ಚಾಮರಾಜನಗರಕ್ಕೆ ಕೊಟ್ಟ ಮಾತು ಮರೀತಾ ಸರ್ಕಾರ…..!

ಚಾಮರಾಜನಗರ

   ಕರೋನಾ ಎರಡನೇ ಅಲೆ ವೇಳೆ ಮೃತಪಟ್ಟ ಕುಟುಂಬಗಳಿಗೆ ಅಂದಿನ ಸರಕಾರ ಎರಡರಿಂದ ಮೂರು ಲಕ್ಷ ರು. ಪರಿಹಾರ ನೀಡಿ ಕೈತೊಳೆದುಕೊಂಡಿತು. ಅದೇ ಆರ್‌ಸಿಬಿ ಸಂಭ್ರಮಾಚರಣೆಯ ವೇಳೆ ಕಾಲ್ತುಳಿತದಲ್ಲಿ ಮೃತ ಪಟ್ಟವರಿಗೆ 25 ಲಕ್ಷ ರು.ಪರಿಹಾರ ನೀಡಿದೆ. ಜತೆಗೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮವನ್ನೂ ತಕ್ಷಣವೇ ಜರುಗಿಸಿದೆ. ಆದರೆ, ಅದೇ ರೀತಿ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಕೋರೋನಾದ ಎರಡನೇ ಅಲೆ ವೇಳೆ ಆಕ್ಸಿಜನ್ ಸಿಗದೇ ಮೃತ ಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರವೂ ಸಿಗಲಿಲ್ಲ, ಒಬ್ಬ ಸಣ್ಣ ಮಟ್ಟದ ಅಧಿಕಾರಿಯ ಮೇಲೆ ಯಾವ ಕ್ರಮವೂ ಆಗಲಿಲ್ಲ. ಏಕೆ ಈ ತಾರತಮ್ಯ ಎಂಬ ಪ್ರಶ್ನೆ ಜಿಲ್ಲೆಯ ಸಂತ್ರಸ್ತ ಕುಟುಂಬಗಳನ್ನು ಕಾಡುತ್ತಿದೆ. 

   ಕೊರೊನಾ ಎರಡನೇ ಅಲೆ 201ರ ಮೇ 9 ರ ರಾತ್ರಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಸಿಗದೇ 36 ಮಂದಿ ಅಸುನೀಗಿದ್ದರು. ಅದರಲ್ಲೂ ಎಲ್ಲಾ ಬಡ ಕುಟುಂಬಗಳು, ಕೆಲವರು ಸಂಸಾರದ ಹೊಣೆ ಹೊತ್ತವರು,ಇನ್ನು ಕೆಲವರು ಕುಟುಂಬದ ಆಧಾರಸ್ತಂಭವಾದವರು, ಈ ವೇಳೆ ಮೃತಪಟ್ಟ ಒಂದೊಂದು ಕುಟುಂಬವೂ ಒಂದೊಂದು ದಾರುಣ ಕಥೆಯನ್ನೇ ಹೇಳುತ್ತವೆ. ಈ ದುರಂತಕ್ಕೂ ಮೊದಲು ಕುಟುಂಬಗಳು ನಿರುಮ್ಮಳವಾಗಿದ್ದವು. ಆದರೆ ಆ ಘನಘೋರ ದುರಂತದ ಬಳಿಕ ಕುಟುಂಬ ನಿರ್ವಹಣೆಗೆ ಪರಾದಾಡುವ ಸ್ಥಿತಿಯಲ್ಲಿವೆ. 

   ಅಂದು ಮಧ್ಯೆ ರಾತ್ರಿ ಏಕಾಏಕಿ ಆಮ್ಲಜನಕದ ಕೊರತೆಯಿಂದ ನರಳಾಡಿ ಎಲ್ಲರ ಕಣ್ಮುಂದೇ ಒದ್ದಾಡಿ ಒದ್ದಾಡಿ ಮೃತಪಟ್ಟವರೇ ಹೆಚ್ಚು. ಸುಮಾರು 36 ಮಂದಿ ಮೃತಪಟ್ಟಿದ್ದರು. ಜಿಲ್ಲಾಸ್ಪತ್ರೆಯ ಒಳಗೆ ಹಾಗೂ ಹೊರಗೆ ಮೃತಪಟ್ಟ ಘಟನೆ ಇಡೀ ದೇಶದ ಗಮನ ಸೆಳೆದಿತ್ತು. ಕರ್ನಾಟಕ ರಾಜ್ಯದ ಮಟ್ಟಿಗೆ ಇದೊಂದು ಕರಾಳ ಘಟನೆಯಾಗಿ ಇಂದಿಗೂ ಕಾಡುವ ದುರಂತ ನೆನಪು ಮಾತ್ರ ಜಿಲ್ಲೆಯ ಜನರ ಮನಸಿನಿಂದ ಮಾಸದೇ ಉಳಿದಿದೆ. 

