ಬೆಂಗಳೂರು
ರಸ್ತೆ ಅಗಲೀಕರಣಕ್ಕೆ ಬಿಬಿಎಂಪಿಯಿಂದ ಸ್ವಾಧೀನ ಪಡಿಸಿಕೊಂಡ ನಿವೇಶನಗಳು ಹಾಗೂ ಕಟ್ಟಡಗಳ ಜಾಗಕ್ಕಿಂತ ಹೆಚ್ಚಿನ ವಿಸ್ತೀರ್ಣಕ್ಕೆ ಬೆಲೆ ನಿಗದೀಕರಣ ಮಾಡಿಸಿ ಖಾಸಗಿ ವ್ಯಕ್ತಿಗಳ ಸಹಾಯದಿಂದ ಕೋಟ್ಯಂತರ ರೂ.ಗಳ ವಂಚನೆ ನಡೆಸಿದ್ದ ಬಿಡಿಎ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಕೃಷ್ಣಲಾಲ್ ಎಸಿಬಿ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.
ಕೃಷ್ಣಲಾಲ್ ಅವರಿಗೆ ವಂಚನೆಯಲ್ಲಿ ಸಹಕರಿಸುತ್ತಿದ್ದ ಭುವನೇಶ್ವರಿ ನಗರದ ಟೆಲಿಕಾಂ ನಗರದ ದೀಪಕ್ ಕುಮಾರ್, ಗಾಂಧಿ ನಗರದ ಅಮಿತ್ ರಿಕಬ್ ಜೈನ್ ಅವರ ಗಾಂಧಿನಗರ ಹಾಗೂ ಚಿಕ್ಕಪೇಟೆಯ ಕಚೇರಿ, ಮನೆಗಳ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡಿರುವ ಅಕ್ರಮ ಆಸ್ತಿಪ-ಪಾಸ್ತಿಗಳ, ದಾಖಲೆ ಪತ್ರಗಳನ್ನು ಪರಿಶೀಲನೆ ನಡೆಸಿದ್ದಾರೆ.
ಸಹಾಯಕ ಅಭಿಯಂತರ ಕೃಷ್ಣಲಾಲ್ ಅವರ ಸಂಜಯ ನಗರದ ಮನೆ ಸೇರಿ ಒಟ್ಟು 6 ಕಡೆಗಳಲ್ಲಿ ದಾಳಿ ನಡೆಸಿ, ದಾಖಲೆ ಪತ್ರಗಳನ್ನು ವಶಪಡಿಸಿಕೊಂಡು ಪರಿಶೀಲನೆ ನಡೆಸಲಾಗಿದೆ ಎಂದು ಎಸಿಬಿಯ ಎಸ್‍ಪಿ ರಾಜೇಂದ್ರ ಪಾಟೀಲ್ ತಿಳಿಸಿದ್ದಾರೆ.
ಕೃಷ್ಣಲಾಲ್ ಅವರು ಹಿಂದೆ ಮಹದೇವಪುರ ವಲಯದಲ್ಲಿ ಸಹಾಯಕ ಅಭಿಯಂತರರಾಗಿ ಕಾರ್ಯನಿರ್ವಹಿಸಿದ್ದು, ಅಮಿತ್ ರಿಕಬ್‍ಚಂದ್ ಜೈನ್ ಹಾಗೂ ದೀಪಕ್ ಕುಮಾರ್ ಅವರ ಜತೆ ಸೇರಿ ರಸ್ತೆ ಅಗಲೀಕರಣಕ್ಕೆ ವಶಪಡಿಸಿಕೊಳ್ಳಲಾದ ನಿವೇಶನಗಳು ಕಟ್ಟಡಕ್ಕಿಂತ ಹೆಚ್ಚಿನ ಜಾಗಕ್ಕೆ ಬೆಲೆ ನಿಗದೀಕರಣ ಮಾಡಿ,
ನಗರಸಭೆ ಹಾಗೂ ಬಿಬಿಎಂಪಿ ಅಭಿವೃದ್ಧಿಪಡಿಸಿದ ಅಡ್ಡರಸ್ತೆಗಳನ್ನೂ ಸಹ ಖಾಸಗಿ ವ್ಯಕ್ತಿಗಳ ಆಸ್ತಿಯೆಂದು ಬಿಂಬಿಸುವ ಮೂಲಕ ಖಾಸಗಿ ವ್ಯಕ್ತಿಗಳಿಗೆ ಅಪಾರ ಪ್ರಮಾಣದ ಅಕ್ರಮದ ಲಾಭ ಮಾಡಿಕೊಟ್ಟು ಬಿಬಿಎಂಪಿ ಹಾಗೂ ಸರ್ಕಾರಕ್ಕೆ ಕೋಟ್ಯಂತರ ರೂ.ಗಳ ನಷ್ಟವುಂಟು ಮಾಡಿದ್ದರು.ಈ ಸಂಬಂಧ ಭ್ರಷ್ಟಾಚಾರ ನಿಗ್ರಹದಳದ ಬೆಂಗಳೂರು ನಗರ ಠಾಣೆಯಲ್ಲಿ ದಾಖಲಾದ ಪ್ರಕರಣದ ಹಿನ್ನೆಲೆಯಲ್ಲಿ ದಾಳಿ ನಡೆಸಿ ದಾಖಲೆಪತ್ರಗಳ ಪರಿಶೀಲನೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