡ್; ಪ್ರಚಾರ ಬೇಕಿಲ್ಲ:
‘ಜೇಮ್ಸ್’ ಚಿತ್ರ ಪ್ಯಾನ್ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರುತ್ತಿದೆ. ಆದರೆ, ಪ್ರಚಾರದ ವಿಚಾರದಲ್ಲಿ ಜೇಮ್ಸ್ಗೆ ಅದ್ಯಾವುದೂ ಬೇಕಿಲ್ಲ. ಏಕೆಂದರೆ, ಪುನೀತ್ ಅವರೇ ಒಂದು ಬ್ರ್ಯಾಂಡ್. ಅವರು ಇದ್ದಿದ್ದೇ ರೆಕಾರ್ಡ್ ಬ್ರೇಕ್ ಮಾಡಲು. ಇದೀಗ ಸಿನಿಮಾನೇ ಒಂದು ರೆಕಾರ್ಡ್ ಆಗುತ್ತಿದೆ. ಹಾಗಂತ ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿಲ್ಲ. ನಮ್ಮ ಜತೆಗೆ ಇದ್ದಾರೆ, ಇರುತ್ತಾರೆ’ ಎಂಬುದು ಪ್ರಿಯಾ ಮಾತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