ನವದೆಹಲಿ:
ದಕ್ಷಿಣ ಭಾರತದಲ್ಲಿ ಮತ್ತೆ ಕೈ ಮೇಲಾಗಲು ಪ್ರಮುಖ ಕಾರಣಕರ್ತರಾದ ಕರ್ನಾಟಕದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು 135 ಶಾಸಕ ಸ್ಥಾನ ಗೆಲ್ಲಲು ಕೆಪಿಸಿಸಿ ಅಧ್ಯಕ್ಷರಾಗಿ ಶ್ರಮಿಸಿದ ಡಿ ಕೆ ಶಿವಕುಮಾರ್ ಮುಖ್ಯಮಂತ್ರಿ ಆಕಾಂಕ್ಷಿಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.
ಸಿದ್ದರಾಮಯ್ಯ ಜೊತೆ ತೀವ್ರ ಪೈಪೋಟಿ ನಡೆಸುತ್ತಿರುವ ಡಿ ಕೆ ಶಿವಕುಮಾರ್ ಅವರನ್ನು ಇಂದು ಪ್ರತ್ಯೇಕವಾಗಿ ಭೇಟಿ ಮಾಡಿ ಚರ್ಚಿಸಲು ಹೈಕಮಾಂಡ್ ದೆಹಲಿಗೆ ಬುಲಾವ್ ಮಾಡಿದ್ದು ಅದರಂತೆ ಬೆಂಗಳೂರಿನ ತಮ್ಮ ನಿವಾಸದಿಂದ ದೆಹಲಿಗೆ ಡಿ ಕೆ ಶಿವಕುಮಾರ್ ಹೊರಟಿದ್ದಾರೆ.
ಕೆಂಪೇಗೌಡ ಏರ್ ಪೋರ್ಟ್ ಗೆ ಹೋಗುವ ವೇಳೆ ಎಎನ್ ಐ ಸುದ್ದಿಸಂಸ್ಥೆಯ ಪ್ರತಿನಿಧಿಯೊಂದಿಗೆ ವಿಶೇಷವಾಗಿ ಮಾತನಾಡಿದ ಅವರು, ಪಕ್ಷ ಬಯಸಿದರೆ ನನಗೆ ಜವಾಬ್ದಾರಿ ನೀಡಬಹುದು. ನಮ್ಮದು ಒಂದು ಒಗ್ಗಟ್ಟಿನ ಮನೆ. 135 ಶಾಸಕರ ಬಲವಿದೆ. ಯಾರನ್ನೂ ವಿಭಜಿಸಲು ಒಡೆಯಲು ನನಗೆ ಮನಸ್ಸಿಲ್ಲ. ಹೈಕಮಾಂಡ್ ನನ್ನನ್ನು ಬಯಸುತ್ತದೋ ಇಲ್ಲವೋ ನನ್ನ ಜವಾಬ್ದಾರಿಯನ್ನು ನಾನು ಮಾಡುತ್ತೇನೆ. ಬೆನ್ನಿಗೆ ಚೂರಿ ಹಾಕುವ ಬೆದರಿಕೆ ಹಾಕುವ ಕೆಲಸ ಮಾಡುವುದಿಲ್ಲ, ಮುಂದಿನ ಲೋಕಸಭೆ ಚುನಾವಣೆಯಲ್ಲಿ 20 ಸೀಟು ಗೆಲ್ಲುವುದು ನನ್ನ ಗುರಿ ಎಂದರು.