ತುಮಕೂರು:
ಪಾವಗಡ ತಾಲ್ಲೂಕು ಪಳವಳ್ಳಿ ಕಟ್ಟೆ ಕೆರೆಯ ಬಳಿ ಶನಿವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಗಾಯಗೊಂಡವರಿಗೆ ಸರ್ಕಾರಿ ವೆಚ್ಚದಲ್ಲಿ ಉತ್ತಮ ಚಿಕಿತ್ಸೆ ನೀಡಲು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅರಗ ಜ್ಞಾನೇಂದ್ರ ಅವರು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಟಿ.ಎ. ವೀರಭದ್ರಯ್ಯ ಅವರಿಗೆ ಸೂಚನೆ ನೀಡಿದರು.
ಅಪಘಾತದಲ್ಲಿ ಗಾಯಗೊಂಡು ಜಿಲ್ಲಾಸ್ಪತ್ರೆಗೆ ದಾಖಲಾಗಿರುವ 19 ಮಂದಿಯ ಆರೋಗ್ಯ ವಿಚಾರಿಸಿ ಸಮಾಧಾನ ಹೇಳಿದ ನಂತರ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದ ಅವರು, ಚಾಲಕನ ಅಜಾಗರೂಕತೆಯಿಂದ ನಿಯಂತ್ರಣ ತಪ್ಪಿ ಸಂಭವಿಸಿದ ಬಸ್ ಅಪಘಾತದಲ್ಲಿ ಈವರೆಗೆ ಮರಣ ಹೊಂದಿದ 6 ಮಂದಿ ವಾರಸುದಾರರಿಗೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು ಮುಖ್ಯಮಂತ್ರಿಗಳು ಘೋಷಿಸಿದ್ದಾರೆ ಎಂದು ತಿಳಿಸಿದರು.
ತುಮಕೂರು ಖಾಸಗಿ ಬಸ್ ದುರಂತದ ಬಳಿಕ ರಾಜ್ಯ ಸರ್ಕಾರ ಅಲರ್ಟ್: 7 ‘KSRTC ಬಸ್’ಗಳು ಸಂಚಾರ ಆರಂಭ
ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಾದ ಗಾಯಾಳುಗಳ ಚಿಕಿತ್ಸಾ ವೆಚ್ಚವನ್ನೂ ಸಹ ಸರ್ಕಾರದಿಂದಲೇ ಭರಿಸಲಾಗುವುದು. ಆಸ್ಪತ್ರೆಗೆ ದಾಖಲಾದ ಗಾಯಾಳುಗಳಿಗೆ ಔಷಧಿಗಾಗಿ ಹೊರಗಡೆ ಚೀಟಿ ಬರೆದುಕೊಡದೆ ಜಿಲ್ಲಾಸ್ಪತ್ರೆಯಲ್ಲಿಯೇ ಒದಗಿಸಬೇಕು ಹಾಗೂ ಜಿಲ್ಲಾಸ್ಪತ್ರೆ ವತಿಯಿಂದಲೇ ಊಟೋಪಹಾರದ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.
ಇಂತಹ ಘಟನೆಗಳು ಮರುಕಳಿಸದಿರಲಿ
ಅಪಘಾತದಲ್ಲಿ ಮರಣ ಹೊಂದಿದವರ ಜೀವ ಮರಳಿ ತರಲಾಗುವುದಿಲ್ಲ. ಆದರೆ ಮತ್ತೊಮ್ಮೆ ಇಂತಹ ಘಟನೆಗಳು ಮುಂದೆಂದೂ ಮರುಕಳಿಸದಂತೆ ಸಾರಿಗೆ, ರಾಜ್ಯ ರಸ್ತೆ ಸಾರಿಗೆ ನಿಗಮ, ಪೊಲೀಸ್ ಇಲಾಖೆಗಳು ಕ್ರಮ ವಹಿಸಬೇಕು. ಜಿಲ್ಲೆಯಲ್ಲಿ ಖಾಸಗಿ ಸಾರಿಗೆಗಳಿಂದ ದೊಡ್ಡ ಲಾಭಿಯೇ ನಡೆಯುತ್ತಿದೆ ಎಂಬ ದೂರುಗಳು ಬಂದಿವೆ.
ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಶಾಲಾ-ಕಾಲೇಜು ವಿದ್ಯಾರ್ಥಿಗಳು/ನೌಕರರು ಕೆಲಸಕ್ಕೆ ಹೊರಡುವ ಸಮಯದಲ್ಲಿ ಪ್ರಯಾಣಿಕರ ಬೇಡಿಕೆಗನುಗುಣವಾಗಿ ಕೆಎಸ್ಆರ್ಟಿಸಿ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಬೇಕು. ಪ್ರಯಾಣಿಕರ ಬೇಡಿಕೆಗನುಗುಣವಾಗಿ ಸಾರಿಗೆ ವ್ಯವಸ್ಥೆ ಕಲ್ಪಿಸದ ಕೆಎಸ್ಆರ್ಟಿಸಿ ಡಿಪೋ ಮ್ಯಾನೇಜರ್ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರಲ್ಲದೆ ಪರವಾನಗಿಯಿಲ್ಲದ ಬಸ್/ವಾಹನ ಸಂಚಾರಕ್ಕೆ ಅವಕಾಶ ನೀಡಬಾರದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಆಸ್ಟ್ರೇಲಿಯಾದಿಂದ ಭಾರತಕ್ಕೆ ಮರಳಿದ 29 ಪುರಾತನ ವಸ್ತುಗಳನ್ನು ಪರಿಶೀಲಿಸಿದ ಪ್ರಧಾನಿ ನರೇಂದ್ರ ಮೋದಿ
ಅನುಭವಿ ಮತ್ತು ಪರವಾನಗಿ ಹೊಂದಿದ ಚಾಲಕರಿಗೆ ಹಾಗೂ ಸೂಕ್ತ ದಾಖಲೆಗಳನ್ನು ಹೊಂದಿದ ವಾಹನಗಳ ಸಂಚಾರಕ್ಕೆ ಅನುಮತಿಸಬೇಕು. ಪೊಲೀಸ್ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಕಡ್ಡಾಯವಾಗಿ ಚಾಲನಾ ಪರವಾನಗಿ ಸೇರಿದಂತೆ ವಾಹನ ದಾಖಲೆಗಳ ತಪಾಸಣೆ ಮಾಡಬೇಕೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ರಾಜು ಹಾಗೂ ಮಧುಗಿರಿ ಉಪ ಪ್ರಾದೇಶಿಕ ಸಾರಿಗೆ ಅಧಿಕಾರಿ ದೇವಿಕ ಅವರಿಗೆ ಸೂಚಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