   ಈ ದುರಂತ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿದ್ದ ಅಂದಿನ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅದ್ಯಕ್ಷ ಡಿ.ಕೆ.ಶಿವಕುಮಾರ್ ಒಳಗೊಂಡ ತಂಡ ಭೇಟಿ ನೀಡಿ ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಧೈರ್ಯ ತುಂಬುವ ಕೆಲಸ ಮಾಡಿದ್ದರು. ಮೃತ ಕುಟುಂಬಕ್ಕೆ ಒಂದು ಲಕ್ಷ ಪರಿಹಾರ ವನ್ನು ತಕ್ಷಣ ನೀಡುವ ಮೂಲಕ ಉತ್ತಮ ಕೆಲಸ ಮಾಡಿ ಜನ ಮನ ಗೆದ್ದಿತ್ತು. ಅಲ್ಲದೇ ಆಡಳಿತ ವರ್ಗದಿಂದ ಮಾಹಿತಿ ಪಡೆದು ಘಟನೆಯ ಬಗ್ಗೆ ತಮ್ಮದೇ ಯಾದ ತನಿಖಾ ವರದಿಯನ್ನು ಸಿದ್ದಪಡಿಸಿ ಕೊಂಡಿತ್ತು. ಭರವಸೆ ಈಡೇರಲ್ಲಿಲ್ಲ. 

   ಕುಟುಂಬಗಳಿಗೆ ಸೂಕ್ತ ಪರಿಹಾರ ಹಾಗೂ ಉದ್ಯೋಗ ನೀಡಿ, ಇದಕ್ಕೆ ಕಾರಣರಾದ ಅಧಿಕಾರಿಗಳನ್ನ ಕೂಡಲೇ ಬಂಧಿಸಿ ಕ್ರಮ ಜರಗಿಸುವುದಾಗಿ ಹೇಳಿದ್ದರು. ಅಲ್ಲದೇ ಈ ಘಟನೆ ಆರೋಗ್ಯ ಸಚಿವ ಸುಧಾಕರ್, ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಡಿಸಿ, ಡಿಎಚ್‌ಒ ಸೇರಿದಂತೆ ಎಲ್ಲರ ಮೇಲೂ ಎಫ್‌ ಐಆರ್ ಹಾಕಬೇಕು ಎಂದು ಅಣದು ಪಟ್ಟು ಹಿಡಿದ್ದಿದ್ದರು. ಆದರೆ ತಮ್ಮದೇ ಸರಕಾರ ಬಂದರೂ ಈವರವಿಗೂ ತಪ್ಪಿತಸ್ಥರ ವಿರುದ್ದ ಯಾವ ಕ್ರಮವೂ ಆಗಿಲ್ಲ ಎಂದು ನೊಂದ ಕುಟುಂಬ ಗಳು ಆಕ್ರೋಶ ಹೊರ ಹಾಕುತ್ತಿವೆ. 

   ಬೆಂಗಳೂರಲ್ಲಿ ಆರ್‌ಸಿಬಿ ಸಂಭ್ರಮಾಚರಣೆ ಕಾಲ್ತುಳಿತದಲ್ಲಿ ಮೃತಪಟ್ಟ ಕೂಡಲೇ ಸರಕಾರ ಪೊಲೀಸ್ ಅಧಿಕಾರಿಗಳನ್ನ ಅಮಾನತು ಮಾಡಿ, ಮೃತರ ಕುಟುಂಬಕ್ಕೆ 25 ಲಕ್ಷ ಪರಿಹಾರ ನೀಡಿದೆ. ಆದರೆ ಅದೇ ಕಾನೂನು ಚಾಮರಾಜನಗರ ಜಿಲ್ಲೆಯ ಆಕ್ಸಿಜನ್ ದುರಂತದ ಕುಟುಂಬ ಪರಿಹಾರ ಹಾಗೂ ಸಂಬಂಧಪಟ್ಟವರಿಗೆ ಕ್ರಮ ಏಕೆ ಇಲ್ಲ ಎನ್ನುವ ಪ್ರಶ್ನೆಯನ್ನ ಕುಟುಂಬದವರ ಜೊತೆ ಸಂಘ ಸಂಸ್ಥೆಗಳು ಸಹ ಧ್ವನಿ ಎತ್ತಿವೆ. ಕುಟುಂಬದ ಸದಸ್ಯರಿಗೆ ಸಮರ್ಪಕ ಪರಿಹಾರ ನೀಡದೇ ಇರುವುದಕ್ಕೆ ಸಂಘ ಸಂಸ್ಥೆಗಳು ಹೋರಾಡುವುದಕ್ಕೆ ನಿರ್ಧರಿಸಿದೆ.

   ಆಮ್ಲಜನಕ ದುರಂತಕ್ಕೆ ಹೊಣೆ ಹೊರಬೇಕಾದ ಸರಕಾರ ಪರಿಹಾರ, ಉದ್ಯೋಗ ನೀಡದೇ ಅನ್ಯಾಯ ಎಸಗಿದೆ ಎಂದು ರೈತ ಸಂಘಟನೆ, ದಲಿತ ಸಂಘಟನೆ, ಕನ್ನಡಪರ ಹೋರಾಟಗಾರರು, ಎಸ್ಡಿಪಿಐ ಸಂಘಟನೆಗಳು ಸಂತ್ರಸ್ತರ ಜೊತೆ ಸಭೆ ಸೇರಿ ಚರ್ಚಿಸಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

   ಒಟ್ಟಿನಲ್ಲಿ, ದುರಂತ ನಡೆದು ವರ್ಷಗಳು ಉರುಳುತ್ತಿದ್ದರೂ ಈವರವಿಗೂ ಸರಕಾರ ಮಾತ್ರ ಆಕ್ಸಿಜನ್ ದುರಂತದ ಸಂತ್ರಸ್ತರ ನೋವಿಗೆ ಸ್ಪಂದಿಸದೇ ಇರುವುದು ಮಾತ್ರ ಆಡಳಿತ ವ್ಯವಸ್ಥೆಯ ದುರಂತವೇ ಸರಿ..

Recent Articles

spot_img

Related Stories

Share via
Copy link