ಮೃತದೇಹಗಳ ಜೊತೆ ಸಂಭೋಗ ಅತ್ಯಾಚಾರವಲ್ಲ : ಹೈಕೋರ್ಟ್‌

ಬೆಂಗಳೂರು:

    ಮೃತ ಮಹಿಳೆಯ ಮೇಲಿನ ಅತ್ಯಾಚಾರವು ಐಪಿಸಿ ಸೆಕ್ಷನ್ 376 ರ ನಿಬಂಧನೆಗಳ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗುವುದಿಲ್ಲ ಎಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ‘ಡೆಡ್ ಬಾಡಿ’ ಎಂಬ ಪದವನ್ನು ಪರಿಚಯಿಸಲು ಈ ಸೆಕ್ಷನ್ ಗೆ ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಮೃತದೇಹಗಳ ಜೊತೆ ಸಂಭೋಗ ನಡೆಸುವವರಿಗೆ ಅತ್ಯಾಚಾರ ಅ‍ಪರಾಧದ ಅಡಿಯಲ್ಲಿ ಶಿಕ್ಷೆ ವಿಧಿಸುವ ಅವಕಾಶ ಇಲ್ಲದಿರುವ ಕಾರಣ, ಭಾರತೀಯ ದಂಡ ಸಂಹಿತೆ-1860ರ (ಐಪಿಸಿ) ಕಲಂ 377ಕ್ಕೆ (ಅಸ್ವಾಭಾವಿಕ ಲೈಂಗಿಕ ಅಪರಾಧಗಳು) ತಿದ್ದುಪಡಿ ತರಬೇಕು ಅಥವಾ ಈ ನಿಟ್ಟಿನಲ್ಲಿ ಹೊಸ ನಿಬಂಧನೆಗಳನ್ನು ರೂಪಿಸಬೇಕು‘ ಎಂದು ಹೈಕೋರ್ಟ್‌, ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ.

    ಕೆನಡಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಮಹಿಳೆಯರ ಮೃತದೇಹದ ಜೊತೆ ಎಸಗುವ ಅಪರಾಧ ಶಿಕ್ಷಾರ್ಹ ಎನಿಸಿದೆ. ಇಂತಹ ನಿಯಮಗಳನ್ನು ಭಾರತದಲ್ಲಿಯೂ ಪರಿಚಯಿಸಬೇಕಿದೆ. ಇದರಿಂದ ಮೃತದೇಹದ ಘನತೆಯನ್ನು ರಕ್ಷಣೆ ಮಾಡಿದಂತಾಗುತ್ತದೆ. ಆದ್ದರಿಂದ, ಕೇಂದ್ರ ಸರ್ಕಾರವು ಈ ದಿಸೆಯಲ್ಲಿ ಆರು ತಿಂಗಳ ಒಳಗಾಗಿ ಅಗತ್ಯ ಕ್ರಮ ಜರುಗಿಸಬೇಕು‘ ಎಂದು ನ್ಯಾಯಪೀಠ ಶಿಫಾರಸಿನಲ್ಲಿ ತಿಳಿಸಿದೆ. ವಿಶೇಷವಾಗಿ ಮೃತ  ಮಹಿಳೆಯರ ಘನತೆ ಕಾಪಾಡಬೇಕು ಎಂದು ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ವೆಂಕಟೇಶ್ ನಾಯ್ಕ್ ಟಿ ಅವರ ವಿಭಾಗೀಯ ಪೀಠವು ಮೇ 30 ರಂದು ಆದೇಶ ನೀಡಿದೆ.

