ನವದೆಹಲಿ:
ರಾಜ್ಯದಲ್ಲಿ ಈ ವರ್ಷ ಮುಂಗಾರು ಮಳೆ ಕೈಕೊಟ್ಟು ರೈತರು ಪರಿತಪಿಸುತ್ತಿರುವ ಸಂದರ್ಭದಲ್ಲಿ ತಮಿಳು ನಾಡಿಗೆ ನಿತ್ಯ 5 ಸಾವಿರ ಕ್ಯುಸೆಕ್ ನೀರನ್ನು ಬಿಡಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(CWMA) ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶಗಳ ರೈತರಿಂದ ನಿತ್ಯವೂ ಪ್ರತಿಭಟನೆ ವ್ಯಕ್ತವಾಗುತ್ತಿದೆ.
ವಿರೋಧ ಪಕ್ಷಗಳು ಸಹ ಕೇಂದ್ರದ ಮುಂದೆ ರಾಜ್ಯ ಸರ್ಕಾರ ಸಮರ್ಥವಾಗಿ ವಾದ ಮಂಡಿಸಬೇಕೆಂದು ಆಗ್ರಹಿಸುತ್ತಿವೆ. ಈ ನಡುವೆ ಇಂದು ಬುಧವಾರ ದೆಹಲಿಯಲ್ಲಿ ಕಾನೂನು ತಜ್ಞರ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಭೆ ನಡೆಸಲಿದ್ದಾರೆ. ಅದಕ್ಕಾಗಿ ಕಳೆದ ರಾತ್ರಿಯೇ ದೆಹಲಿಗೆ ಆಗಮಿಸಿದ್ದಾರೆ.
ದೆಹಲಿಯ ತಾಜ್ ಮಾನ್ ಸಿಂಗ್ ಹೋಟೆಲ್ನಲ್ಲಿ ನಡೆಯುವ ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ರಾಜ್ಯದ ಸಂಸದರು, ಕೇಂದ್ರ ಸಚಿವರು, ರಾಜ್ಯಸಭಾ ಸದಸ್ಯರು ಭಾಗಿಯಾಗಲಿದ್ದಾರೆ.
ಸಿಡಬ್ಲೂಎಮ್ಎ ಆದೇಶ ವಿಚಾರವಾಗಿ ರಾಜ್ಯದ ಜನಪ್ರತಿನಿಧಿಗಳ ಜೊತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾಜ್ಮಾನ್ ಸಿಂಗ್ ಹೋಟೆಲ್ನಲ್ಲಿ ಸಭೆ ನಡೆಸುತ್ತಿದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್, ಸಚಿವ ಚಲುವರಾಯಸ್ವಾಮಿ, ದೆಹಲಿ ವಿಶೇಷ ಪ್ರತಿನಿಧಿ ಪ್ರಕಾಶ್ ಹುಕ್ಕೇರಿ, ಸಂಸದರಾದ ಗದ್ದಿಗೌಡರ್, ಲೆಹರ್ ಸಿಂಗ್, ಬಚ್ಚೇಗೌಡ, ಸುಮಲತಾ ಅಂಬರೀಶ್, ಕೇಂದ್ರ ಸಚಿವರಾದ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ ಭಾಗವಹಿಸಿದ್ದಾರೆ.
ಇಂದು ಬೆಳಗ್ಗೆ ದೆಹಲಿಯ ಕರ್ನಾಟಕ ಭವನದಲ್ಲಿ ಡಿಸಿಎಂ ಡಿ ಕೆ ಶಿವಕುಮಾರ್ ಪ್ರಾರ್ಥನೆ ಸಲ್ಲಿಸಿದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ರಾಜ್ಯದ ಮುಖಂಡರು, ಸಂಸದರು ಎಲ್ಲಾ ಇಂದು ತಾಜ್ ಮಾನ್ ಸಿಂಗ್ ಹೊಟೇಲ್ ನಲ್ಲಿ ಸಭೆ ಸೇರಲಿದ್ದು, ರಾಜ್ಯದಲ್ಲಿ ಈ ವರ್ಷ ಉಂಟಾಗಿರುವ ನೀರಿನ ಸಮಸ್ಯೆ ಬಗ್ಗೆ ಗಹನ ಚರ್ಚೆ ನಡೆಸಲಿದ್ದೇವೆ. ಕರ್ನಾಟಕ ರಾಜ್ಯದ ಹಿತಾಸಕ್ತಿ ನಮಗೆ ಆದ್ಯತೆಯಾಗಿದ್ದು ಆ ನಿಟ್ಟಿನಲ್ಲಿ ಮುಂದಿನ ಕಾನೂನು ಹೋರಾಟ ರೂಪುರೇಷೆ ಬಗ್ಗೆ ಚರ್ಚಿಸಲಿದ್ದೇವೆ ಎಂದರು.
ಕಾವೇರಿ ನೀರು ವಿವಾದದಲ್ಲಿ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕೆಂದು ನಾನು ಪ್ರಧಾನಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ಸಮಯ ಕೇಳಿದ್ದೇನೆ. ಇಂದಿನ ಸಭೆಯಲ್ಲಿ ಎಲ್ಲಾ ಸಂಸದರು, ಕೇಂದ್ರ ಸಚಿವರು ಭಾಗವಹಿಸುತ್ತಿದ್ದಾರೆ. ಪಕ್ಷಬೇಧ ಮರೆತು ಸಹಕಾರ ನೀಡುತ್ತಿದ್ದಾರೆ. ಕೇಂದ್ರ ಜಲ ಶಕ್ತಿ ಸಚಿವರನ್ನು ಭೇಟಿ ಮಾಡಿದ್ದೇನೆ. ನಾವು ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಲಿದ್ದೇವೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
