ನವದೆಹಲಿ:
ಅಮೆರಿಕದ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಎರಡನೇ ಬಾರಿ ಗದ್ದುಗೆ ಏರುತ್ತಿದ್ದಂತೆಯೇ ಅಕ್ರಮ ವಲಸಿಗರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು 104 ಭಾರತೀಯರನ್ನು ಗಡಿಪಾರು ಮಾಡಲಾಗಿದೆ.ಈ ವಿಷಯ ರಾಜ್ಯಸಭೆಯಲ್ಲಿ ಚರ್ಚೆಗೆ ಬಂದಿದ್ದು, ಗಡಿಪಾರಾದವರ ಕೈಗೆ ಕೋಳ ಹಾಕಿ ಕರೆತಂದ ನಡೆ ಸೇರಿದಂತೆ ಹಲವು ಅಂಶಗಳನ್ನಿಟ್ಟುಕೊಂಡು ಸರ್ಕಾರದ ವಿರುದ್ಧ ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.
ಭಾರತೀಯರನ್ನು ಅಮೇರಿಕ ಗಡಿಪಾರು ಮಾಡಿರುವುದರ ಬಗ್ಗೆ ರಾಜ್ಯಸಭೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಪ್ರತಿಪಕ್ಷಗಳ ಸದಸ್ಯರ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.
ಅಮೇರಿಕಾದಿಂದ ಭಾರತೀಯರನ್ನು ಗಡಿಪಾರು ಮಾಡಿರುವುದು ಇದೇ ಮೊದಲೇನೂ ಅಲ್ಲ. ಬದಲಾಗಿ ಇದು ಹಲವು ವರ್ಷಗಳ ಕಾಲ ಪ್ರಗತಿಯಲ್ಲಿದ್ದ ಪ್ರಕ್ರಿಯೆ ಜಾರಿಯಾಗಿರುವುದಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ. ಅಕ್ರಮ ವಲಸಿಗರನ್ನು ವಾಪಸ್ ಕರೆದುಕೊಂಡು ಹೋಗುವ ಜವಾಬ್ದಾರಿ ಎಲ್ಲಾ ದೇಶಗಳಿಗೂ ಇದೆ ಎಂದು ಜೈಶಂಕರ್ ಇದೇ ವೇಳೆ ಒತ್ತಿ ಹೇಳಿದ್ದು ಇದು ಸಾಮಾನ್ಯವಾಗಿ ಅಂಗೀಕರಿಸಲ್ಪಟ್ಟ ಅಂಶ ಎಂದು ತಿಳಿಸಿದ್ದಾರೆ. “ಕಾನೂನು ಬದ್ಧವಾಗಿ ಮತ್ತೊಂದು ದೇಶಕ್ಕೆ ತೆರಳುವುದನ್ನು ಪ್ರೋತ್ಸಾಹಿಸುವುದು, ಅಕ್ರಮ ವಲಸೆಯನ್ನು ವಿರೋಧಿಸುವುದು ನಮ್ಮ ಸಾಮೂಹಿಕ ಹಿತಾಸಕ್ತಿಯಾಗಿದೆ” ಎಂದು ಜೈಶಂಕರ್ ಮಾಹಿತಿ ನೀಡಿದ್ದಾರೆ.
ಅಕ್ರಮ ವಲಸೆಯ ಬಲೆಗೆ ಹಲವು ಭಾರತೀಯರು ಬೀಳುತ್ತಿದ್ದಾರೆ ಪರಿಣಾಮವಾಗಿ ಅಮಾನವೀಯ ಪರಿಸ್ಥಿತಿಗಳಲ್ಲಿ ಕೆಲಸ ಮಾಡುವ ಸನ್ನಿವೇಶ ಎದುರಿಸುತ್ತಿದ್ದಾರೆ. ವಾಪಸ್ಸಾದವರಲ್ಲಿ ಈ ಪೈಕಿ ಹಲವರು ತಮಗೆ ಆದ ಕರಾಳ ಅನುಭವ ಹಂಚಿಕೊಂಡಿದ್ದಾರೆ ಎಂದು ಜೈಶಂಕರ್ ತಿಳಿಸಿದ್ದಾರೆ.
“ಗಡೀಪಾರು ಮಾಡಲ್ಪಟ್ಟವರನ್ನು ಯಾವುದೇ ರೀತಿಯಲ್ಲಿ ಕೆಟ್ಟದಾಗಿ ನಡೆಸಿಕೊಳ್ಳದಂತೆ ನೋಡಿಕೊಳ್ಳಲು ನಾವು ಅಮೆರಿಕ ಸರ್ಕಾರದೊಂದಿಗೆ ಮಾತುಕತೆ ನಡೆಸುತ್ತೇವೆ. ಅದೇ ಸಮಯದಲ್ಲಿ, ಅಕ್ರಮ ವಲಸೆ ಉದ್ಯಮದ ವಿರುದ್ಧ ಬಲವಾದ ಕ್ರಮ ಕೈಗೊಳ್ಳುವತ್ತ ನಮ್ಮ ಗಮನ ಇರಬೇಕು ಎಂಬುದನ್ನು ಸದನ ಪ್ರಶಂಸಿಸುತ್ತದೆ. ಗಡಿಪಾರು ಮಾಡಲ್ಪಟ್ಟವರು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಕಾನೂನು ಜಾರಿ ಸಂಸ್ಥೆಗಳು ಏಜೆಂಟರು ಮತ್ತು ಅಂತಹ ಏಜೆನ್ಸಿಗಳ ವಿರುದ್ಧ ಅಗತ್ಯ, ತಡೆಗಟ್ಟುವ ಮತ್ತು ಅನುಕರಣೀಯ ಕ್ರಮಗಳನ್ನು ತೆಗೆದುಕೊಳ್ಳುತ್ತವೆ” ಎಂದು ಜೈಶಂಕರ್ ಹೇಳಿದರು.
