ಬೆಂಗಳೂರು:
ರಾಜ್ಯದಲ್ಲಿ ಬಜೆಟ್ ಮಂಡನೆ ಇರುವುದರಿಂದ ಶುಕ್ರವಾರ (ಫೆ. 10)ದಿಂದ ಅಧಿವೇಶನ ಆರಂಭ ವಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಅಧಿವೇಶನದಲ್ಲಿ ಎಲ್ಲರೂ ಕಡ್ಡಾಯವಾಗಿ ಭಾಗವಹಿಸಬೇಕೆಂದು ಶಾಸಕರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಗುರುವಾರ ಮನವಿ ಮಾಡಿಕೊಂಡಿದ್ದಾರೆ.
ಅಧಿವೇಶನ ಕುರಿತು ಇಂದು ಮಾಹಿತಿ ನೀಡಿರುವ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರು, ಇದು ಈ ವಿಧಾನಸಭೆಯ 15ನೆಯ ಮತ್ತು ಕೊನೆಯ ಅಧಿವೇಶನ ಆಗಿರುತ್ತದೆ. ಅಧಿವೇಶನದಲ್ಲಿ ಎಲ್ಲರೂ ಕಡ್ಡಾಯವಾಗಿ ಪಾಲ್ಗೊಳ್ಳಬೇಕು. ಕೊನೆಯ ಅಧಿವೇಶನ ಎಂದು ಯಾರೂ ನಿರ್ಲಕ್ಷಿಸದೇ ಪಾಲ್ಗೊಳ್ಳಿ ಎಂದು ಮನವಿ ಮಾಡಿಕೊಂಡರು.
ಬೆಳಗಾವಿಯಲ್ಲಿ ಕಳೆದ ಅಧಿವೇಶನ ನಡೆದಿತ್ತು. ಅದಾದ ಬಳಿಕ ಈಗ ವಿಧಾನಸೌಧದಲ್ಲಿ ಸೇರುತ್ತಿದ್ದೇವೆ. ಪ್ರಜಾಪ್ರಭುತ್ವದ ದೇಗುಲ ಎಂದು ಕರೆಯಲಾಗುವ ಸದನ ಇದು. ಸದಸ್ಯರು ಜವಾಬ್ದಾರಿಯುತವಾಗಿ ನಡೆದುಕೊಂಡು ಅಧಿವೇಶದಲ್ಲಿ ಪಾಲ್ಗೊಳ್ಳಬೇಕೆಂದು ಬಯಸುತ್ತೇನೆಂದು ಹೇಳಿದರು.
ಫೆಬ್ರುವರಿ 10ರಂದು ಆರಂಭವಾಗುವ ಅಧಿವೇಶನ ಫೆ. 24ರವರೆಗೆ ನಡೆಯಲಿದೆ. ಇದು ಬಜೆಟ್ ಅಧಿವೇಶನವಾಗಿದ್ದು, ಫೆಬ್ರುವರಿ 17ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರು ಬಜೆಟ್ ಮಂಡಿಸಲಿದ್ದಾರೆ. ಫೆಬ್ರುವರಿ 20ರಿಂದ 24ರವರೆಗೂ ಬಜೆಟ್ ಮೇಲೆ ಚರ್ಚೆ ನಡೆಯಲಿದೆ. ಅಧಿವೇಶನ ಆರಂಭವಾಗುವ ನಾಳೆ 11 ಗಂಟೆಗೆ ರಾಜ್ಯಪಾಲರು ಬೃಹತ್ ಮೆಟ್ಟಿಲುಗಳ ಮೂಲಕ ವಿಧಾನಸಭೆಗೆ ಆಗಮಿಸಲಿದ್ದು, ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆಂದು ತಿಳಿಸಿದರು.
ಈ ವರ್ಷದ ಮೊದಲ ಹಾಗೂ ಪ್ರಸಕ್ತ ಬಿಜೆಪಿ ಸರ್ಕಾರದ ಅಂತಿಮ ವಿಧಾನಮಂಡಲ ಅಧಿವೇಶನ ಇದಾಗಿದೆ, ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಭಾಷಣ ಮಾಡಲಿದ್ದು, ಚುನಾವಣೆ ವರ್ಷವಾಗಿರುವ ಹಿನ್ನೆಲೆಯಲ್ಲಿ ಆಡಳಿತ ಹಾಗೂ ಪ್ರತಿಪಕ್ಷಗಳ ನಡುವೆ ಕಾವೇರಿದ ಚರ್ಚೆಗಳು ನಡೆಯುವ ನಿರೀಕ್ಷೆಗಳಿವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
