ಬೆಂಗಳೂರು:
ಬೆಂಗಳೂರು, ಏ. 22:ಕರ್ನಾಟಕದ ಹೆಮ್ಮೆ, ಐತಿಹಾಸಿಕ ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ 2021 ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದ್ದು, ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ನಾರಾಯಣಗೌಡ ಅವರು ತಿಳಿಸಿದರು.
ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸುದ್ದಿಗೋಷ್ಟಿ ನಡೆಸಿದ ಸಚಿವ ಡಾ.ನಾರಾಯಣಗೌಡ ಅವರು, ಖೇಲೋ ಇಂಡಿಯಾ ಯೂನಿವರ್ಸಿಟಿ ಗೇಮ್ಸ್ ಕ್ರೀಡಾಕೂಟದ ಸಿದ್ದತೆ ಕುರಿತು ಮಾಹಿತಿ ನೀಡಿದರು.
ಭಾನುವಾರ ಸಂಜೆ ಕಂಠೀರವ ಕ್ರೀಡಾಂಗಣದಲ್ಲಿ
ಎರಡನೇ ಆವೃತ್ತಿಯ ಖೇಲೋ ಇಂಡಿಯಾ ವಿವಿ ಗೇಮ್ಸ್‌ಗೆ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುರವರು, ಕೇಂದ್ರ ಸಚಿವ ಅನುರಾಗ್ ಠಾಕೂರ್, ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ರವರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರು, ಸಭಾಪತಿ ಬಸವರಾಜ ಹೊರಟ್ಟಿಯವರು ಸೇರಿದಂತೆ ಹಲವು ಗಣ್ಯರು ಚಾಲನೆ ನೀಡಲಿದ್ದಾರೆ.
ಮೇ 3ರಂದು ಜೈನ್ ಗ್ಲೋಬಲ್ ಕ್ಯಾಂಪಸ್‌ನಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾರವರು ಹಾಗೂ ಭಾರತ ಸರಕಾರದ ಸಂಸದೀಯ ವ್ಯವಹಾರಗಳ ಪ್ರಹ್ಲಾದ್ ಜೋಶಿ ಹಾಗೂ ಇತರ ಗಣ್ಯರು ಪಾಲ್ಗೊಳ್ಳುವ ಸಾಧ್ಯತೆ ಇದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಮಾಹಿತಿ ನೀಡಿದರು.
ಪ್ರಧಾನಿ ಮೋದಿ ಭೇಟಿಗೆ ಕ್ಷಣಗಣನೆ; ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರ ದಾಳಿ, ಓರ್ವ ಯೋಧ ಹುತಾತ್ಮ, ,4 ಮಂದಿಗೆ ಗಾಯ
ಕೇಂದ್ರ ಹಾಗೂ ರಾಜ್ಯ ಸರ್ಕಾರ, ಭಾರತೀಯ ಕ್ರೀಡಾ ಪ್ರಾಧಿಕಾರ(SAI), ಜೈನ್ ವಿಶ್ವವಿದ್ಯಾನಿಲಯಗಳ ಸಹಭಾಗಿತ್ವದಲ್ಲಿ ಕ್ರೀಡಾಕೂಟ ನಡೆಯುತ್ತಿದ್ದು, ಎಲ್ಲಾ ತಯಾರಿ ಮಾಡಲಾಗಿದ್ದು, ಕ್ರೀಡಾ ಕೇಂದ್ರಗಳು, ಮೈದಾನಗಳು ಸಜ್ಜಾಗಿವೆ.
ಕ್ರೀಡಾಕೂಟದಲ್ಲಿ ದೇಶದಾದ್ಯಂತ 200 ವಿಶ್ವವಿದ್ಯಾನಿಲಯಗಳಿಂದ ಸುಮಾರು 4,500 ಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ನಮ್ಮ ಕರ್ನಾಟಕದಿಂದ ಒಟ್ಟು 12 ವಿವಿಗಳಿಂದ 291 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ಅಥ್ಲೆಟಿಕ್ಸ್, ಈಜು, ಕರಾಟೆ, ಯೋಗ, ಮಲ್ಲಕಂಬ ಕ್ರೀಡೆಗಳಲ್ಲಿ ಹೆಚ್ಚಿನ ಪದಕಗಳನ್ನು ನಿರೀಕ್ಷಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಈಜುಪಟು ಶ್ರೀಹರಿ ನಟರಾಜನ್, ಒಲಂಪಿಯನ್ ಶೂಟರ್‌ಗಳಾದ ದಿವ್ಯಾನೇಶ್ ಸಿಂಗ್, ಮನು ಬಾಕರ್, ಒಲಂಪಿಯನ್ ಅಥ್ಲೆಟಿಕ್ಸ್ ದೂತಿ ಚಾಂದ್ ಸೇರಿದಂತೆ ಹಲವು ಸ್ಟಾರ್ ಕ್ರೀಡಾಪಟುಗಳು ಪಾಲ್ಗೊಳ್ಳುತ್ತಿರುವ ಸಂತಸದ ವಿಚಾರ ಎಂದು ಸಚಿವರು ಹೇಳಿದರು.
