ರಸ್ತೆ ಪಕ್ಕದ ಮರಗಳನ್ನು ರಕ್ಷಿಸಲು ಮುಂದಾದ ಲೋಕೋಪಯೋಗಿ ಇಲಾಖೆ
ಗುಡಿಬಂಡೆ ಭರತ್ ಜಿ.ಎಸ್
ಬೆಂಗಳೂರು : ಪರಿಸರವನ್ನು ಉಳಿಸಿ ಬೆಳೆಸುವುದು ಕೇವಲ ಅರಣ್ಯ ಇಲಾಖೆ ಅಥವಾ ಪರಿಸರ ಪ್ರಮೇಮಿಗಳ ಜವಾಬ್ದಾರಿ ಮಾತ್ರವಲ್ಲದೆ. ರಸ್ತೆಯ ಪಕ್ಕದಲ್ಲಿರು ಮರಗಳನ್ನು ನಾಶ ಮಾಡದೇ ಅವುಗಳನ್ನು ಸುರಕ್ಷಿತವಾಗಿ ಮತ್ತೊಂದು ಜಾಗಕ್ಕೆ ಸ್ಥಳಾಂತರ ಮಾಡುವ ಮಹಾ ಕಾರ್ಯಕ್ರಮಕ್ಕೆ ಸರ್ಕಾರ ಕೈ ಹಾಕಿರುವುದು ಪರಿಸರ ಪ್ರೇಮಿಗಳಿಗೆ ಸಂತೋಷ ನೀಡಿದೆ.
ನಗರಗಳನ್ನು ಅಭುವೃದ್ಧಿ ಮಾಡಲು ರಸ್ತೆಗಳನ್ನು, ಹೆದ್ದಾರಿಗಳನ್ನು ಅಗಲೀಕರಣ ಮಾಡುವಾಗ ಅಕ್ಕಪಕ್ಕದಲ್ಲಿರುವ ಮರಗಳನ್ನು ಕಡಿದು ಪರಿಸರನಾಶ ಮಾಡುವುದರ ಬದಲಾಗಿ ಅಂತಹ ಮರಗಳನ್ನು ಸ್ಥಳಾಂತರಗೊಳಿಸಿ ಬೇರೆಡೆ ನೆಟ್ಟು ಹಸಿರು ಸಂರಕ್ಷಿಸುವ ಅಪರೂಪದ ಯೋಜನೆಯನ್ನು ಲೋಕೋಪಯೋಗಿ ಇಲಾಖೆ ಕೈಗೊಳ್ಳಲು ಮುಂದಾಗಿದೆ.
ಮರ ಕಡಿಯಬೇಡಿ ಅದನ್ನು ಸ್ಥಳಾಂತರ ಮಾಡಿ :
ಮರಗಳನ್ನು ಕಡಿಯಬೇಡಿ ಎಂಬ ಸರ್ಕಾರದ ಹೊಸ ನಿಲುವಿಗೆ ಎಲ್ಲರೂ ಫಿದಾ ಆಗಿದ್ದಾರೆ. ಅಭಿವೃದ್ಧಿಗಾಗಿ ರಸ್ತೆ ಮತ್ತು ಹೆದ್ದಾರಿ ವಿಸ್ತರಣೆ ಕಾಮಗಾರಿಗಳನ್ನು ರಾಜ್ಯದಲ್ಲಿ ವ್ಯಾಪಕವಾಗಿ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮರಗಳನ್ನು ಕಡಿಯುವ ಕಾರ್ಯಕ್ಕೆ ಪರ್ಯಾಯವಾಗಿ ಈ ಬದಲೀ ವ್ಯವಸ್ಥೆಗೆ ಆದ್ಯತೆ ನೀಡಲು ಮತ್ತು ಬೆಳೆದುನಿಂತ ಗಿಡಮರಗಳನ್ನು ಬೇರೆಡೆಗೆ ನೆಟ್ಟು ಬೆಳೆಸುವ ವೈಜ್ಞಾನಿಕ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು ಈಗಾಗಲೇ ಲೋಕೋಪಯೋಗಿ ಇಲಾಖೆ ಮತ್ತು ಇದರ ಅಧೀನ ಸಂಸ್ಥೆಯಾದ ಕರ್ನಾಟಕ ರಸ್ತೆ ಅಭಿವೃದ್ಧಿ ಸಂಸ್ಥೆಗೆ ಸೂಚಿಸಲಾಗಿತ್ತು, ಅದರಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ಸಂಸ್ಥೆಯಿಂದ ಬೆಂಗಳೂರು ಸುತ್ತಮುತ್ತ ಈಗಾಗಲೇ ಸುಮಾರು ೧,೫೦೦ಕ್ಕೂ ಹೆಚ್ಚು ಬೆಳೆದು ನಿಂತ ಗಿಡ ಮರಗಳನ್ನು ಬೇರೆಡೆ ಶಿಫ್ಟ್ ಮಾಡಿ ನೆಡಲಾಗಿದೆ.
