ರಾಯಚೂರು:
ವಿವಾಹಿತೆ ಮೇಲೆ ನಾಲ್ವರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದು, ಆರೋಪಿಗಳಲ್ಲಿ ಒಬ್ಬನನ್ನು ಬಂಧಿಸಲಾಗಿದೆ.ಸಿಂಧನೂರು ತಾಲೂಕಿನ ಮೂರುಮೈಲ್ ಕ್ಯಾಂಪ್ ನಿವಾಸಿ ಮಾಳಪ್ಪ ಗೌಡಪ್ಪ ಎಂಬುವನನ್ನು ಬಂಧಿಸಲಾಗಿದೆ.
ಮೇ 24 ರಂದು ಸಂಜೆ ನಾಲ್ಕುಮೈಲ್ ಕ್ಯಾಂಪಿನ ಹೊರವಲಯದಲ್ಲಿ 46 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ವಿರೋಧ ವ್ಯಕ್ತಪಡಿಸಿದ ಮಹಿಳೆ ಮೇಲೆ ತೀವ್ರವಾಗಿ ಹಲ್ಲೆ ನಡೆಸಿ ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾರೆ.
ಮನಸೋ ಇಚ್ಛೆ ಹಲ್ಲೆ ನಡೆಸಿದ್ದರಿಂದ ಮಹಿಳೆ ತೀವ್ರ ಅಸ್ವಸ್ಥರಾಗಿದ್ದಾರೆ. ಆಕೆಯನ್ನು ಗಮನಿಸಿದ ಜನ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಮೃತಪಟ್ಟಿದ್ದಾರೆ.
ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸಂಬಂಧಿಸಿದಂತೆ ಆರೋಪಿ ಮಾಳಪ್ಪನನ್ನು ಬಂಧಿಸಲಾಗಿದೆ.