ಮನೋ ಸಮಸ್ಯೆಗಳ ಸೂಕ್ತ ನಿರ್ವಹಣೆ ಅಗತ್ಯ…..!

ತುಮಕೂರು

    ಮನೋ ಸಾಮಾಜಿಕ ಸಮಸ್ಯೆಗಳು ಮನುಷ್ಯನಿಗೆ ಹಲವು ವಿಧಗಳಲ್ಲಿ ತೊಂದರೆಯೊಡ್ಡುತ್ತವೆ. ಆದಕಾರಣ ಇಂತಹ ಮನೋ ಸಮಸ್ಯೆಗಳ ಬಗ್ಗೆ ಸೂಕ್ತ ನಿರ್ವಹಣೆ ಅಗತ್ಯವಿದೆ, ಈ ಬಗ್ಗೆ ಹೆಚ್ಚು ಗಮನ ಹರಿಸಬೇಕು ಎಂದು ಶ್ರೀ ಸಿದ್ಧಾರ್ಥ ವೈದ್ಯಕೀಯ ಮಹಾವಿದ್ಯಾಲಯದ ರಿಜಿಸ್ಟಾರ್ ಡಾ.ಕುರಿಯನ್ ಅಭಿಪ್ರಾಯಪಟ್ಟರು.

    ಶ್ರೀ ಸಿದ್ಧಾರ್ಥ ವೈದ್ಯಕೀಯ ಕಾಲೇಜಿನಲ್ಲಿ ವಿಶ್ವ ಆತ್ಮಹತ್ಯೆ ತಡೆ ದಿನದ ಅಂಗವಾಗಿ ಇತ್ತೀಚೆಗೆ ಆಯೋಜಿಸಿದ್ದ ಆತ್ಮಹತ್ಯೆ ತಡೆ ದಿನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರೋಗ್ಯ ಕ್ಷೇತ್ರದಲ್ಲಿ ಈ ರೀತಿಯ ಕಾರ್ಯಕ್ರಮಗಳು ನಡೆಯುವುದರಿಂದ ವೈದ್ಯಕೀಯ ಕ್ಷೇತ್ರ, ನರ್ಸಿಂಗ್ ವಿದ್ಯಾರ್ಥಿಗಳಿಗೆ ಹಾಗೂ ರೋಗಿಗಳಿಗೆ ಹೆಚ್ಚು ಉಪಯುಕ್ತವಾಗಲಿದೆ ಎಂದು ಶ್ಲಾಘಿಸಿದರು.

    ಕಾರ್ಯಕ್ರಮ ಉದ್ಘಾಟಿಸಿದ ಶ್ರೀ ಸಿದ್ಧಾರ್ಥ ಅಕಾಡೆಮಿ ಡೀಮ್ಡ್ ವಿಶ್ವವಿದ್ಯಾಲಯದ ಉಪಕುಲಪತಿ ಡಾ.ಕೆ.ಬಿ.ಲಿಂಗೇಗೌಡ ಅವರು ಮಾತನಾಡಿ ಮಾನಸಿಕ ಆರೋಗ್ಯದ ಕಡೆಗೆ ಗಮನ ಹಾಗೂ ಈ ರೀತಿಯ ಕಾರ್ಯಕ್ರಮಗಳ ಕಡೆಗೆ ಗಮನ ಹರಿಸುವುದರಿಂದಾಗಿ ಸಾಮಾಜಿಕವಾಗಿ ಹೆಚ್ಚು ಉಪಯೋಗವಾಗಲಿದೆ ಎಂದರು.ಪ್ರಾಂಶುಪಾಲ ಡಾ.ಮಲ್ಲಿಕಾರ್ಜುನ ಬಿ. ಸಾಣೇಕೊಪ್ಪ ಮಾತನಾಡಿ ಮಾನಸಿಕ ಆರೋಗ್ಯದ ಅರಿವು ಮೂಡಿಸುವ ಅಗತ್ಯವಿದೆ. ಇದಕ್ಕಾಗಿ ಸಮಾಜಮುಖಿ ಕಾರ್ಯಕ್ರಮಗಳು ಹೆಚ್ಚು ನಡೆಯಲಿ ಎಂದರು.

