ಕೇಂದ್ರ ಸರ್ಕಾರ ಯಾವುದೇ ಕೇಸ್ ಹಾಕಿ ಕಿರುಕುಳ ಕೊಟ್ಟರೂ ಕಾಂಗ್ರೆಸ್ ಹೋರಾಟ ಮುಂದುವರಿಯುತ್ತದೆ: ಡಿ.ಕೆ. ಶಿವಕುಮಾರ್

ಬೆಂಗಳೂರು: ಮುಖ್ಯಮಂತ್ರಿಗಳು ಸೇರಿದಂತೆ ಬಿಜೆಪಿ ರಾಜ್ಯ ಹಾಗೂ ಕೇಂದ್ರ ಸಚಿವರು ವಿಧಾನಸೌಧದ ಒಳಗೆ ಮತ್ತು ಹೊರಗೆ ಯಾತ್ರೆ, ಮೆರವಣಿಗೆಗಳು ಮಾಡಿ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದರೂ ಯಾವುದೇ ಪ್ರಕರಣ ದಾಖಲಾಗಿಲ್ಲ. ಆದರೆ ನಮ್ಮ ಮೇಲೆ ಮಾತ್ರ ಪ್ರಕರಣ ದಾಖಲಿಸಿ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ. ಸರ್ಕಾರ ಏನೇ ಮಾಡಿದರೂ ನಾವು ನಮ್ಮ ಜನಪರ ಹೋರಾಟ ಮುಂದುವರಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಮೇಕೆದಾಟು ಪಾದಯಾತ್ರೆ, ಕೊರೊನಾ ಅಕ್ರಮ, ಕೃಷಿ ಕರಾಳ ಕಾಯ್ದೆ ವಿರುದ್ಧ ನಡೆಸಿದ್ದ ಪ್ರತಿಭಟನೆ ಸಂಬಂಧ ದಾಖಲಾಗಿರುವ ಪ್ರಕರಣಗಳ ವಿಚಾರಣೆಗೆ ಸಿಟಿ ಸಿವಿಲ್ ಕೋರ್ಟ್ ಗೆ ಬುಧವಾರ ಹಾಜರಾದ ಬಳಿಕ ಮಾಧ್ಯಮಗಳ ಜತೆ ಮಾತನಾಡಿದರು,

ಸ್ವಾತಂತ್ರ್ಯಕ್ಕೆ ಸ್ಪೂರ್ತಿ ನೀಡಿದೆ ಪತ್ರಿಕೆಗೆ ಅವಮಾನ: ರಾಷ್ಟ್ರ ಮಟ್ಟದಲ್ಲಿ ನಮ್ಮ ನಾಯಕರು ಯಾವುದೇ ತಪ್ಪು ಮಾಡದಿದ್ದರೂ ಸುಳ್ಳು ಕೇಸ್ ದಾಖಲಿಸಲಾಗಿದೆ. ನೆಹರೂ, ತಿಲಕರು ಹಾಗೂ ಪಟೇಲರು ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಜನರಲ್ಲಿ ಅರಿವು ಮೂಡಿಸಲು ಆರಂಭಿಸಿದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯನ್ನು ಇಲ್ಲಿಯವರೆಗೂ ಉಳಿಸಿಕೊಂಡು ಬರಲಾಗಿದೆ. ಕಾಂಗ್ರೆಸ್ ನಾಯಕರೆಲ್ಲರೂ ಇದರ ನಿರ್ವಹಣೆಗೆ ಹಣ ನೀಡಿದ್ದಾರೆ. ಈ ಸಂಸ್ಥೆ ಟ್ರಸ್ಟ್ ಮೂಲಕ ನಡೆಯುತ್ತಿದೆಯೇ ಹೊರತು ಇದನ್ನು ಯಾವುದೇ ನಾಯಕರು ತಮ್ಮ ಆಸ್ತಿ ಎಂದು ಹೇಳಿಕೊಂಡಿಲ್ಲ.

ನಾನು ಕೆಪಿಸಿಸಿ ಅಧ್ಯಕ್ಷನಾಗಿದ್ದ ಮಾತ್ರಕ್ಕೆ ಅದು ನನ್ನ ಆಸ್ತಿ ಎಂದು ಘೋಷಣೆ ಮಾಡಿಕೊಳ್ಳಲು ಸಾಧ್ಯವೇ? ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾದವರು ಆ ಸಂಸ್ಥೆಯ ಮುಖ್ಯಸ್ಥರಾಗಿರುತ್ತಾರೆ. ನಮ್ಮ ನಾಯಕರ ಚುನಾವಣಾ ಅಫಿಡವಿಟ್ ಗಳನ್ನು ಪರಿಶೀಲಿಸಿ. ಯಂಗ್ ಇಂಡಿಯಾ ಕಂಪನಿಯಾಗಲಿ, ಎಜಿಎಲ್ ಕಂಪನಿಗಳ ಮಾಲೀಕರು ಎಂದು ಯಾರು ಹೇಳಿಕೊಂಡಿಲ್ಲ.