 

    ಕೊಲೆ ಅಪರಾಧಕ್ಕೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕಾಯಂಗೊಳಿಸಿರುವ ನ್ಯಾಯಪೀಠ, ‘ಶವದ ಜೊತೆ ಸಂಭೋಗ ನಡೆಸಿದ್ದಾನೆ‘ ಎಂಬ ಆರೋಪದಿಂದ ಮುಕ್ತಗೊಳಿಸುವ ಮೂಲಕ ಮೇಲ್ಮನವಿಯನ್ನು ಭಾಗಶಃ ಪುರಸ್ಕರಿಸಿದೆ. ಅಂತೆಯೇ, ಅತ್ಯಾಚಾರ ಅಪರಾಧಕ್ಕೆ ಐಪಿಸಿ ಕಲಂ 376ರ ಅಡಿ ವಿಧಿಸಿದ್ದ 10 ವರ್ಷಗಳ ಜೈಲು ಶಿಕ್ಷೆಯನ್ನು ರದ್ದುಪಡಿಸಿದೆ.

    ‘ಮೃತದೇಹದ ಜೊತೆ ಸಂಭೋಗ ನಡೆಸಿದಂತಹ ಪ್ರಕರಣದಲ್ಲಿ ಅತ್ಯಾಚಾರ ಆರೋಪದಡಿ ಅಪರಾಧಿಗೆ ಶಿಕ್ಷೆ ವಿಧಿಸಲು ಯಾವುದೇ ನಿಯಮಗಳು ಇಲ್ಲವಾಗಿವೆ. ಐಪಿಸಿಯ ಕಲಂ 377ರ ಅಡಿಯಲ್ಲಿ ಜೀವಂತ ಪುರುಷ, ಮಹಿಳೆ ಅಥವಾ ಪ್ರಾಣಿಗಳ ಜೊತೆಗೆ ಅಸ್ವಾಭಾವಿಕ ಲೈಂಗಿಕ ಕ್ರಿಯೆ ನಡೆಸಿದರೆ, ಗರಿಷ್ಠ 10 ವರ್ಷ ಜೈಲು ಶಿಕ್ಷೆ ವಿಧಿಸಲು ಅವಕಾಶವಿದೆ. ಆದ್ದರಿಂದ, ಈ ಕಲಂಗೆ ತಿದ್ದುಪಡಿ ತಂದು ಪುರುಷ, ಮಹಿಳೆ ಅಥವಾ ಪ್ರಾಣಿಗಳ ಮೃತದೇಹ ಎಂದು ಸೇರಿಸುವುದಕ್ಕೆ ಇದು ಸಕಾಲವಾಗಿದೆ‘ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

    ಪ್ರಸ್ತುತ ಪ್ರಕರಣವನ್ನು ಉಲ್ಲೇಖಿಸಿದ ನ್ಯಾಯಾಲಯ, ಆರೋಪಿಯು ಮೊದಲು ಸಂತ್ರಸ್ತೆಯನ್ನು ಕೊಂದು ನಂತರ ಮೃತದೇಹದೊಂದಿಗೆ ಲೈಂಗಿಕ ಸಂಭೋಗ ನಡೆಸಿದ್ದಾನೆ ಎಂದು ಹೇಳಿದೆ. IPC  ಸೆಕ್ಷನ್ 375 ಮತ್ತು 377 ರ ಅಡಿಯಲ್ಲಿ ವ್ಯಾಖ್ಯಾನಿಸಲಾದ ಅಸ್ವಾಭಾವಿಕ ಲೈಂಗಿಕ ಕ್ರಿಯೆ ಅಪರಾಧವೆಂದು ಪರಿಗಣಿಸಲಾಗುವುದಿಲ್ಲ .IPC ಯ ಸೆಕ್ಷನ್ 376 ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧ ಎಂದು ಕರೆಯಲಾಗುವುದಿಲ್ಲ. ಅಂತಿಮವಾಗಿ, ಇದನ್ನು ಸ್ಯಾಡಿಸಂ ಮತ್ತು ನೆಕ್ರೋಫಿಲಿಯಾ ಎಂದು ಪರಿಗಣಿಸಬಹುದು ಎಂಬುದಾಗಿ ತಿಳಿಸಿದೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link