ಬೆಂಗಳೂರು
ಪ್ರದೇಶ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರನ್ನಾಗಿ ಹೈಕಮಾಂಡ್ ಹಿರಿಯ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಆಯ್ಕೆ ಮಾಡಿದ ಬೆನ್ನಲ್ಲೆ ಕೈ ಪಾಳಯದಲ್ಲಿ ವಿದ್ಯಮಾನಗಳು ಚುರುಕುಗೊಂಡಿವೆ. ಡಿ.ಕೆ.ಶಿವಕುಮಾರ್ ತಂಡಕ್ಕೆ ಸೇರ್ಪಡೆಯಾಗಲು ಪಕ್ಷದಲ್ಲಿ ಭರ್ಜರಿ ಲಾಭಿ ಆರಂಭವಾಗಿದೆ. ಒಂದು ವರ್ಷದಿಂದಲೂ ಕೆಪಿಸಿಸಿಯಲ್ಲಿ ಪದಾಧಿಕಾರಿಗಳೇ ಇರಲಿಲ್ಲ. ಅಷ್ಟೇ ಅಲ್ಲ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲು ಅನುಭವಿಸಿದ ನಂತರ ಕೆಪಿಸಿಸಿ ಅಧ್ಯಕ್ಷರಿಲ್ಲದೆ ಯಾವುದೇ ಚಟುವಟಿಕೆಗಳು ಕಂಡು ಬಂದಿರಲಿಲ್ಲ.
ಈಗ ಕೆಪಿಸಿಸಿ ಹುದ್ದೆಗೆ ಪ್ರಬಲ ಒಕ್ಕಲಿಗ ಸಮುದಾಯದ ನಾಯಕ ಡಿ.ಕೆ.ಶಿವಕುಮಾರ್ ಅವರನ್ನು ಹೈಕಮಾಂಡ್ ಆಯ್ಕೆ ಮಾಡಿದೆ.ಈಗ ಕೆಪಿಸಿಸಿ ಪದಾಧಿಕಾರಿಗಳ ಹುದ್ದೆಗಳು ಮಾತ್ರ ಬಾಕಿ ಉಳಿದಿದ್ದು, ಈ ಹುದ್ದೆಗಳನ್ನು ಅಲಂಕರಿಸಲು ಪಕ್ಷದಲ್ಲಿ ಭಾರಿ ಪೈಪೋಟಿ ಕಂಡು ಬಂದಿದೆ.
ಸದಾಶಿವ ನಗರದಲ್ಲಿರುವ ಡಿಕೆಶಿ ನಿವಾಸದ ಬಳಿ ಜನ ಜಮಾಯಿಸಿದ್ದಾರೆ.ಅವರಿಗೆ ಶುಭಾಶಯ ಹೇಳುವ ನೆಪದಲ್ಲಿ ಡಿ.ಕೆ.ಶಿವಕುಮಾರ್ ತಂಡ ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ.ಇದಕ್ಕಾಗಿ ತೆರೆಮರೆಯಲ್ಲಿ ಬಿರುಸಿನ ಲಾಬಿ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿದೆ.
ಡಿ.ಕೆ. ಶಿವಕುಮಾರ್ ದಿಟ್ಟ ನಿರ್ಧಾರಗಳನ್ನು ಕೈಗೊಂಡು ಅದನ್ನು ಅನುಷ್ಠಾನಕ್ಕೆ ತರುತ್ತಾರೆ.ಹೀಗಾಗಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಉಪಾಧ್ಯಕ್ಷ ಹುದ್ದೆ ಗಿಟ್ಟಿಸಲು ಹಲವಾರು ಮಂದಿ ಮುಗಿ ಬಿದ್ದಿದ್ದಾರೆ.ಕಾಂಗ್ರೆಸ್‍ನಲ್ಲಿ ಮುಖಂಡರ ಶಿಫಾರಸ್ಸನ್ನು ಪರಿಗಣಿಸಿ ಪದಾಧಿಕಾರಿಗಳ ಸ್ಥಾನ ನೀಡಲಾಗುತ್ತಿತ್ತು.ಈಗ ಡಿ.ಕೆ.ಶಿವಕುಮಾರ್ ಪಕ್ಷದ ಸಾರಥ್ಯ ವಹಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ತಮ್ಮದೇ ತಂಡ ರಚಿಸಿಕೊಳ್ಳುವ ನಿರೀಕ್ಷೆ ಇದೆ.
ಪಕ್ಷ ನಿಷ್ಠೆ, ಬದ್ಧತೆ ಮತ್ತು ಅರ್ಪಣಾ ಮನೋಭಾವದಿಂದ ಪಕ್ಷಕ್ಕಾಗಿ ದುಡಿಯುವ ಕಾರ್ಯಕರ್ತರಿಗೆ ಹೆಚ್ಚಿನ ಆದ್ಯತೆ ದೊರೆಯುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಮುಂಬರುವ ವಿಧಾನಸಭಾ ಚುನಾವಣೆಗೆ ಪಕ್ಷವನ್ನು ರಾಜ್ಯಮಟ್ಟದಲ್ಲಿ ಸಂಘಟಿಸಿ ಮತ್ತೆ ಪಕ್ಷವನ್ನು ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್ ಕಠಿಣಕ್ರಮಗಳನ್ನು ಕೈಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