ಹಂತಹಂತವಾಗಿ ರಾಜ್ಯಾದ್ಯಂತ ಜಾರಿ :
ಈ ಯೋಜನೆಯನ್ನು ಹಂತ ಹಂತವಾಗಿ ರಾಜ್ಯಾದ್ಯಂತ ವ್ಯವಸ್ಥಿತವಾಗಿ ಜಾರಿ ಮಾಡಬೇಕು ಹಾಗೂ ಎಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತದೆ ಅಂತಹ ಸ್ಥಳಗಳಲ್ಲಿರುವ ಮರಗಳನ್ನು ಬೇರೆ ಸುರಕ್ಷಿತ ಸ್ಥಳಗಳಿಗೆ ರವಾನಿಸಿ ಹಸರೀಕರಣವನ್ನು ಉಳಿಸಲು ಪ್ರಯತ್ನ ಮಡಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
1500 ಕ್ಕೂ ಹೆಚ್ಚು ಮರಗಳು ಸ್ಥಳಾಂತರ :
ರಾಷ್ಟ್ರೀಯ ಹೆದ್ದಾರಿ-೪ ರಲ್ಲಿ ಬೂದಿಗೆರೆ ಕ್ರಾಸ್, ಗೊಲ್ಲಹಳ್ಳಿ ಮೂಲಕ ನೆಲಮಂಗಲದಿಂದ ಮಧುರೈಗೆ ತೆರಳುವ ಹೆದ್ದಾರಿ, ರಾಜಾನುಕುಂಟೆ ಮೂಲಕ ದೇವನಹಳ್ಳಿಯಿಂದ ಮಧುರೈಗೆ ತೆರಳುವ ಹೆದ್ದಾರಿ, ಹಾರೋಹಳ್ಳಿ ಮೂಲಕ ಬಿಡದಿಯಿಂದ ಜಿಗಣಿಗೆ ತೆರಳುವ ಹೆದ್ದಾರಿ, ಜಿಗಣಿ ಮೂಲಕ ಬನ್ನೇರುಘಟ್ಟದಿಂದ ಆನೇಕಲ್ಲಿಗೆ ತೆರಳುವ ಹೆದ್ದಾರಿ, ಅತ್ತಿಬೆಲೆ ಮೂಲಕ ಆನೇಕಲ್ಲಿನಿಂದ ಕಾಟನಲ್ಲೂರ್ ಗೇಟ್ (ಎನ್.ಹೆಚ್.-೪), ಹೀಗೆ ಒಟ್ಟು ೧೫೫ ಕಿ.ಮೀ ಉದ್ದದ ರಸ್ತೆ ಅಗಲೀಕರಣ ಯೋಜನೆಯಲ್ಲಿ ಮರಗಳ ಪುನಶ್ಚೇತನ ಕಾರ್ಯವನ್ನು ಮಾಡಲಾಗುತ್ತಿದೆ. ಮುಖ್ಯವಾಗಿ ಹೊಂಗೆ, ಗುಲ್ ಮೊಹರ್, ಸಿಸ್ಸೋ, ಅರಳಿ, ಬೇವು, ಬಸರಿ, ಅಕೇಷಿಯಾ, ನೀಲಗಿರಿ ಮುಂತಾದ ಮರಗಳನ್ನು ಸ್ಥಳಾಂತರಿಸಿ ಪೋಷಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ರಸ್ತೆ, ಹೆದ್ದಾರಿಗಳನ್ನು ನಿರ್ಮಿಸುವಾಗ, ಅಗಲೀಕರಣಗೊಳಿಸುವಾಗ ಅಕ್ಕಪಕ್ಕದಲ್ಲಿ ಅಡಚಣೆಯಾಗುತ್ತಿದ್ದ ಮರಗಳನ್ನು ಕಡಿದು ನಾಶಪಡಿಸುವ ಬದಲಾಗಿ, ಅಂತಹ ಮರಗಳನ್ನು ಸ್ಥಳಾಂತರಿಸಿ, ಸಂರಕ್ಷಿಸುವ ಗುರುತರ ಜವಾಬ್ದಾರಿಯನ್ನು ಲೋಕೋಪಯೋಗಿ ಇಲಾಖೆಯ, ರಸ್ತೆ ಅಭಿವೃದ್ಧಿ ಸಂಸ್ಥೆ ಕೈಗೊಂಡಿದೆ. ಬೆಳೆದು ನಿಂತ ಮರಗಳನ್ನು ವೈಜ್ಞಾನಿಕ ಪದ್ದತಿ ಪ್ರಕಾರ ಸ್ಥಳಾಂತರಿಸುತ್ತಿದ್ದು, ಈಗಾಗಲೇ 1500ಕ್ಕೂ ಹೆಚ್ಚು ಮರಗಳನ್ನು ಸ್ಥಳಾಂತರಿಸಿ, ಬೇರೆಡೆ ನೆಡಲಾಗಿದೆ. ಇತರೆಡೆಗಳಲ್ಲಿ ಯೂ ಈ ಪ್ರಯತ್ನ ಮುಂದುವರಿಯಲಿದೆ. ಪರಿಸರ ಸಮತೋಲನ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಇದೊಂದು ಮಹತ್ವದ ಹೆಜ್ಜೆಯಾಗಿದೆ.
