ಬೆಂಗಳೂರು
ಕರ್ನಾಟಕ ಮತ್ತು ತಮಿಳು ನಾಡಿನ ಮದ್ಯೆ ಹರಿಯುವ ಕಾವೇರಿ ನದಿ ನೀರು ನಿರ್ವಹಣಾ ಸಮಿತಿಯಿದಿಂದ ಸೂಚನೆ ಬರುತ್ತಿದ್ದಂತೆ ನಿನ್ನೆ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಸಭೆ ನಡೆಸಿ ಮುಂದಿನ 15 ದಿನಗಳವರೆಗೆ 5,000 ಕ್ಯೂಸೆಕ್ ನೀರು ಹರಿಸುವಂತೆ ಹೇಳಿದೆ. ಪ್ರತಿದಿನ 24 ಸಾವಿರ ಕ್ಯೂಸೆಕ್ ಹರಿಸುವಂತೆ ಅವರು ವಾದಿಸಿದ್ದರು. ನಾವು ಅಷ್ಟು ನೀರು ಹರಿಸಲು ಆಗುವುದಿಲ್ಲವೆಂದು ವಾದ ಮಂಡಿಸಿದ್ದು, ಹಾಗಾಗಿ ಪ್ರತಿದಿನ 5 ಸಾವಿರ ಕ್ಯೂಸೆಕ್ ಹರಿಸಲು ಸೂಚಿಸಲಾಗಿದೆ ಎಂದರು.
ಸಂಕಷ್ಟ ಸೂತ್ರದಂತೆ ಅಷ್ಟು ನೀರು ಹರಿಸಲು ಆಗಲ್ಲವೆಂದು ಮನವರಿಕೆ ಮಾಡುತ್ತೇವೆ. ನಮ್ಮ ಕಾನೂನು ಘಟಕದ ಜೊತೆ ಮಾತನಾಡುತ್ತೇನೆ. ಜಲಸಂಪನ್ಮೂಲ ಇಲಾಖೆ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಸಿಡಬ್ಲ್ಯುಆರ್‌ಸಿ ನಿರ್ದೇಶನವು ರಾಜ್ಯಕ್ಕೆ ಅನುಕೂಲಕರವಾಗಿದೆಯೇ ಅಥವಾ ಅನನುಕೂಲವಾಗಿದೆಯೇ, ನಮ್ಮ ಜಲಾಶಯಗಳಲ್ಲಿ ನೀರಿರಲಿ ಅಥವಾ ಇಲ್ಲದಿರಲಿ ಇವೆಲ್ಲವನ್ನೂ ನಾವು ಪರಿಶೀಲಿಸಬೇಕು. ಕರ್ನಾಟಕಕ್ಕೆ ನೀರಿಲ್ಲ, ನಾವು ನಮ್ಮ ಬೆಳೆಗಳನ್ನು ಉಳಿಸಬೇಕು, ರೈತರ ಹಿತವನ್ನು ಕಾಪಾಡಬೇಕು ಮತ್ತು ಜನರ ಕುಡಿಯುವ ನೀರಿನ ಅಗತ್ಯತೆಗಳನ್ನು ಕಾಪಾಡಬೇಕು. ಈ ಎಲ್ಲಾ ಅಂಶಗಳನ್ನು ಪರಿಶೀಲಿಸಿದ ನಂತರ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ, ನಾನು ತಕ್ಷಣ ಕಾನೂನು ತಂಡವನ್ನು ಸಂಪರ್ಕಿಸುತ್ತೇನೆ ಎಂದರು.
ತಮಿಳುನಾಡಿಗೆ ಮುಂದಿನ 15 ದಿನಗಳವರೆಗೂ ಪ್ರತಿದಿನ 5,000 ಕ್ಯೂಸೆಕ್ಸ್ ನೀರು ಹರಿಸಬೇಕೆಂದು ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ(CWRC) ಕರ್ನಾಟಕಕ್ಕೆ ಸೂಚಿಸಿದ ಬೆನ್ನಲ್ಲೇ ಸರ್ಕಾರ ನೀರು ಬಿಡಲು ಮುಂದಾಗಿದ್ದು ರಾಜ್ಯದ ಕಾವೇರಿ ಜಲಾನಯನ ಭಾಗದ ರೈತರನ್ನು ರೊಚ್ಚಿಗೆಬ್ಬಿಸಿದೆ.ಮಂಡ್ಯ ಜಿಲ್ಲೆಯ ಬಹುತೇಕ ಭಾಗದ ರೈತರು ಇಂದು ರಸ್ತೆ ತಡೆ ನಡೆಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟು ನಮಗೇ ಕುಡಿಯಲು, ಕೃಷಿಗೆ ನೀರು ಇಲ್ಲದಿರುವಾಗ ತಮಿಳು ನಾಡಿಗೆ ನೀರು ಬಿಟ್ಟರೆ ನಮ್ಮ ಗತಿ ಏನು ಎಂದು ರೈತರು ರೊಚ್ಚಿಗೆದ್ದಿದ್ದಾರೆ.
ಕಳೆದ ಆಗಸ್ಟ್ 11 ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA)ನಿರ್ದೇಶನದ ನಂತರ ಕರ್ನಾಟಕ 10,000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿತು. ಆದರೆ ತಮಿಳು ನಾಡು CWMA ನಿರ್ದೇಶನವನ್ನು ಪ್ರಶ್ನಿಸಿ 24,000 ಕ್ಯೂಸೆಕ್ಸ್ಗೆ ಬೇಡಿಕೆಯಿಟ್ಟು ಸುಪ್ರೀಂ ಕೋರ್ಟ್ ನಲ್ಲಿ ಅರ್ಜಿಯನ್ನು ಸಲ್ಲಿಸಿತು.
ಈ ಹಿಂದೆ ಸಿಡಬ್ಲ್ಯುಆರ್ ಸಿ ಆದೇಶದಂತೆ 15,000 ಕ್ಯೂಸೆಕ್‌ನಿಂದ 10,000 ಕ್ಯೂಸೆಕ್‌ಗೆ ಬಿಡುಗಡೆ ಮಾಡಬೇಕಾದ ನೀರಿನ ಪ್ರಮಾಣವನ್ನು 10,000 ಕ್ಯೂಸೆಕ್‌ಗೆ ಇಳಿಸುವ ಪ್ರಾಧಿಕಾರದ ನಿರ್ಧಾರವನ್ನು ವಿರೋಧಿಸಿ ಆಗಸ್ಟ್ 11 ರಂದು, CWMA ಸಭೆಯಲ್ಲಿ ತಮಿಳು ನಾಡು ತಂಡವು ಸಭೆಯಿಂದ ಹೊರನಡೆದಿತ್ತು.
ನಂತರ, ತಮಿಳುನಾಡು ಸರ್ಕಾರವು 24,000 ಕ್ಯೂಸೆಕ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡುವಂತೆ ಕೋರಿ ಸುಪ್ರೀಂ ಮೊರೆ ಹೋಗಿತ್ತು. ಸುಪ್ರೀಂ ಕೋರ್ಟ್ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 1 ಕ್ಕೆ ಮುಂದೂಡಿದೆ ಮತ್ತು ಬಿಡುಗಡೆಯಾದ ನೀರು, ಕರ್ನಾಟಕ ಜಲಾಶಯಗಳಲ್ಲಿನ ಸಂಗ್ರಹಣೆ ಮಟ್ಟ ಇತ್ಯಾದಿಗಳ ಬಗ್ಗೆ ವರದಿಯನ್ನು ಸಲ್ಲಿಸುವಂತೆ CWMA ಗೆ ನಿರ್ದೇಶಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