ನವದೆಹಲಿ:
ಭಾರತ ಮತ್ತು ಕೆನಡಾ ನಡುವಿನ ಸಂಬಂಧದಲ್ಲಿ ಮತ್ತಷ್ಟು ಉದ್ನಿಗ್ನತೆ ಉಂಟಾಗಿದ್ದು, ಭಾರತದಿಂದ 41 ರಾಜತಾಂತ್ರಿಕರನ್ನು ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ ಕೆನಡಾ ರಾಷ್ಟ್ರ, ಬೆಂಗಳೂರು, ಚಂಡೀಗಢ, ಮುಂಬೈ ಮತ್ತು ದೆಹಲಿಯಲ್ಲಿ ಸಂಚರಿಸುವ ವೇಳೆ ಎಚ್ಚರದಿಂದ ಇರುವಂತೆ ತನ್ನ ರಾಯಭಾರ ಸಿಬ್ಬಂದಿ ಮತ್ತು ನಾಗರೀಕರಿಗೆ ಸೂಚನೆ ನೀಡಿದೆ.
ಅಲ್ಲದೆ, ಬೆಂಗಳೂರು, ಮುಂಬೈ ಮತ್ತು ಚಂಡೀಗಢದಲ್ಲಿನ ದೂತಾವಾಸ ಕಚೇರಿಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದ್ದು, ಅವುಗಳ ಕಾರ್ಯನಿರ್ವಹಣೆಯನ್ನು ದೆಹಲಿಯ ಕೇಂದ್ರದ ಮೂಲಕವೇ ನಿರ್ವಹಿಸಲಾಗುವುದು ಎಂದು ತಿಳಿಸಿದೆ.
ಭಾರತದ ಎಚ್ಚರಿಕೆಗೆ ಬೆದರಿ ಶುಕ್ರವಾರ ತನ್ನ 41 ರಾಯಭಾರ ಸಿಬ್ಬಂದಿಗಳನ್ನು ತವರಿಗೆ ತೆರಳಿ ಕರೆಸಿಕೊಂಡ ಕೆನಡಾ ಸರ್ಕಾರ, ಅದರ ಬೆನ್ನಲ್ಲೇ ತನ್ನ ನಾಗರೀಕರಿಗೆ ಹಲವು ಸಲಹಾವಳಿ ಬಿಡುಗಡೆ ಮಾಡಿದೆ.
ದೆಹಲಿಯಲ್ಲಿನ ಕೆನಡಾ ರಾಯಭಾರ ಕಚೇರಿ ಬಿಡುಗಡೆ ಮಾಡಿರುವ ಸಲಹಾವಳಿಯಲ್ಲಿ ಕೆನಡಾ ಮತ್ತು ಭಾರತದ ನಡುವಿನ ಇತ್ತೀಚಿನ ಕೆಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ, ಕೆನಡಿಯನ್ನರ ಬಗ್ಗೆ ಮಾಧ್ಯಮಗಳಲ್ಲಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ನಕಾರಾತ್ಮಕ ಅಭಿಪ್ರಾಯ ವ್ಯಕ್ತವಾಗುತ್ತಿದೆ. ಜೊತೆಗೆ ಕೆನಡಾ ವಿರೋಧಿ ಪ್ರತಿಭಟನೆಗೆ ಕರೆ ನೀಡುವ ಮತ್ತು ಕೆನಡಿಯನ್ನರಿಗೆ ಬೆದರಿಕೆ ಹಾಕುವವ ಅಥವಾ ತೊಂದೆ ನೀಡುವ ಸಾಧ್ಯತೆಗಳಿವೆ.
ಹೀಗಾಗಿ ಅಪರಿಚತರ ಜೊತೆ ಅನಗತ್ಯ ಸ್ನೇಹ ಹಾಗೂ ವಿಚಾರ-ವಿನಿಮಯ ಮತ್ತು ಮಾಹಿತಿ ಹಂಚಿಕೊಳ್ಳಬಾರದು. ನಾಗರೀಕರಿಗೆ ಯಾವುದೇ ಸಮಸ್ಯೆಯಾದಲ್ಲಿ ಅವರು ದೆಹಲಿಯಲ್ಲಿರುವ ರಾಯಭಾರ ಕೇಚಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದೆ.
ಹೆಚ್ಚುವರಿ ರಾಯಭಾರ ಕಚೇರಿಗಳನ್ನು ವಾಪಸ್ ಕರೆಸಿಕೊಳ್ಳಬೇಕೆಂಬ ಭಾರತದ ಬೇಡಿಕೆ ಅಸಮಂಜಸ ಹಾಗೂ ಬೆದರಿಕೆ ಎಂದು ಕೆನಡಾ ಟೀಕಿಸಿದ್ದು, ಇದಕ್ಕೆ ಭಾರತ ತಿರುಗೇಟು ನೀಡಿದೆ. ಅಂತರಾಷ್ಟ್ರೀಯ ಒಪ್ಪಂದದಂತೆಯೇ ನಾವು ನಡೆದುಕೊಂಡಿದ್ದೇವೆಂದು ಹೇಳಿದೆ.
ಈ ಕುರಿತು ಹೇಳಿಕೆ ನೀಡಿರುವ ವಿದೇಶಾಗ ಸಚಿವಾಲಯ, ಅಗತ್ಯ ಬಿದ್ದಲ್ಲಿ ದೂತಾವಾಸ ಸಿಬ್ಬಂದಿಯನ್ನು ಮಿತಿಗೊಳಿಸಿಕೊಳ್ಳಲು ವಿಯೆನ್ನಾ ಒಪ್ಪಂದದ 11.1ನೇ ಕಾಯ್ದೆ ತಿಳಿಸುತ್ತದೆ. ಅದರ ಅನುಸಾರ ನಾವು ನಡೆದುಕೊಂಡಿದ್ದು, ನಾವು ಯಾವುದೇ ನಿಯಮವನ್ನು ಉಲ್ಲಂಘನ ಮಾಡಿರುವುದಿಲ್ಲ. ಒಂದು ವೇಳೆ ಅಂತಹ ಅಂತರಾಷ್ಟ್ರೀಯ ನಿಯಮಗಳು ಇದ್ದರೂ ಕೂಡ ನಾವು ಸಮಾನತೆಗೇ ಮೊದಲ ಆದ್ಯತೆ ಕೊಡುತ್ತೇವೆಯೇ ಹೊರತು ಒಪ್ಪಂದಕ್ಕಲ್ಲ ಎಂದು ಸ್ಪಷ್ಟಪಡಿಸಿದೆ.