-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.
ರಸ್ತೆ ಮತ್ತು ಹೆದ್ದಾರಿಗಳ ವಿಸ್ತರಣೆ ಸಂದರ್ಭದಲ್ಲಿ ಮರಗಳನ್ನು ಕಡಿಯುವುದರ ಬದಲಾಗಿ ಅವುಗಳನ್ನು ಸಂರಕ್ಷಿಸಿ ಪುನಶ್ಚೇತನಗೊಳಿಸಲು ಸೂಕ್ತ ಸಲಹೆ ನೀಡಲು ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ತಜ್ಞರ ಸಮಿತಿ ರಚಿಸಲಾಗಿತ್ತು. ಈ ಸಮಿತಿಯು ನೀಡಿದ ಸಲಹೆಯಂತೆ ಒಟ್ಟು ೬ ರಸ್ತೆ ಮತ್ತು ಹೆದ್ದಾರಿ ಅಗಲೀಕರಣ ಯೋಜನೆಗಳಲ್ಲಿ ೨೧೦೦ ಮರಗಳನ್ನು ಗುರುತಿಸಿ ಬೇರೆಡೆಗೆ ಸ್ಥಳಾಂತರಿಸಿ, ನೆಟ್ಟು ಪೋಷಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಇವುಗಳಲ್ಲಿ ಈಗಾಗಲೇ ೧,೫೦೦ ಕ್ಕೂ ಹೆಚ್ಚು ಮರಗಳನ್ನು ಕಿತ್ತು ಬೇರೆಡೆ ನೆಡುವ ಮೂಲಕ ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಮಾದರಿ ಪ್ರಯತ್ನ ನಡೆಸಲಾಗಿದೆ. ಉಳಿದ ಮರಗಳನ್ನೂ ಸ್ಥಳಾಂತರಿಸಿ ಪೋಷಿಸುವ ಕೆಲಸ ನಡೆಯುತ್ತಿದೆ.
– ಸಿ.ಸಿ.ಪಾಟೀಲರು. ಸಚಿವರು ಲೋಕೋಪಯೋಗಿ ಇಲಾಖೆ.
ಹೆದ್ದಾರಿ ಪಕ್ಕದಲ್ಲಿರುವ ಮರಗಳನ್ನು ರಕ್ಷಿಸಿ ಸ್ಥಳಾಂತರಿಸುತ್ತಿರುವ ಕಾರ್ಯ ನಿಜಕ್ಕೂ ಸಂತೋಷವಾಗಿದೆ. ನಾವು ಅಭಿವೃದ್ಧಿ ಹೆಸರಿನಲ್ಲಿ ಎಲ್ಲವೂ ನಾಶ ಮಾಡುತ್ತಿದ್ದೇವೆ. ಇದರ ನಡುವೆ ಗಿಡ ಮರಗಳನ್ನು ಉಳಿಸಲು ಲೋಕೋಪಯೋಗಿ ಇಲಾಖೆ ಸಹಕಾರದಲ್ಲಿ ಎಲ್ಲಾ ಇಲಾಖೆಗಳು ಉತ್ತಮ ಸೇವೆಯನ್ನು ಮಾಡುತ್ತಿದ್ದಾರೆ. ಅವರಿಗೆ ಧನ್ಯವಾದಗಳು.
-ಮಂಜುನಾಥ್ ಬಿ, ಅಧ್ಯಕ್ಷರು ಪರಿಸರ ವೇದಿಕೆ.
ಮರಗಳನ್ನು ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಗಿಸುವ ಪ್ರಕ್ರಿಯೆಯಲ್ಲಿ ಅವುಗಳಿಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕು. ಈ ಗಿಡಮರಗಳಿಗೆ ನೀರು, ಗೊಬ್ಬರ ಕೊಟ್ಟು ಮೂರು ವರ್ಷಗಳವರೆಗೆ ಪೋಷಿಸಿ ರಕ್ಷಿಸಲು ಮುಂದಾಗಬೇಕು.
ಡಾ.ಗುಂಪುಮರದ ಆನಂದ್, ರಾಜ್ಯ ಪರಿಸರ ಪ್ರಶಸ್ತಿ ವಿಜೇತರು ಗುಡಿಬಂಡೆ.