ಹಾವೇರಿ:
ಉಕ್ರೇನ್ ನಲ್ಲಿ ಮೃತವಾಗಿರುವ ವೈದ್ಯಕೀಯ ವಿದ್ಯಾರ್ಥಿ ನವೀನ್ ಮೃತದೇಹ ಸೋಮವಾರ ಬೆಳಗ್ಗೆ ಬೆಂಗಳೂರಿಗೆ ಆಗಮಿಸಲಿದೆ. ಬೆಂಗಳೂರಿನಿಂದ ನೇರವಾಗಿ ಹುಟ್ಟೂರು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಚಳಗೇರಿ ಗ್ರಾಮಕ್ಕೆ ತೆಗೆದುಕೊಂಡು ಹೋಗಲಾಗುತ್ತದೆ.
ಅಂತಿಮವಾಗಿ ಸಲ್ಲಿಸಬೇಕಾದ ಪೂಜೆಗಳನ್ನು ಮಾಡುವ ಕುರಿತು ಗ್ರಾಮದ ಹಿರಿಯರು ನಿರ್ಧರಿಸಲಿದ್ದಾರೆ. ಸಂಜೆವರೆಗೂ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು. ತದನಂತರ ದಾವಣಗೆರೆಯ ಎಸ್.ಎಸ್.ಆಸ್ಪತ್ರೆಗೆ ಪಾರ್ಥಿವ ಶರೀರವನ್ನು ದಾನವಾಗಿ ನೀಡುತ್ತಿದ್ದೇವೆ ಎಂದು ಹೇಳಿದರು.
ಮಗ ನವೀನ್ ಗೆ ವೈದ್ಯಕೀಯ ಲೋಕದಲ್ಲಿ ಏನಾದ್ರೂ ಸಾಧನೆ ಮಾಡಬೇಕೆಂಬ ಮಹಾದಾಸೆ ಇತ್ತು, ಆದ್ರೆ ಅದು ಸಾಧ್ಯವಾಗಲಿಲ್ಲ. ಮಗ ಪಾರ್ಥಿವ ಶರೀರ ಬೇರೆ ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಹಾಯ ಆಗಲಿ ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಶೇಖರಪ್ಪ ಗ್ಯಾನಗೌಡರ್ ಹೇಳಿದ್ದಾರೆ.
ನವೀನ್ ನಿವಾಸಕ್ಕೆ ಶಾಸಕ ಅರುಣ್ ಪೂಜಾರಿ ಭೇಟಿ
ಇಂದು ಬೆಳಗ್ಗೆ ಮೃತ ನವೀನ್ ಮನೆಗೆ ರಾಣೆಬೆನ್ನೂರಿನ ಶಾಸಕ ಅರುಣ್ ಪೂಜಾರಿ ಭೇಟಿ ನೀಡಿ, ಮೃತದೇಹವನ್ನು ದಾನ ಮಾಡಬೇಕಾ ಅಥವಾ ಅಂತ್ಯಕ್ರಿಯೆ ಮಾಡಬೇಕಾ ಅನ್ನೋ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಲಿದ್ದಾರೆ.
ನವೀನ್ ಮೃತಪಟ್ಟು 21 ದಿನ ಆಗುತ್ತಿರುವ ಹಿನ್ನಲೆ ಮೃತದೇಹವನ್ನ ಆಸ್ಪತ್ರೆಗೆ ದಾನ ಮಾಡಲು ಸಾಧ್ಯವಾ ಅನ್ನೋದರ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಮೃತ ದೇಹ ಆಗಮಿಸಿದ ನಂತರ ವೈದ್ಯರಿಂದ ತಪಾಸಣೆ ನಡೆಸಿ ನಂತರ ದಾನ ಮಾಡೋದಾ ಅಥವಾ ಅಂತ್ಯಕ್ರಿಯೆ ಮಾಡೋದಾ ಅನ್ನೋ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಸಾಧ್ಯತೆಗಳಿವೆ.
ಸಾವನ್ನಪ್ಪಿದ ಮೂರು ದಿನಗಳ ಬಳಿಕ ನವೀನ್ ಶವ ಪತ್ತೆ
ನವೀನ್ ಸಾವನ್ನಪ್ಪಿದ ಮೂರು ದಿನಗಳ ಬಳಿಕ ಉಕ್ರೇನ್ನಲ್ಲಿ ನವೀನ್ ಮೃತ ದೇಹದ ಗುರುತು ಪತ್ತೆಯಾಗಿರುವ ಕುರಿತು ಕೂಡ ಮುಖ್ಯಮಂತ್ರಿಗಳು ತಿಳಿಸಿದ್ದರು. ನವೀನ್ ಮೃತದೇಹ ಪತ್ತೆಯಾಗಿದ್ದು, ಶೆಲ್ ದಾಳಿಯಿಂದ ಸಾವನ್ನಪ್ಪಿರುವುದು ದೃಢವಾಗಿದೆ. ಉಕ್ರೇನ್ ಶವಾಗಾರದಲ್ಲಿ ಅವರ ಶವವನ್ನು ಇರಿಸಲಾಗಿದ್ದು, ಆದಷ್ಟು ಬೇಗ ವಿದೇಶಾಂಗ ಇಲಾಖೆ ಪಾರ್ಥಿವ ಶರೀರ ತರಿಸುವ ಸಂಬಂಧ ಕ್ರಮ ಕೈಗೊಳ್ಳಲಿದೆ ಎಂದಿದ್ದರು.
