ತುಮಕೂರು:
ಹುಣಸೆ ಬೆಳೆಗಾರನ ಜೇಬಿಗೆ ದಕ್ಕದ ಬೆಂಬಲ ಬೆಲೆ
………..ನಿನ್ನೆ ಸಂಚಿಕೆಯಿಂದ
ತೆಂಗಿನ ಬೆಳೆಯಂತೆ ಈ ಹುಣಸೆ ಬೆಳೆಯೂ ಕೂಡ ರೈತರಿಗೆ ಒಂದು ರೀತಿಯಲ್ಲಿ ಕಾಮಧೇನು ಕಲ್ಪವೃಕ್ಷವೇ ಆಗಿದೆ. ಹುಣಸೆ ಮರದಿಂದ ಹಣ್ಣನ್ನು ಕೆಳಗೆ ಬೀಳಿಸಿದ ಕೂಡಲೆ ಈ ಹಣ್ಣಿನ ತರಾವರಿ ಮಜಲುಗಳು ಆರಂಭಗೊಳ್ಳುತ್ತವೆ. ಹಣ್ಣನ್ನು ಶುಚಿಗೊಳಿಸಿ ಮಾರಾಟಕ್ಕೆ ಅನುವು ಮಾಡುವುದು ಒಂದು ಕಡೆಯಾದರೆ, ಇದೇ ಹುಣಸೆಹಣ್ಣಿನ ಬೀಜ ವಿವಿಧ ಆರೋಗ್ಯಕರ ವಸ್ತುಗಳಿಗೆ ಸೇರ್ಪಡೆಯಾಗಲು ಬಳಕೆಯಾಗುತ್ತದೆ.
ಬೀಜವನ್ನು ಅಂಟಿನ ರೂಪಕ್ಕೂ ಪರಿವರ್ತಿಸಿ ಕಂಬಳಿ ಸೇರಿದಂತೆ ಅನೇಕ ನೇಯ್ಗೆಯ ಬಟ್ಟೆಗಳಿಗೂ ಬಳಕೆ ಮಾಡಲಾಗುತ್ತದೆ. ಹುಣಸೆ ಹಿಪ್ಪೆಯನ್ನು ನೀರು ಕಾಯಿಸಲು ಬಳಸಲಾಗುತ್ತದೆ. ಹೀಗೆ ಹಲವು ರೀತಿಯಲ್ಲಿ ಹುಣಸೆ ಫಸಲು ಜನೋಪಯೋಗಿ ಬೆಳೆಯಾಗತೊಡಗುತ್ತದೆ.
ಇಂತಹ ಬೆಳೆಯ ಬಗ್ಗೆ ರೈತರಲ್ಲಿ ಸಾಕಷ್ಟು ಆಸಕ್ತಿ ಇದ್ದರೂ ಕೂಡ ಇಂತಹ ರೈತರನ್ನು ಮಾರುಕಟ್ಟೆಯಲ್ಲಿ ವ್ಯಾಪಕವಾಗಿ ಶೋಷಣೆ ಮಾಡಲಾಗುತ್ತಿದೆ ಎಂಬ ವಿಷಯ ನಿಜಕ್ಕೂ ಒಂದು ದುರಂತವೇ ಸರಿ. ಇಂದಲ್ಲಾ ನಾಳೆ ನಮಗೆ ಒಳ್ಳೆಯ ಬೆಲೆ ಸಿಗುತ್ತದೆಂಬ ಆಶಾಭಾವನೆಯಿಂದ ಇರುವ ಈ ಬೆಳೆಯ ರೈತನಿಗೆ ಈವರೆಗೂ ಸಮಾಧಾನವಾಗುವಂತಹ ಬೆಂಬಲ ಬೆಲೆಯೇ ಸಿಕ್ಕಿಲ್ಲ.
