ಮಾನವ ಕಳ್ಳಸಾಗಣಿಕೆ ತಡೆಯಲು ಜನರ ಸಹಕಾರಬೇಕು…!!!

ಬೆಂಗಳೂರು

       ಸಮಾಜಕ್ಕೆ ಪಿಡುಗಾಗಿ ಪರಿಣಮಿಸಿರುವ ಮಾನವ ಕಳ್ಳ ಸಾಗಾಣೆ ಹಾಗೂ ಜೀತ ಪದ್ಧತಿ ಪಿಡುಗನ್ನು ನಿರ್ಮೂಲನೆ ಮಾಡಲು ಸರ್ಕಾರದ ಜೊತೆ ನಾಗರಿಕ ಸಮಾಜ ಸಂಘಸಂಸ್ಥೆಗಳು ಕೈ ಜೋಡಿಬೇಕಾದ ಅಗತ್ಯವನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಎಲ್.ಕೆ. ಅತೀಕ್ ಅವರು ಪ್ರತಿಪಾದಿಸಿದ್ದಾರೆ.

         ಮಾನವ ಕಳ್ಳ ಸಾಗಾಣೆ ಮತ್ತು ಜೀತ ಪದ್ಧತಿ ಗಂಭೀರ ಸ್ವರೂಪದ ಅಪರಾಧವಾಗಿದ್ದು ಇದರಿಂದ ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಸಮಾಜಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿರುವ ಈ ಪಿಡುಗನ್ನು ನಿರ್ಮೂಲನೆ ಮಾಡಲು ಸ್ವಯಂ ಸೇವಾ ಸಂಸ್ಥೆಗಳು ಸರ್ಕಾರದ ಜತೆ ಸೇರಿ ಶ್ರಮಿಸಬೇಕು ಎಂದು ತಿಳಿಸಿದರು.

         ಮಾನವ ಕಳ್ಳ ಸಾಗಾಣೆ ಮತ್ತು ಜೀತ ಪದ್ಧತಿಯನ್ನು ಕೊನೆಗಾಣಿಸಲು ವಿವಿಧ ಸ್ವಯಂ ಸೇವಾ ಸಂಸ್ಥೆಗಳು ರಚಿಸಿಕೊಂಡಿರುವ ಮುಕ್ತಿ ಒಕ್ಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದ ಅವರು ಮಾನವ ಕಳ್ಳ ಸಾಗಾಣೆ ಹಾಗೂ ಜೀತ ಪದ್ಧತಿಗೆ ಪ್ರೋತ್ಸಾಹ ನೀಡುವ ತಪ್ಪಿತಸ್ಥರನ್ನು ಪತ್ತೆ ಮಾಡಿ ಶಿಕ್ಷೆಗೆ ಗುರಿಪಡಿಸಬೇಕು ಜನರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.

         ಸರ್ಕಾರ ಮತ್ತು ಸ್ವಯಂ ಸೇವಾ ಸಂಸ್ಥೆಗಳು ಸಂಘಟನಾತ್ಮಕವಾಗಿ ಕೆಲಸ ಮಾಡಿ ಅನಿಷ್ಟ ಪಿಡುಗನ್ನು ನಿವಾರಿಸಬೇಕು. ಇದಕ್ಕೊಂದು ಸಹಾಯವಾಣಿಯನ್ನು ತೆರೆಯುವ ಅಗತ್ಯವಿದೆ ಈ ನಿಟ್ಟಿನಲ್ಲಿ ಕೆಲಸ ಮಾಡುವುದಾಗಿ ಅವರು ತಿಳಿಸಿದರು.

ದೊಡ್ಡ ಸಮಸ್ಯೆ

       ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಡಿ.ಹೆಚ್. ವಘೇಲ ಅವರು ಮಾತನಾಡಿ, ಜೀತ ಪದ್ಧತಿಗೆ ಪ್ರೋತ್ಸಾಹ ನೀಡುವವರನ್ನು ಪತ್ತೆ ಮಾಡುವುದೇ ದೊಡ್ಡ ಸವಾಲಾಗಿದೆ ಈ ಕೆಲಸವನ್ನು ಸ್ವಯಂ ಸೇವಾ ಸಂಸ್ಥೆಗಳು ಮಾಡಬೇಕು, ನೊಂದವರು ಹಾಗೂ ಆಡಳಿತದ ಮಧ್ಯೆ ಕೊಂಡಿಯಾಗಿ ಕೆಲಸ ಮಾಡಬೇಕು ಎಂದರು.

         ಮಾನವ ಕಳ್ಳ ಸಾಗಾಣೆಯು ಒಂದು ಸಮಸ್ಯೆಯಾಗಿದ್ದು, ಇದನ್ನೂ ಕೂಡ ಹತ್ತಿಕ್ಕುವ ಕೆಲಸ ಆಗಬೇಕಾಗಿದೆ ಎಂದರು. ಜಿಡ್ಸ್ ಸಂಸ್ಥೆಯ ಸಂಸ್ಥಾಪಕಿ ಸಿಂಥಿಯಾ ಸ್ಟೀಫನ್ ಮತ್ತಿತರರು ಉಪಸ್ಥಿತರಿದ್ದರು.

         ಜೀತ ಕಾರ್ಮಿಕರಾಗಿ ಕೆಲಸ ಮಾಡಿ, ಇದೀಗ ಮುಕ್ತಿ ಹೊಂದಿರುವ ಪಾಪಮ್ಮ, ತಾನು ಅನುಭವಿಸಿದ ಕಷ್ಟಗಳ ಕಣ್ಣೀರ ಕತೆಯನ್ನು ಸಭೆಯ ಮುಂದಿಟ್ಟು ಕಣ್ಣೀರು ಹಾಕಿದರು. ಸರ್ಕಾರ ಹಾಗೂ ಸ್ವಯಂ ಸೇವಾ ಸಂಸ್ಥೆಗಳ ಸಹಾಯದಿಂದ ನಾನು ಮತ್ತು ತನ್ನ ಕುಟುಂಬ ಸದಸ್ಯರು ಜೀತ ಪದ್ಧತಿಯಿಂದ ಹೊರ ಬಂದಿದ್ದು, ನಮ್ಮ ಬದುಕು ಹಸನಾಗಲು ಸರ್ಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಮನವಿ ಮಾಡಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