ಕಾಡುತ್ತಿದೆ ಕಲ್ಲಿದ್ದಲು ಕೊರತೆ, ವಿದ್ಯುತ್ ಅಭಾವ ಭೀತಿ; 81 ಸ್ಥಾವರಗಳಲ್ಲಿ ನಿಶ್ಚಿತ ದಾಸ್ತಾನಿಲ್ಲ
ಉದ್ಘಾಟನಾ ಸಮಾರಂಭದಲ್ಲಿ ಕರ್ನಾಟಕದ ಮತ್ತು ಭಾರತದ ಶ್ರೀಮಂತ ಸಾಂಸ್ಕೃತಿಕ ವೈಭವವನ್ನು ಪ್ರತಿನಿಧಿಸುವ ʼಸಾಂಸ್ಕೃತಿಕ ಕಾರ್ಯಕ್ರಮʼಗಳನ್ನು ಪ್ರದರ್ಶಿಸಲಾಗುವುದು. ಲೇಸರ್ ಲೈಟ್ ಪ್ರದರ್ಶನ, ಚಂದನ್ ಶೆಟ್ಟಿ ಮತ್ತು ತಂಡದವರಿಂದ ನೃತ್ಯ ಪ್ರದರ್ಶನ, ಕರ್ನಾಟಕದ ಸಾಂಸ್ಕೃತಿಕ,
ಜಾನಪದ ಕಲಾ ಪ್ರದರ್ಶನ & ಭಾರತದ ವಿಭಿನ್ನ ಡೊಳ್ಳು ವಾದನ, ಮಲ್ಲಕಂಬ ಪ್ರದರ್ಶನ, ವಂದೇ ಮಾತರಂ ಗೀತೆಯೊಂದಿಗೆ ʼಸ್ವಾತಂತ್ರ್ಯ ಅಮೃತ ಮಹೋತ್ಸವʼದ ನೃತ್ಯ ಪ್ರದರ್ಶನ, ಕಿಂಗ್ಸ್ ಯುನೈಟೆಡ್ ನೃತ್ಯ ತಂಡದವರಿಂದ ʼಯುವ ಶಕ್ತಿಯ ಸಂದೇಶʼ ಸಾರುವ “ಆಕ್ರೋಬ್ಯಾಟಿಕ್” ಪ್ರದರ್ಶನ ಇರಲಿದೆ ಎಂದ ಸಚಿವ ಡಾ.ನಾರಾಯಣಗೌಡ ಮಾಹಿತಿ ನೀಡಿದರು.ಕ್ರೀಡಾಕೂಟದ ಶುಭ ಸ್ಮರಣೆಯಲ್ಲಿ ಭಾರತೀಯ ಅಂಚೆ ಇಲಾಖೆಯ ವತಿಯಿಂದ ವಿಶೇಷವಾದ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಗುತ್ತಿದೆ.
2020ರಲ್ಲಿ ಒಡಿಶಾದಲ್ಲಿ ನಡೆದ ಕ್ರೀಡಾಕೂಟದಲ್ಲಿ 17 ಕ್ರೀಡೆಗಳನ್ನು ಅಳವಡಿಸಲಾಗಿತ್ತು. ಈ ಬಾರಿ ದೇಶೀಯ ಕ್ರೀಡೆಗಳಾದ ಮಲ್ಲಕಂಬ ಮತ್ತು ಯೋಗಾಸನ ಸೇರಿದಂತೆ ಒಟ್ಟು 20 ಕ್ರೀಡೆಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯಲಿವೆ. ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳು, ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಸುಮಾರು 8 ಸಾವಿರ ಜನರಿಗೆ ವಸತಿ ವ್ಯವಸ್ಥೆ, ಊಟದ ವ್ಯವಸ್ಥೆ ಮಾಡಲಾಗಿದೆ.
ಜೈನ್ ವಿವಿ, ಶ್ರೀ ರವಿಶಂಕರ್ ಗುರೂಜಿಯವರ ಆರ್ಟ್ ಆಫ್ ಲಿವಿಂಗ್ ಹಾಗೂ ನಗರದ ಕೆಲ ಹೋಟೆಲ್‌ಗಳಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ಗಳಲ್ಲಿ 2000, ಜೈನ್ ವಿವಿ ಕ್ಯಾಂಪಸ್ 2800, ಆರ್ಟ್ ಲಿವಿಂಗ್ ಸೆಂಟರ್ ನಲ್ಲಿವ1500 ರೂಂಗಳು ಬುಕ್ ಮಾಡಲಾಗಿದೆ. ಕ್ರೀಡಾ ಕೇಂದ್ರಗಳಿಗೆ ಪ್ರಯಾಣಿಸಲು 2800 ಕಾರುಗಳು, ಬಿಎಂಟಿಸಿ ವತಿಯಿಂದ 110 ವೋಲ್ವೊ, 50 ಎಲೆಕ್ಟ್ರಿಕ್ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಹೇಳಿದರು.
