ಬೆಂಗಳೂರು:
ರಾಜ್ಯದಲ್ಲಿ ನೂತನ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದಿದೆ. ನೂತನ ಸರ್ಕಾರದ ಲೆಕ್ಕಾಚಾರಗಳು, ಆಯವ್ಯಯಗಳ ಕುರಿತು ಬಜೆಟ್ ಮಂಡನೆಯಾಗಬೇಕಿದೆ. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಿನ ತಿಂಗಳು ಜುಲೈ 7ರಂದು ಹೊಸ ಸರ್ಕಾರದ ಒಂದು ಮುಂದಿನ ಆರ್ಥಿಕ ವರ್ಷದವರೆಗಿನ ಬಜೆಟ್ ನ್ನು ಮಂಡಿಸಲಿದ್ದಾರೆ.
ಹಣಕಾಸು ಸಚಿವರು ಆಗಿರುವ ಸಿಎಂ ಸಿದ್ದರಾಮಯ್ಯ ಈ ಹಿಂದೆ 13 ಬಾರಿ ಬಜೆಟ್ ಮಂಡಿಸಿದ್ದು ಇದೀಗ 14ನೇ ಬಾರಿಗೆ ಬಜೆಟ್ ಮಂಡನೆಗೆ ಸಿದ್ಧತೆ ನಡೆಸಲಿದ್ದಾರೆ. ಗ್ಯಾರಂಟಿ ಯೋಜನೆಗಳೊಂದಿಗೆ ಅಧಿಕಾರ ಹಿಡಿದಿರುವ ಕಾಂಗ್ರೆಸ್ ಈ ಬಾರಿ ಯಾವುದಕ್ಕೆ ತೆರಿಗೆ ವಿಧಿಸಲಿದೆ, ಯಾವುದಕ್ಕೆ ಎಷ್ಟು ವಿನಾಯ್ತಿ ನೀಡಲಿದೆ, ಯಾವ ಹೊಸ ಯೋಜನೆ ಜಾರಿಗೆ ತರಲಿದೆ, ಸರ್ಕಾರದ ವಿವಿಧ ಇಲಾಖೆಗಳ ಯೋಜನೆಗಳಿಗೆ, ಕೆಲಸಗಳಿಗೆ ಎಷ್ಟು ಹಣ ವಿನಿಯೋಗ ಮಾಡಲಿದೆ ಎಂಬುದು ಗೊತ್ತಾಗಲಿದೆ.
ಕಾಂಗ್ರೆಸ್ ಗ್ಯಾರಂಟಿ ಯೋಜನೆಯಿಂದ ರಾಜ್ಯ ದಿವಾಳಿಯಾಗುತ್ತದೆ, ಒಂದು ಕಡೆ ನೀಡಿದಂತೆ ಮಾಡಿ ಸರ್ಕಾರ ಮತ್ತೊಂದು ಕಡೆ ಜನರಿಂದ ಹಣ ಕಿತ್ತುಕೊಳ್ಳುತ್ತದೆ, ಜನ ಸರ್ಕಾರದ ಬಿಟ್ಟಿ ಭಾಗ್ಯಗಳಿಗೆ ಮೋಸ ಹೋಗಿದ್ದಾರೆ ಎಂಬಿತ್ಯಾದಿ ಟೀಕೆಗಳ ಮಧ್ಯೆ ಈ ಬಾರಿ ಸಿಎಂ ಸಿದ್ದರಾಮಯ್ಯ ಯಾವ ರೀತಿ ಬಜೆಟ್ ಮಂಡಿಸುತ್ತಾರೆ ಎಂಬುದು ಕುತೂಹಲಕಾರಿಯಾಗಿದೆ.