
ಬೆಂಗಳೂರು: ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಇನ್ನು ತೀರ್ಮಾನವಾಗಿಲ್ಲ. ಹೀಗಾಗಿ ಮುಖ್ಯಮಂತ್ರಿ ಬದಲಾವಣೆ ಆಗುತ್ತದೋ ಇಲ್ಲವೋ ಎಂಬುದನ್ನು ಈಗ ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿ ಬದಲಾವಣೆಗೆ ಇನ್ನು ಸಮಯ ನಿಗದಿಯಾಗಿಲ್ಲ. ಸಿಎಂ ಬದಲಾವಣೆ ಕುರಿತು ಚರ್ಚಿಸಲು ದಿನಾಂಕವೂ ನಿಗದಿಯಾಗಿಲ್ಲ. ಇದೆಲ್ಲಾ ನಿಗದಿಯಾದ ಮೇಲೆ ಏನು ನಿರ್ಧಾರ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದರು.
ಪದೇ ಪದೇ ಮುಖ್ಯಮಂತ್ರಿ ಬದಲಾವಣೆ ಆಗುತ್ತಾ ಎಂದು ಕೇಳಿದರೆ ನಾನೇನು ಹೇಳಲಿ. ಈಗ ಸಿಎಂ ಬದಲಾವಣೆ ಆಗುತ್ತಾ ಆಗಲ್ಲವಾ ಎಂಬುದನ್ನು ಹೇಗೆ ಹೇಳಲಿ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.
ಮುಖ್ಯಮಂತ್ರಿ ಬದಲಾವಣೆಗೆ ಸಮಯ ನಿಗದಿಯಾದ ಮೇಲೆ ನಾವೆಲ್ಲ ಅಂದರೆ ನಾನು, ಸೋನಿಯಾಗಾಂಧಿಯವರು, ರಾಹುಲ್ ಗಾಂಧಿಯವರು ಸೇರಿ ಚರ್ಚೆ ಮಾಡುತ್ತೇವೆ. ಯಾವ ನಿರ್ಧಾರ ಕೈಗೊಂಡರೆ ಪಕ್ಷಕ್ಕೆ ಒಳ್ಳೇಯದು ಯಾವ ನಿರ್ಧಾರ ಕೈಗೊಂಡರೆ ಪಕ್ಷದ ಮೇಲೆ ಯಾವ ರೀತಿ ಪರಿಣಾಮವಾಗಲಿದೆ ಎಂಬೆಲ್ಲಾ ಬಗ್ಗೆ ಚರ್ಚಿಸಿಯೇ ರಾಜ್ಯದ ಹಿತವನ್ನು ಗಮನದಲ್ಲಿಟ್ಟು ಕೊಂಡು ತೀರ್ಮಾನ ಮಾಡುತ್ತೇವೆ ಅದನ್ನು ಎಲ್ಲರೂ ಬೆಂಬಲಿಸಬೇಕು ಎಂದರು. ಈಗ ಮುಖ್ಯಮಂತ್ರಿ ಬದಲಾವಣೆಗೆ ಇನ್ನು ಸಮಯ ನಿಗದಿಯಾಗಿಲ್ಲ. ಮಾಧ್ಯಮದವರು ಪದೇ ಪದೇ ಮುಖ್ಯಮಂತ್ರಿ ಬದಲಾಗುತ್ತಾರೆ ಎಂಬ ಪ್ರಶ್ನೆ ಕೇಳಿದರೆ ನಾನು ಉತ್ತರ ಕೊಡಲು ಆಗಲ್ಲ. ಸುಮ್ಮನೆ ಊಹಾಪೋಹ ಪ್ರಶ್ನೆಗಳು ಬೇಡ ಎಂದರು.
ಎಐಸಿಸಿ ಅಧ್ಯಕ್ಷರು ಮುಖ್ಯಮಂತ್ರಿ ಬದಲಾವಣೆಗೆ ಇನ್ನು ಕಾಲ ಬಂದಿಲ್ಲ ಎಂದು ಹೇಳುವ ಮೂಲಕ ಮೇ ಎರಡನೇ ವಾರದಲ್ಲಿ ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಆಗುತ್ತೇವೆ ಎಂಬ ವರದಿಗಳನ್ನು ತಳ್ಳಿಹಾಕಿದರು. ಇಂದು ಸಹಾ ನಾಯಕತ್ವ ಬದಲಾವಣೆ ಬಗ್ಗೆ ಖರ್ಗೆಯವರು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.
