ಪ್ರಯಾಗ್ ರಾಜ್:
ಇಡೀ ಉತ್ತರ ಪ್ರದೇಶದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದ ಉಮೇಶ್ ಪಾಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಕೊಲೆಯಾದ ಗ್ಯಾಂಗ್ ಸ್ಟರ್- ರಾಜಕಾರಣಿ ಅತೀಕ್ ಅಹ್ಮದ್ ಅವರ ಸಹಾಯಕ ನಫೀಸ್ ಬಿರಿಯಾನಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಸೋಮವಾರ ತಿಳಿಸಿದ್ದಾರೆ.
50 ವರ್ಷದ ನಫೀಸ್ ಭಾನುವಾರ ಸಂಜೆ ಎಸ್‌ಆರ್‌ಎನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಪ್ರಯಾಗ್‌ರಾಜ್ ಪೊಲೀಸರು ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಪ್ರಾಥಮಿಕವಾಗಿ ಸಾವಿಗೆ ಹೃದಯ ವೈಫಲ್ಯ ಕಾರಣ ಎಂದು ವೈದ್ಯರು ತಿಳಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಬಿಎಸ್‌ಪಿ ಶಾಸಕ ರಾಜು ಪಾಲ್ ಹತ್ಯೆ ಪ್ರಕರಣದ ಪ್ರಮುಖ ಸಾಕ್ಷಿ ಉಮೇಶ್ ಪಾಲ್ ಮತ್ತು ಅವರ ಇಬ್ಬರು ಭದ್ರತಾ ಸಿಬ್ಬಂದಿಯನ್ನು ಫೆಬ್ರವರಿ 25, 2023 ರಂದು ಗುಂಡಿಕ್ಕಿ ಕೊಲ್ಲಲಾಗಿತ್ತು. ದಾಳಿಯ ವೇಳೆ ಬಳಸಿದ ಕಾರು ಬಿರಿಯಾನಿಗೆ ಸೇರಿತ್ತು ಎಂದು ಹೇಳಲಾಗಿದೆ.
ಉಮೇಶ್ ಪಾಲ್ ಅವರ ಪತ್ನಿ ಜಯಪಾಲ್ ಅವರ ದೂರಿನ ಮೇರೆಗೆ ಧುಮನಗಂಜ್ ಪೊಲೀಸ್ ಠಾಣೆಯಲ್ಲಿ ಅತೀಕ್ ಅಹ್ಮದ್, ಅವರ ಸಹೋದರ ಅಶ್ರಫ್, ಪತ್ನಿ ಶೈಸ್ತಾ ಪರ್ವೀನ್, ಅತೀಕ್ ಅವರ ಇಬ್ಬರು ಪುತ್ರರು, ಅವರ ಸಹಾಯಕರಾದ ಗುಡ್ಡು ಮುಸ್ಲಿಂ ಮತ್ತು ಗುಲಾಮ್ ಮತ್ತು ಇತರ ಒಂಬತ್ತು ಸಹಚರರ ವಿರುದ್ಧ ಪ್ರಕರಣ ದಾಖಲಾಗಿತ್ತು.
ಉಮೇಶ್ ಪಾಲ್ ಕೊಲೆ ಪ್ರಕರಣ ಸೇರಿದಂತೆ 100 ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳಲ್ಲಿ ಹೆಸರು ಕೇಳಿಬಂದಿದ್ದ ಅತೀಕ್ ಅಹ್ಮದ್ ಮತ್ತು ಅವರ ಸಹೋದರ ಅಶ್ರಫ್ ಅವರನ್ನು ಈ ವರ್ಷದ ಏಪ್ರಿಲ್ 15 ರಂದು ಗುಂಡಿಕ್ಕಿ ಹತ್ಯೆಗೈಯಲಾಯಿತು.