ಕರ್ನಾಟಕದಲ್ಲಿ ಇನ್ನೂ 3 ದಿನ ಮಳೆಯ ಆರ್ಭಟ; ಉತ್ತರ ಒಳನಾಡಿನಲ್ಲಿ ಹಳದಿ ಅಲರ್ಟ್ ಘೋಷಣೆ
ಕೋರೋನಾ ಕಡಿಮೆ ಆಗಿದ್ದು, ದೂರ ಆಗಿಲ್ಲ. ಆ ನಿಟ್ಟಿನಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಪ್ರತಿ ಕ್ರೀಡಾಪಟು ಎರಡು ಡೋಸ್ ಕೋವಿಡ್ ಲಸಿಕೆ ಪಡೆದಿರಬೇಕು. ಒಂದು ವೇಳೆ ಯಾವುದೇ ಕ್ರೀಡಾಪಟು, ಅಧಿಕಾರಿ, ಸಹಾಯಕ ಸಿಬ್ಬಂದಿಗೆ ಸೋಂಕು ದೃಢಪಟ್ಟರೆ ಅವರಿಗೆ ಕ್ಯಾಂಪಸ್ ಒಳಗಡೆಯೇ ಪ್ರತ್ಯೇಕ ಐಸೋಲೇಸನ್ ವ್ಯವಸ್ಥೆ ಮಾಡಲಾಗಿದೆ. ನಿರಂತರವಾಗಿ ಕೋವಿಡ್ ಟೆಸ್ಟ್ ನಡೆಸಲು ವ್ಯವಸ್ಥೆ ಮಾಡಲಾಗಿದೆ. ಸದಾ ವೈದ್ಯಕೀಯ ತಂಡವೂ ಕಾರ್ಯನಿರ್ವಹಿಸಲಿದೆ. ಮುಂಜಾಗ್ರತಾ ಕ್ರಮವಾಗಿ ಎಲ್ಲಾ ಕ್ರೀಡಾಪಟುಗಳಿಗೂ ವೈದ್ಯಕೀಯ ವಿಮೆ ಮಾಡಿಸಲಾಗಿದೆ ಎಂದು ಸಚಿವರು ತಿಳಿಸಿದರು.
PSI ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ: ಮತ್ತಿಬ್ಬರ ಬಂಧನ, ಬಂಧಿತರ ಸಂಖ್ಯೆ 12ಕ್ಕೇರಿಕೆ
ವಿಜೇತ ಕ್ರೀಡಾಪಟುಗಳಿಗೆ ಪದಕ ಪ್ರದಾನ ಮಾಡುವಾಗ ರಾಜ್ಯದ ಸಚಿವರು ಮತ್ತು ಇತರ ಗಣ್ಯರನ್ನು ಆಹ್ವಾನಿಸಿ ಪ್ರಶಸ್ತಿ ನೀಡಲಾಗುವುದು. 261 ಚಿನ್ನದ ಪದಕಗಳು, 261 ಬೆಳ್ಳಿಯ ಪದಕಗಳು 365 ಕಂಚಿನ ಪದಕಗಳನ್ನು ಕ್ರೀಡಾ ಸಾಧಕರಿಗೆ ಪುರಸ್ಕರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಈ ಎಲ್ಲಾ ಕ್ರೀಡಾಂಗಣಗಳಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ಅನುಕೂಲವಾಗಲು ಮಾಧ್ಯಮ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಕ್ರೀಡಾಂಗಣದಲ್ಲಿಯೂ ಉಚಿತ ವೈಫೈ ಸೌಲಭ್ಯವಿರುತ್ತದೆ ಎಂದು ಸಚಿವ ಡಾ.ನಾರಾಯಣಗೌಡ ಅವರು ಮಾಹಿತಿ ನೀಡಿದರು.
ಖೇಲೋ ಇಂಡಿಯಾಗೆ ಬರುವವರಿಗೆ ಕರ್ನಾಟ ಪ್ರವಾಸೋದ್ಯಮ ಇಲಾಖೆಯಿಂದ ರಾಜ್ಯದ ಪ್ರೇಕ್ಷಣೀಯ ಸ್ಥಳಗಳ ಪ್ರವಾಸದ ಪ್ಯಾಕೇಜ್ ಒದಗಿಸಲಾಗಿದೆ. ಸ್ತ್ರೀ ಶಕ್ತಿಗೆ ಹೆಚ್ಚಿನ ಉತ್ತೇಜನ ನೀಡುವ ಉದ್ದೇಶದಿಂದ ಈ ಬಾರಿಯ ಕ್ರೀಡಾಕೂಟದಲ್ಲಿ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಗೋವಿಂದರಾಜು, ಜೈನ್ ವಿವಿ ಚೆನ್ನರಾಜ್, ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ್, ಕ್ರೀಡಾ ಇಲಾಖೆ ಆಯುಕ್ತ ಗೋಪಾಲಕೃಷ್ಣ, ಸಚಿವರ ಆಪ್ತ ಕಾರ್ಯದರ್ಶಿ ಪ್ರಭಾಕರ್ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