ಹೈ ತೀರ್ಮಾನವನ್ನು ಪ್ರಸಾದವೆಂದು ಸ್ವೀಕರಿಸುವೆ : ಡಿಸಿಎಂ
ಸುದ್ದಿಗಾರರ ಜೊತೆ ಮಾತನಾಡಿದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಪಕ್ಷದ ತೀರ್ಮಾನ ಏನೇ ಇದ್ದರೂ ಅದನ್ನು ಸ್ವೀಕರಿಸಬೇಕು ಎಂಬ ಎಐಸಿಸಿ ಅಧ್ಯಕ್ಷರಾದ ಖರ್ಗೆ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಸೇರಿದಂತೆ ಹೈಕಮಾಂಡ್ ತೀರ್ಮಾನವನ್ನು ಪ್ರಸಾದವೆಂದು ಸ್ವೀಕರಿಸುತ್ತೇವೆ” ಸ್ಪಷ್ಟಪಡಿಸಿದರು.
ಖರ್ಗೆ ಹೇಳಿದ ಮೇಲೆ ಎಲ್ಲದಕ್ಕೂ ಫುಲ್ ಸ್ಟಾಪ್ : ಪರಂ
ಸದಾಶಿವನಗರದ ನಿವಾಸದ ಬಳಿ ಮಾಧ್ಯಮದವರೊಂದಿಗೆ ಮಾತನಾಡಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರು ಬದಲಾವಣೆ ಇಲ್ಲ ಎಂದಿರುವಾಗ ಎಲ್ಲ ಫುಲ್ ಸ್ಟಾಪ್ ಅಂತ ಅರ್ಥ. ಸದ್ಯಕ್ಕೆ ಬದಲಾವಣೆ ಇಲ್ಲ ಎಂಬ ಖರ್ಗೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸುತ್ತಾ, ಖರ್ಗೆಯವರು ನಮ್ಮ ಪಕ್ಷದ ರಾಷ್ಟಿçÃಯ ಅಧ್ಯಕ್ಷರು. ಅಪಾರವಾದ ಅನುಭವ ಇರುವವರು. ರಾಜ್ಯಕ್ಕೆ ಬದಲಾವಣೆ ಆಗೋದಾದ್ರೆ, ಅವರು ಬಂದರೆ ಅವರ ಅನುಭವದ ಮುಂದೆ ಮಾತಾಡೋಕೆ ಆಗಲ್ಲ. ಸದ್ಯಕ್ಕೆ ಸಿಎಂ ಇದ್ದಾರೆ, ಮತ್ತೆ ಬದಲಾವಣೆ ಮಾಡುವ ಪ್ರಶ್ನೆ ಈಗಂತೂ ಸದ್ಯಕ್ಕೆ ಇಲ್ಲ. ಇದನ್ನು ನಾನು ಸ್ವಾಗತ ಮಾಡುತ್ತೇನೆ. ಅವರು ಹೇಳಿದ ಮೇಲೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ವೇಣುಗೋಪಾಲ್, ಸುರ್ಜೆವಾಲ ಎಲ್ಲರೂ ಕುಳಿತು ಮಾತನಾಡಿ ಅಭಿಪ್ರಾಯ ಬಂದಿರುತ್ತೆ ಎಂಬುದು ನನ್ನ ಭಾವನೆ. ಅವರ ಮಾತಿಗೆ ಬಹಳ ಪ್ರಾಮುಖ್ಯತೆ ಇರುತ್ತದೆ. ಎಲ್ಲವೂ ಸದ್ಯಕ್ಕೆ ಅಲ್ಲಿಗೆ ಮುಗಿಯುತ್ತದೆ ಎಂದು ಹೇಳಿದರು.