ಪ್ರತಿಭಟನೆ ಮಾಡಲು ಸಂವಿಧಾನದಲ್ಲಿ ಅವಕಾಶವಿದೆ : ಕಾಂಗ್ರೆಸ್ ಕಚೇರಿಗೆ ಹೋಗುವ ನಾಯಕರನ್ನು ಬಂಧಿಸಲಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುವ ಹಕ್ಕನ್ನು ಸಂವಿಧಾನ ನೀಡಿದೆ. ಈ ಹಕ್ಕಿನ ಆಧಾರದ ಮೇಲೆ ಪ್ರತಿಭಟನೆ ಮಾಡಲು ಅವಕಾಶ ನೀಡುತ್ತಿಲ್ಲ. ಇದನ್ನು ತುರ್ತು ಪರಿಸ್ಥಿತಿ ಎನ್ನುವ ಬದಲು ಇದಕ್ಕೆ ಹೊಸ ದರ್ಬಾರ್ ಎಂಬ ಹೆಸರನ್ನು ಇಡಬೇಕಿದೆ.

ತ್ಯಾಗ ಹೋರಾಟಕ್ಕೂ ಸಿದ್ಧ : ಕಾಂಗ್ರೆಸ್ ನಾಯಕರು ತಮ್ಮ ಕಳ್ಳತನ ಮುಚ್ಚಿಕೊಳ್ಳಲು ಹೋರಾಟ ಮಾಡುತ್ತಿದ್ದಾರೆ ಎಂಬ ಬಿಜೆಪಿ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ, ನಾವು ಎಲ್ಲಿ ಕಳ್ಳತನ ಮಾಡಿದ್ದೇವೆ? ನಾವೇನು ಲಂಚಕ್ಕೆ ಹೋಗಿದ್ದೇವಾ? ಅಥವಾ ಮಂಚಕ್ಕೆ ಹೋಗಿದ್ದೇವಾ? ಈ ಸರ್ಕಾರ ಹಾಗೂ ಸಚಿವರು 40% ಕಮಿಷನ್ ಪಡೆಯುತ್ತಿದ್ದಾರೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದಿಲ್ಲವೇ? ಇನ್ನು ಕಮಿಷನ್ ಗೆ ಕಿರುಕುಳ ನೀಡಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಸಚಿವರು ರಾಜೀನಾಮೆ ನೀಡಿಲ್ಲವೇ? ಪೆÇಲೀಸ್ ನೇಮಕಾತಿಯಿಂದ ಎಲ್ಲ ನೇಮಕಾತಿಯಲ್ಲಿ ಅಕ್ರಮ ನಡೆದಿಲ್ಲವೇ? ಈಗ ಹೊಸದಾಗಿ 10 ಲಕ್ಷ ಉದ್ಯೋಗಕ್ಕೆ ನೇಮಕ ಘೋಷಣೆ ಮಾಡಿದ್ದಾರೆ. ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಹೇಳಿದಂತೆ 8 ವರ್ಷದಲ್ಲಿ 16 ಕೋಟಿ ಉದ್ಯೋಗ ನೀಡದೇ ಈಗ ಕೇವಲ 10 ಲಕ್ಷ ಉದ್ಯೋಗದ ಬಗ್ಗೆ ಮಾತನಾಡುತ್ತಿರುವುದೇಕೆ ಇದೆಲ್ಲವೂ ಜನರನ್ನು ತಪ್ಪು ದಾರಿಗೆ ಎಳೆಯವ ಪ್ರಯತ್ನ. ಬಿಜೆಪಿಯ ಯಾವನು ಬೇಕಾದರೂ ಏನಾದರೂ ಮಾತನಾಡಲಿ. ನಮ್ಮ ನಿಲುವು, ಬಿಜೆಪಿಯ ದ್ವೇಷದ ರಾಜಕಾರಣ, ನಮ್ಮ ನಾಯಕರನ್ನು ಮುಗಿಸಲು ಪ್ರಯತ್ನಿಸುತ್ತಿರುವುದು ಜನರಿಗೆ ಅರ್ಥವಾಗುತ್ತಿದೆ. ಕಾಂಗ್ರೆಸಿಗರು ದೇಶದ ಸ್ವಾತಂತ್ರ್ಯಕ್ಕೆ ಪ್ರಾಣವನ್ನೇ ನೀಡಿದ್ದು, ಎಲ್ಲ ರೀತಿಯ ತ್ಯಾಗ ಹೋರಾಟಕ್ಕೂ ಸಿದ್ಧವಿದ್ದೇವೆ ಎಂದು ಉತ್ತರಿಸಿದರು

Recent Articles

spot_img

Related Stories

Share via
Copy link