ಸರ್ಕಾರದಿಂದ 25 ಲಕ್ಷ ಪರಿಹಾರ
ಸಾವನ್ನಪ್ಪಿದ ನವೀನ್ ಕುಟುಂಬಕ್ಕೆ ಸಿಎಂ ಬಸವರಾಜ ಬೊಮ್ಮಾಯಿ, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿಎಸ್ ಯಡಿಯೂರಪ್ಪ ಸೇರಿದಂತೆ ಅನೇಕ ಶಾಸಕರು ಸಚಿವರು ಸಾಂತ್ವನ ಹೇಳಿದ್ದರು. ಮೃತ ಪಟ್ಟ ನವೀನ್ ಕುಟುಂಬಕ್ಕೆ ಸಿಎಂ ಬೊಮ್ಮಾಯಿ ರಾಜ್ಯ ಸರ್ಕಾರದಿಂದ 25 ಲಕ್ಷ ಪರಿಹಾರದ ಚೆಕ್ ಅನ್ನು ಕೂಡ ವಿತರಿಸಿದ್ದರು. ಇನ್ನು ಪಾರ್ಥಿವ ಶರೀರ ತರಿಸುವ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯುವುದಾಗಿ ಸಿದ್ದರಾಮಯ್ಯ ಕೂಡ ತಿಳಿಸಿದ್ದರು.
ಹೋಳಿ ಆಡಲು ಹೋದವನಿಗೆ ಶಾಕ್; ಆಟಕ್ಕೂ ಮುನ್ನ ಪ್ರಾಣ ಕಳೆದುಕೊಂಡ ಬಾಲಕ..
ಇನ್ನು ಆಪರೇಷನ್ ಗಂಗಾ ಅಡಿಯಲ್ಲಿ ಈಗಾಗಲೇ ಉಕ್ರೇನ್ನಲ್ಲಿ ಸಿಲುಕಿದ್ದ ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆ ತರಲಾಗಿದೆ. ನವೀನ್ ಜೊತೆ ಇದ್ದ ಸ್ನೇಹಿತರು ಕೂಡ ಈಗಾಗಲೇ ಸುರಕ್ಷಿತವಾಗಿ ಬಂದು ಇಳಿದಿದ್ದು, ನವೀನ್ ಮನೆಗೆ ಭೇಟಿ ನೀಡಿ ಅವರ ಉಕ್ರೇನ್ನಲ್ಲಿ ತಮಗೆ ಮಾಡಿದ ಸಹಾಯ ನೆನೆದು ಕಣ್ಣೀರು ಹಾಕಿದ್ದರು.
ಅಂತಿಮ ವಿಧಿ- ವಿಧಾನ ನಡೆಸದ ಕುಟುಂಬ
ಮಗ ಸಾವನ್ನಪ್ಪಿದ್ದು ಆತನ ಪಾರ್ಥಿವ ಶರೀರ ಬಾರದ ನೋವಿನಲ್ಲಿ ಕುಟುಂಬಸ್ಥರು ಇದ್ದಾರೆ. ಈಗಾಗಲೇ ಮೂರು ದಿನದ ಕಾರ್ಯ ಮಾಡಿರುವ ಕುಟುಂಬಸ್ಥರು ಅಂತಿಮ ವಿಧಿ ವಿಧಾನ ನಡೆಸಲು ನವೀನ್ ಪಾರ್ಥಿವ ಶರೀರಕ್ಕೆ ಎದುರು ನೋಡುತ್ತಿದ್ದಾರೆ. ನವೀನ್ ಪೋಷಕರಿಗೆ ಸಮಾಧಾನ ಮಾಡಿದ ಸಿಎಂ ಸೇರಿದಂತೆ ಎಲ್ಲಾ ರಾಜಕೀಯ ಮುಖಂಡರಿಗೂ ತಮ್ಮ ಮಗನ ಪಾರ್ಥಿವ ಶರೀರವನ್ನು ತರಿಸುವ ವ್ಯವಸ್ಥೆ ಮಾಡುವಂತೆ ಅವರು ಮನವಿ ಮಾಡಿದ್ದರು.