ಮಾರುಕಟ್ಟೆಗೆ ಹಣ್ಣನ್ನು ತರುವಾಗ ನಾನಾ ರೀತಿಯಲ್ಲಿ ಈ ಹಣ್ಣಿನ ಗುಣಮಟ್ಟ ಕಾಯ್ದುಕೊಂಡು ರೈತರು ಹಣ್ಣನ್ನು ತರುತ್ತಾರೆ. ಈ ಬೆಳೆಯಲ್ಲಿ ಕರಪೂಯಿ ಎಂಬ ಹಣ್ಣು ಮೊದಲ ಹಂತದ ಗುಣಮಟ್ಟದ್ದಾದರೆ, ಬೆಸ್ಟ್ ಫ್ಲವರ್ ಎಂಬುದು ಎರಡನೇ ಹಂತದ ಗುಣಮಟ್ಟಾದ್ದಾಗಿದೆ. ಮಿಕ್ಸಿಂಗ್ ಪ್ಲವರ್ ಎಂಬದು ಮೂರನೇ ದÀರ್ಜೆಯ ಹಣ್ಣಾಗಿದೆ. ಮೊದಲ ಗುಣಮಟ್ಟದ ಹಣ್ಣಿಗೆ ಅತಿ ಹೆಚ್ಚು ಬೆಲೆ ಇರುತ್ತದೆ. ಅಂದರೆ ಮಡಿಕೆ ಇರುವ ಕರಪೂಯಿ ಹೆಸರಿನ ಹಣ್ಣಿನಲ್ಲಿಯೇ ಮೂರು ವಿಧದ ಗುಣಮಟ್ಟವಿದೆ. ಇಂತಹ ಹಣ್ಣು ಕ್ವಿಂಟಾಲ್‍ಗೆ 28,000-30,000 ರೂಗಳವರೆಗೂ ಮಾರಾಟವಾಗುತ್ತದೆ.
ಎರಡನೇ ಗುಣಮಟ್ಟದ ಬೆಸ್ಟ್ ಪ್ಲವರ್ ಹಣ್ಣು ನಾರು ಮತ್ತು ಬೀಜದ ಸಮೇತ ಮಾರುಕಟ್ಟೆಗೆ ಬಂದಿರುತ್ತದೆ. ಮೂರನೇ ದÀರ್ಜೆಯ ಹಣ್ಣಾದ ಮಿಕ್ಸಿಂಗ್ ಫ್ಲವರ್ ಹಣ್ಣು ಹೆಚ್ಚಿನ ಗುಣಮಟ್ಟ ಕಾಯ್ದುಕೊಂಡಿರುವುದಿಲ್ಲ. ಕಾರಣ ಕೂಲಿಕಾರರ ಸಮಸ್ಯೆಯಿಂದಾಗಿ ಹಣ್ಣಿನ ಜೊತೆಗೆ ಬೀಜ, ಬೋಟುಗಳೆಲ್ಲವೂ ಸೇರ್ಪಡೆಗೊಂಡ ಪರಿಣಾಮ ಈ ಹಣ್ಣಿಗೆ ಉತ್ತಮ ಬೆಲೆ ಲಭ್ಯವಾಗಲು ಸಾಧ್ಯವಿಲ್ಲ.
ಒಟ್ಟಾರೆ ತರಾವರಿ ವಿಧಗಳಿರುವ ಹುಣಸೆಹಣ್ಣನ್ನು ರೈತರು ಕಳೆದ ಮೂರು ವರ್ಷಗಳಿಂದಲೂ ಮಾರುಕಟ್ಟೆಗೆ ಕೊಂಡೊಯ್ದು ಮಾರಾಟ ಮಾಡುತ್ತಿದ್ದರೂ ಉತ್ತಮ ಬೆಲೆ ಮಾತ್ರ ಹುಣಸೆಹಣ್ಣಿಗೆ ಲಭ್ಯವಾಗುತ್ತಲೆ ಇಲ್ಲ. ಕಳೆದ ವಾರದಲ್ಲಿ ಶಿರಾ, ಕೊರಟಗೆರೆ, ಮಧುಗಿರಿ ಹಾಗೂ ಪಾವಗಡ ಭಾಗದ ಮಾರುಕಟ್ಟೆಯಲ್ಲಿ 9,000-28,000ದವರೆಗೂ ಮಾರಾಟವಾಗಿದೆ. ಸ್ವಲ್ಪ ಗುಣಮಟ್ಟ ಕಡಿಮೆ ಇರುವ ರೈತರ ಹಣ್ಣಿಗೆ ಉತ್ತಮ ಬೆಲೆ ಲಭ್ಯವಾಗದೆ ರೈತರ ಜೇಬಿಗೆ ಕತ್ತರಿ ಬೀಳುವುದಂತೂ ತಪ್ಪಿಲ್ಲ.
ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಸರ್ವ ಪ್ರಯತ್ನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬಯಲುಸೀಮೆಯ ಈ ಭಾಗದ ರೈತರು ಸಮೀಪದ ಚಳ್ಳಕೆರೆ, ಹಿಂದೂಪುರ, ತುಮಕೂರು ಮಾರುಕಟ್ಟೆಗಳಿಗೆ ಹಣ್ಣನ್ನು ಮಾರಾಟ ಮಾಡಲು ಒಯ್ಯುತ್ತಾರೆ. ಕಳೆದವಾರ ಆಂಧ್ರ್ರದ ಹಿಂದೂಪುರದ ಮಾರುಕಟ್ಟೆಯಲ್ಲಿ ಸಾವಿರಾರು ಟನ್‍ಗಟ್ಟಲೆ ಹಣ್ಣನ್ನು ಖರೀದಿದಾರರು ಕೊಂಡೊಯ್ದು ಮಾರಾಟ ಮಾಡಿದ್ದಾರೆ. ಕೋವಿಡ್‍ನಿಂದಾಗಿ ಕಳೆದ ಎರಡು ವರ್ಷಗಳಿಂದಲೂ ಈ ಬೆಳೆಗೆ ಉತ್ತಮ ಬೆಲೆಯೇ ಲಭ್ಯವಾಗಿಲ್ಲವೆಂಬುದು ಪ್ರಗತಿಪರ ರೈತರ ನೋವಾಗಿದೆ.
ಕಳೆದ ಎರಡು ವರ್ಷಗಳ ಹಣ್ಣನ್ನು ಅತ್ಯಂತ ಕಡಿಮೆ ಬೆಲೆಗೆ ಕೊಂಡ ಖರೀದಿದಾರರು ಆಂಧ್ರÀ್ರ ಪ್ರದೇಶದ ದೊಡ್ಡ ಮಾರುಕಟ್ಟೆಯಾದ ಹಿಂದೂಪುರಕ್ಕೆ ಕೊಂಡೊಯ್ದು ಮಾರಾಟ ಮಾಡಿದ್ದಾರೆ. ಈಗಲೂ ಮಾರಾಟ ಮಾಡುತ್ತಿದ್ದಾರೆ. ಹಿಂದೂಪುದಲ್ಲಿ ಕೋಲ್ಡ್ ಸ್ಟೋರೇಜ್ ಇರುವ ಕಾರಣದಿಂದ ಹುಣಸೆ ಆವಕವನ್ನು ಅಲ್ಲಿ ಶೇಖರಿಸಿಡಲು ಕೂಡ ಸಾಧ್ಯವಿದೆ. ಇದರೊಟ್ಟಿಗೆ ಈ ಹಣ್ಣನ್ನು ಚೆನ್ನೈಗೂ ಖರೀದಿದಾರರು ಕೊಂಡೊಯ್ದು ಮಾರುತ್ತಿದ್ದಾರೆ. ಅಂದರೆ ನಮ್ಮ ರಾಜ್ಯದಲ್ಲಿ ಈ ಹಣ್ಣನ್ನು ಕೊಂಡು ಮಾರುವ ಮಾರುಕಟ್ಟೆಯೇ ಇಲ್ಲದಿರುವುದು ರೈತರ ದೌರ್ಭಾಗ್ಯವೇ ಸರಿ.
ಬೆಂಬಲ ಬೆಲೆ ಲಭ್ಯವಾಗದ ಈ ರೈತರನ್ನು ಮಾರುಕಟ್ಟೆಯಲ್ಲಿ ಖರೀದಿದಾರರು ಒಂದು ರೀತಿಯಲ್ಲಿ ಸುಲಿದು ಹಾಕಿದರೆ, ವಿವಿಧ ಸರ್ಕಾರಿ ಇಲಾಖೆಗಳು ಹಾಗೂ ರಾಜ್ಯ ಸರ್ಕಾರವೆ ಹುಣಸೆ ಬೆಳೆಯುವ ರೈತರನ್ನು ನಿರಂತರವಾಗಿ ಶೋಷಣೆ ಮಾಡುತ್ತಲೇ ಬರುತ್ತಿದೆ. ಅಡಕೆ, ತೆಂಗು ಸೇರಿದಂತೆ ನೂರಾರು ಬೆಳೆಗಳಿಗೆ ಪರಿಹಾರ, ಅನುದಾನ, ಸಾಲ-ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿದ್ದರೂ ಈ ಬೆಳೆಗೆ ಸರ್ಕಾರವೇ ಬೆಂಬಲ ನೀಡದಿರುವ ಬಗ್ಗೆ ರೈತರಲ್ಲಿ ಸಾಕಷ್ಟು ನೋವಿದೆ.
