ಬೆಂಗಳೂರು:
ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಮತ್ತು ಅವಿವಾ ಮದುವೆಗೆ ದಕ್ಷಿಣ ಭಾರತದ ಖ್ಯಾತ ನಟರುಗಳು ಆಗಮಿಸಿದ್ದಾರೆ. ಕೇವಲ ನಟರು ಮಾತ್ರವಲ್ಲ ರಾಜಕೀಯ ಗಣ್ಯರು, ಕ್ರಿಕೆಟ್ ತಾರೆಯರು, ಗಾಯಕರೂ ಸೇರಿದಂತೆ ಸಾಕಷ್ಟು ಸೆಲೆಬ್ರಿಟಿಗಳು ಅಂಬಿ ಪುತ್ರನ ಮದುವೆಗೆ ಆಗಮಿಸಿ ಹೊಸ ಜೋಡಿಗೆ ಹಾರೈಸಿದ್ದಾರೆ.
ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಮದುವೆ ಸಮಾರಂಭಕ್ಕೆ ನಟ ರಜನಿಕಾಂತ್ ,ತೆಲುಗು ನಟ ಚಿರಂಜೀವಿ, ಕನ್ನಡದ ಹೆಸರಾಂತ ನಟ ಯಶ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳು ನಟ ಮೋಹನ್ ಬಾಬು, ತೆಲುಗು ನಟ ನರೇಶ್, ನಟಿ ಪವಿತ್ರ ಲೋಕೇಶ್, ನಟಿ ಶುಭ್ರ ಅಯ್ಯಪ್ಪ, ನಿರ್ಮಾಪಕಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಗಾಯಕ ವಿಜಯ್ ಪ್ರಕಾಶ್ ಮತ್ತು ಹಲವಾರು ರಾಜಕೀಯ ಧೂರೀಣರು ಸಹ ಆಗಮಿಸಿ ಶುಭ ಕೋರಿದರು.
ನಟ ಅಭಿಷೇಕ್ ಅಂಬರೀಶ್ ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿರುವ ಅವಿವಾ ಬಿಡಪ್ಪ ಇಂದು ಹೊಸ ಜೀವನಕ್ಕೆ ಕಾಲಿಟ್ಟರು. ಗೌಡರ ಸಂಪ್ರದಾಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಿವಾಗೆ ಮಾಂಗಲ್ಯ ಧಾರಣೆ ಮಾಡುವ ಮೂಲಕ ದೀರ್ಘಕಾಲದ ಗೆಳತಿಯೊಂದಿಗೆ ಹಸೆಮಣೆ ಏರಿದರು. ಈ ಸಂದರ್ಭದಲ್ಲಿ ಸ್ಯಾಂಡಲ್ ವುಡ್ ಅನೇಕ ಗಣ್ಯರು ಹಾಜರಿದ್ದರು. ಗುರು ಹಿರಿಯರ ನಿಶ್ಚಯದಂತೆ ಬೆಳಗ್ಗೆ 9.30 ರಿಂದ 10.30ರ ಒಳಗೆ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದೆ.
ಅಭಿಷೇಕ್- ಭಾರತದ ಖ್ಯಾತ ಫ್ಯಾಷನ್ ಡಿಸೈನರ್ ಶ್ರೀಪ್ರಸಾದ್ ಬಿಡಪ ಅವರ ಪುತ್ರಿ ಅವಿವ ಅವರು ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಗುರುಹಿರಿಯರ ಒಪ್ಪಿಗೆಯರ ಮೇರೆಗೆ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಮೂರು ದಿನಗಳಿಂದ ಅಂಬಿ ಮನೆಯಲ್ಲಿ ಸಡಗರ ಮನೆಮಾಡಿತ್ತು. ಅಂಬರೀಷ್ ಅವರ ಮನೆ ಮುಂದೆ ಹಸಿರು ಚಪ್ಪರ ಹಾಕಲಾಗಿದೆ. ತಳಿರು ತೋರಣಗಳಿಂದ ಮನೆಯನ್ನು ಸಿಂಗರಿಸಲಾಗಿದೆ. ವಿದ್ಯುತ್ ದೀಪಗಳಿಂದ ಇಡೀ ಮನೆ ಅಲಂಕಾರಗೊಂಡಿದೆ. ಈಗಾಗಲೇ ಹಳದಿ ಶಾಸ್ತ್ರ, ವರಪೂಜೆ, ಮೆಹಂದಿ ಶಾಸ್ತ್ರದ ಕಾರ್ಯಕ್ರಮಗಳನ್ನು ಅಂಬಿ ಮನೆಯಲ್ಲೇ ನೆರವೇರಿಸಲಾಗಿದೆ.
ಇಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆದದ್ದು, ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಅಂದಾಜು 1 ಲಕ್ಷ ಜನರು ಇದರಲ್ಲಿ ಭಾಗಿ ಆಗುವ ನಿರೀಕ್ಷೆ ಇದೆ. ಈ ಕಾರ್ಯಕ್ರಮದಲ್ಲಿ ಚಿತ್ರರಂಗ- ರಾಜಕೀಯ ರಂಗದ ಗಣ್ಯರು ಭಾಗಿಯಾಗಲಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