“ಯುಎಸ್ ನಿಂದ ಗಡೀಪಾರು ಮಾಡುವಿಕೆಯನ್ನು ವಲಸೆ ಮತ್ತು ಕಸ್ಟಮ್ಸ್ ಜಾರಿ (ICE) ಕಾರ್ಯಗತಗೊಳಿಸುತ್ತದೆ. ಮಹಿಳೆಯರು ಮತ್ತು ಮಕ್ಕಳ ಕೈಗೆ ಕೋಳ ಹಾಕುವುದಿಲ್ಲ ಎಂದು ICE ನಮಗೆ ತಿಳಿಸಿದೆ” ಎಂದು ಜೈಶಂಕರ್ ಹೇಳಿದರು.10 ಗಂಟೆಗಳ ಪ್ರಯಾಣದ ಸಮಯದಲ್ಲಿ ಗಡಿಪಾರು ಮಾಡಿದವರಿಗೆ ಆಹಾರ ಮತ್ತು ಔಷಧವನ್ನು ಒದಗಿಸಲಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಆದಾಗ್ಯೂ, ಸರ್ಕಾರದ ಪ್ರಾಥಮಿಕ ಗಮನ ಅಕ್ರಮ ವಲಸೆ ಉದ್ಯಮವನ್ನು ಹತ್ತಿಕ್ಕುವತ್ತ ಇರಬೇಕು ಎಂದು ಅವರು ಜೈಶಂಕರ್ ಹೇಳಿದ್ದಾರೆ.
“ಅಗತ್ಯವಿದ್ದರೆ, ಗಡೀಪಾರು ಮಾಡುವವರನ್ನು ಶೌಚಾಲಯ ವಿರಾಮದ ಸಮಯದಲ್ಲಿ ತಾತ್ಕಾಲಿಕವಾಗಿ ಕೈಗೆ ಕೋಳ ಹಾಕಲಾಗುತ್ತದೆ. ಇದು ಚಾರ್ಟರ್ಡ್ ನಾಗರಿಕ ಮತ್ತು ಮಿಲಿಟರಿ ವಿಮಾನಗಳಿಗೆ ಅನ್ವಯಿಸುತ್ತದೆ, ಹಿಂದಿನ ಕಾರ್ಯವಿಧಾನಗಳಿಗೆ ಯಾವುದೇ ಬದಲಾವಣೆಗಳಿಲ್ಲ. ಹಿಂದಿರುಗಿದವರನ್ನು ಸರಿಯಾಗಿ ನಡೆಸಿಕೊಳ್ಳುವುದನ್ನು ಖಚಿತಪಡಿಸಿಕೊಳ್ಳಲು ಭಾರತ ಸರ್ಕಾರವು ಯುಎಸ್ ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಗಡಿಪಾರು ವಿಷಯವಾಗಿ ರಾಜ್ಯಸಭೆಯಲ್ಲಿ ಮಾತನಾಡಿದ ಕರ್ನಾಟಕದ ಸಂಸದ Nasser Hussain ಅವರ ಹೇಳಿಕೆಗೆ ಜೈಶಂಕರ್ ಕೆಂಡಾಮಂಡಲರಾದರು.ಅಮೇರಿಕ ಅಧ್ಯಕ್ಷೀಯ ಚುನಾವಣೆ ಸಂದರ್ಭದಲ್ಲಿ ಮೋದಿ ತಮ್ಮ ಮಿತ್ರ ಟ್ರಂಪ್ ಪರ ಪ್ರಚಾರ ಮಾಡಿದ್ದರು. ಈಗ ಅವರ ಮಿತ್ರ ಭಾರತೀಯರಿಗೆ ಕೋಳ ಹಾಕಿ ಕಳಿಸಿದ್ದಾರೆ ಎಂದು ನಾಸಿರ್ ಹುಸೇನ್ ಹೇಳುತ್ತಿದ್ದಂತೆಯೇ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಜೈಶಂಕರ್ ಯಾರಿಗೂ ಮೋದಿ ಪ್ರಚಾರ ಮಾಡಿಲ್ಲ ಕಾಂಗ್ರೆಸ್ ಸದಸ್ಯರು ತಮ್ಮ ಹೇಳಿಕೆಯನ್ನು ಹಿಂಪಡೆಯಬೇಕೆಂದು ಆಗ್ರಹಿಸಿದರು.
2009 ರಿಂದ ಅಮೆರಿಕದಿಂದ ಗಡಿಪಾರು ಮಾಡಲ್ಪಟ್ಟ ಭಾರತೀಯರ ಸಂಖ್ಯೆಯ ಕುರಿತು ಜೈಶಂಕರ್ ರಾಜ್ಯಸಭೆಯಲ್ಲಿ ದತ್ತಾಂಶವನ್ನು ಮಂಡಿಸಿದರು. ಅಂಕಿಅಂಶಗಳು ವರ್ಷಗಳಲ್ಲಿ ಏರಿಳಿತಗಳನ್ನು ತೋರಿಸಿದವು, 2019 ರಲ್ಲಿ ಅತಿ ಹೆಚ್ಚು 2,042 ಗಡೀಪಾರುಗಳು ದಾಖಲಾಗಿವೆ.