ಹುಣಸೆ ಬೆಳೆಗಾರರ ಸಂಕಷ್ಟಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಯುವಜನ ಅಭಿವೃದ್ಧಿ ನಿಧಿಯ, ಯುವ ವ್ಯವಹಾರ ಹಾಗೂ ಕ್ರೀಡಾ ಸಚಿವಾಲಯದ ಸದಸ್ಯ ಕೆ.ಟಿ.ತಿಪ್ಪೇಸ್ವಾಮಿ ಅನ್ನುವವರು ಈ ಬಗ್ಗೆ ಸರ್ಕಾರದ ಗಮನ ಸೆಲೆಯುವ ಕೆಲಸ ಮಾಡಿದ್ದಾರೆ. ಪ್ರ್ರಾದೇಶಿಕ ಬೆಳೆಗಳ ರಕ್ಷಣೆಯು ಕೇವಲ ರೈತರ ಹಿತದೃಷ್ಟಿಯಿಂದ ಮಾತ್ರವಲ್ಲದೆ ಸುಸ್ಥಿರ ಪರಿಸರ ನಿರ್ವಹಣೆಯ ದೃಷ್ಟಿಯಿಂದಲಾದರೂ ಈ ಬೆಳೆಗೆ ಪುಷ್ಟಿ ನೀಡುವಂತೆ ಕೆ.ಟಿ.ತಿಪ್ಪೇಸ್ವಾಮಿ ಈಗಾಗಲೇ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಇದೆಲ್ಲಕ್ಕೂ ಮಿಗಿಲಾಗಿ ಕರ್ನಾಟಕದಲ್ಲಿ ಈ ಹಣ್ಣನ್ನು ಅತಿ ಹೆಚ್ಚಾಗಿ ರೈತರು ಬೆಳೆಯುತ್ತಿರುವುದರಿಂದಾಗಿ ರಾಜ್ಯ ಸರ್ಕಾರ ರೈತರ ಕಣ್ಣಿಗೆ ಮಂಕುಬೂದಿ ಎರಚುತ್ತಲೇ ಬರುತ್ತಿದೆ. ಉಪ ಚುನಾವಣೆಗಳ ಸಂದರ್ಭದಲ್ಲಿ ಕಾಡುಗೊಲ್ಲ ನಿಗಮ ಸ್ಥಾಪಿಸುವುದಾಗಿ ಭರವಸೆ ನೀಡಿದಂತೆ ಸರ್ಕಾರ ಈ ಹುಣಸೆಹಣ್ಣಿನ ನಿಗಮ ಮಂಡಳಿ ರಚಿಸುವಂತೆಯೂ ಭರವಸೆ ನೀಡಿತ್ತಾದರೂ ಸರ್ಕಾರ ಇದೀಗ ಈ ನಿಗಮ ಮಂಡಳಿಯ ನೆನಪನ್ನೇ ಮರೆತಿದೆ.
ಹುಣಸೆ ಬೆಳೆಯುವ ರೈತರ ಜೀವನಕ್ಕೊಂದು ನೆರವು ನೀಡಲು ಇರುವ ಒಂದೇ ಮಾರ್ಗ ಎಂದರೆ ಶಿರಾ, ಮಧುಗಿರಿ, ಕೊರಟಗೆರೆ, ಪಾವಗಡ, ಹಿರಿಯೂರು, ಕೋಲಾರ, ದೊಡ್ಡಬಳ್ಳಾಪುರ, ಚಿತ್ರದುರ್ಗ ಭಾಗದ ಬಯಲುಸೀಮೆಯ ಶಾಸಕರುಗಳೆಲ್ಲರೂ ಒಟ್ಟಾಗಿ ವಿಧಾನಸಭೆಯಲ್ಲಿ ಈ ಬಗ್ಗೆ ಇಡೀ ಸರ್ಕಾರದ ಗಮನ ಸೆಳೆಯುವ ಪ್ರಾಮಾಣಿಕತೆಯನ್ನು ಮೆರೆದಲ್ಲಿ ಮಾತ್ರ ಈ ಬೆಳೆಯ ರೈತರ ಸಂಕಷ್ಟ ನಿವಾರಣೆ ಸಾಧ್ಯವಿದೆ.
ಹುಣಸೆ ಬೆಳೆಯುವ ರೈತರು ಒಂದುಗೂಡಿ ನಿಗಮ ಮಂಡಳಿಯ ಸ್ಥಾಪನೆಗೆ, ಹಣ್ಣಿನ ಬೆಂಬಲ ಬೆಲೆಗೆ ಸರ್ಕಾರದ ಮೇಲೆ ಒತ್ತಡ ತರದೆ ಇದ್ದಲ್ಲಿ ಬಯಲು ಸೀಮೆಯ ಈ ಹಣ್ಣಿನ ಬೆಳೆಗಾರ ನಿರಂತರವಾಗಿ ಬಿಟ್ಟಿ ಕಾಯಕ ಮಾಡುತ್ತಲೇ ಇರಬೇಕಾಗುತ್ತದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