   ಮುಖ್ಯ ಆಡಳಿತ ನಿರ್ವಹಣಾಧಿಕಾರಿ ಡಾ.ಎಂ.ಕಿರಣ್ ಕುಮಾರ್ ಮಾತನಾಡಿ ಕಳೆದ ಹಲವು ವರ್ಷಗಳಿಂದ ಮನೋವೈದ್ಯಕೀಯ ವಿಭಾಗದ ಸಹಾಯವಾಣಿ ಕಾರ್ಯನಿರ್ವಹಿಸುತ್ತಿರುವುದನ್ನು (8088525339) ಶ್ಲಾಘಿಸಿದರು.ಶ್ರೀ ಸಿದ್ಧಾರ್ಥ ಆಸ್ಪತ್ರೆಯ ಅಧೀಕ್ಷಕ ಡಾ.ವೆಂಕಟೇಶ್ ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯಾ ಆಲೋಚನೆ, ನಡವಳಿಕೆಗಳನ್ನು ಮುಂಚಿತವಾಗಿಯೇ ಗುರುತಿಸಿ ಅವರಿಗೆ ಸಹಾಯ ಹಸ್ತ ಚಾಚಿದರೆ ಜೀವಗಳನ್ನು ಉಳಿಸಬಹುದು ಎಂದರು.

   ಮುಖ್ಯ ಭಾಷಣಕಾರರಾದ ಬೆಂಗಳೂರು ವೈದೇಹಿ ಕಾಲೇಜಿನ ಡಾ.ಕೆ.ಕಿರಣ್ ಕುಮಾರ್ ಮಾತನಾಡಿ ಆತ್ಮಹತ್ಯೆಯ ಆಯಾಮಗಳು, ಕಾರಣಗಳು ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು.
ಆತ್ಮಹತ್ಯೆಗೆ ಶೇ.20 ರಷ್ಟು ಮಾನಸಿಕ ಕಾಯಿಲೆಗಳು ಕಾರಣವಾದರೂ ಇತರೆ ಮನೋ ಸಾಮಾಜಿಕ ಆರ್ಥಿಕ ಕಾರಣಗಳೇ ಅಧಿಕವಾಗಿವೆ. ಅವೆಲ್ಲವನ್ನೂ ಸಮರ್ಥವಾಗಿ ನಿಭಾಯಿಸಲು ಎಲ್ಲರನ್ನೂ ತಯಾರು ಮಾಡಬೇಕಾಗಿದೆ ಎಂದರು.

   ಮನೋವೈದ್ಯಕೀಯ ವಿಭಾಗದ ಮುಖ್ಯಸ್ಥರಾದ ಪ್ರೊ. ಡಾ.ಎಂ.ಟಿ.ಸತ್ಯನಾರಾಯಣ ಮಾತನಾಡಿ ವಿದ್ಯಾರ್ಥಿಗಳ ಒತ್ತಡ ನಿರ್ವಹಣೆ, ಸಮಯ ನಿರ್ವಹಣೆ, ಅಧ್ಯಯನ, ಕೌಶಲ್ಯ ವಿಧಾನಗಳು ಇತ್ಯಾದಿಗಳ ಬಗ್ಗೆ ತಿಳಿಸಿಕೊಟ್ಟರು.

   ಆತ್ಮಹತ್ಯೆ ತಡೆಗಟ್ಟುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳು ನಡೆಯುತ್ತಾ ಬಂದಿವೆ. ಅರಿವು ಮತ್ತು ತಿಳವಳಿಕೆ ಕಾರ್ಯಕ್ರಮಗಳು ಹೆಚ್ಚಿವೆ. ಇಂತಹ ಅರಿವು ಕಾರ್ಯಕ್ರಮಗಳಿಂದಾಗಿಯೇ ಸಾಕಷ್ಟು ಆತ್ಮಹತ್ಯೆ ಪ್ರಯತ್ನಗಳನ್ನು ತಡೆಯಬಹುದಾಗಿದೆ ಎಂದರು.ಡಾ.ನೇಹಾ ಮತ್ತಿಕೊಪ್ಪ ಸ್ವಾಗತಿಸಿದರು. ಡಾ.ಪೂಜಾ ಜಾದವ್ ಕಾರ್ಯಕ್ರಮ ನಿರೂಪಿಸಿದರು. ಡಾ.ಸುನೀಲ್ ಪಾಟೀಲ್ ವಂದಿಸಿದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link