ಹಾಸನ
ಡಿಸೆಂಬರ್ 4 ರ ಒಳಗೆ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ವಿರೋಧ ಪಕ್ಷದ ನಾಯಕರ ಆಯ್ಕೆ ನಡೆಯಲಿದೆ ಎಂದು ಮಾಜಿ ಸಚಿವ ಕೆ ಗೋಪಾಲಯ್ಯ ಹೇಳಿದ್ದಾರೆ. ಹಾಸನದ ಅದಿ ದೇವತೆ ಹಾಸನಾಂಬೆ ದೇವಿಯ ದರ್ಶನವನ್ನು ಕುಟುಂಬ ಸಮೇತವಾಗಿ ಬಂದು ನಂತರ ಹಾಸನಾಂಬೆ ದೇವಾಲಯದ ಬಳಿ ಮಾಧ್ಯಮದೊಂದಿಗೆ ಮಾತನಾಡಿ ಅವರು, ಜಾತಿ ಗಣತಿಯಲ್ಲಿ ಲೋಪವಾಗಿದೆ ಎಂಬ ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಹೇಳಿಕೆಗೆ ನನ್ನ ಬೆಂಬಲವಿದ್ದು, ಜಾತಿಜನಗಣತಿ ಮಂಡಿಸುವುದನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಯಾವುದೇ ಕಾರಣಕ್ಕೂ ಆ ರೀತಿ ಆಗುವುದಕ್ಕೆ ನಾವು ಬಿಡುವುದಿಲ್ಲ. ಈ ಬಗ್ಗೆ ನಾನು ಮುಖ್ಯಮಂತ್ರಿಗಳನ್ನು ಆಗ್ರಹಿಸುತ್ತೇನೆ. ತಾವೇನು ಜಾತಿಗಣತಿ ಮಂಡಿಸಿಬೇಕು ಎಂದುಕೊಂಡಿದ್ದೀರಾ ಅದನ್ನು ವಾಪಾಸ್ ಪಡೆಯಬೇಕು. ಯಾವುದೇ ಸಮುದಾಯಕ್ಕೆ ಅನ್ಯಾಯ ಆಗಬಾರದು. ನಮ್ಮ ಒಕ್ಕಲಿಗರಿಗೆ ಅನ್ಯಾಯ ಆಗುತ್ತೆ ಎಂದು ನಿನ್ನೆ ಶ್ರೀಗಳು ಹೇಳಿದ್ದಾರೆ ಅದನ್ನು ನಾವೆಲ್ಲರೂ ಬೆಂಬಲಿಸುತ್ತೇವೆ. ಜಾತಿಗಣತಿ ಸಮರ್ಪಕವಾಗಿ ಆಗಿಲ್ಲ. ಎಲ್ಲೋ ಒಂದು ಒಕ್ಕಲಿಗರಿಗೆ ದೊಡ್ಡ ನಷ್ಟ ಆಗಿದೆ ಎಂದರು.
ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ವಿಚಾರವಾಗಿ ಮಾತನಾಡಿ, ಕೇಂದ್ರದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ. ಕೆಲವು ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬ ವಿಚಾರಕ್ಕೆ, ಆ ವಿಚಾರವಾಗಿ ನನಗೆ ಏನು ಗೊತ್ತಿಲ್ಲ. ನಾವೆಲ್ಲರೂ ಬಿಜೆಪಿಯಿಂದ ಆಯ್ಕೆಯಾಗಿದ್ದೇವೆ. ಎಸ್.ಟಿ. ಸೋಮಶೇಖರ್ ಕಾಂಗ್ರೆಸ್‌ನಿಂದ ಬಂದಿರುವವರು. ಅನುದಾನ ಕೊಟ್ಟಿದ್ದಾರೆ ಅಂದ ಮಾತ್ರಕ್ಕೆ ಕಾಂಗ್ರೆಸ್ ಸೇರ್ತಾರೆ ಅಂತ ಅಲ್ಲ.
ಈ ರಾಜ್ಯದ ಜನತೆ 136 ಕಾಂಗ್ರೇಸ್ ಶಾಸಕರಿಗೆ ಆಶೀರ್ವಾದ ಮಾಡಿದ್ದಾರೆ. ಅಲ್ಲೇ ತುಂಬಿ ತುಳುಕುತ್ತಿದ್ದಾರೆ, ಹಾಗಾಗಿ ಸೋಮಶೇಖರ್ ಭಾರತೀಯ ಜನತಾ ಪಕ್ಷದಲ್ಲೇ ಇರುತ್ತಾರೆ. ನಮ್ಮಲ್ಲಿ ಕಾಂಗ್ರೆಸ್ ಹೋಗುವವರು ಯಾರೂ ಇಲ್ಲ ಎಂದರು. ಬಿಜೆಪಿ ರಾಜ್ಯಾಧ್ಯಕ್ಷರ ನೇಮಕ ವಿಳಂಬ ವಿಚಾರ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ಕೇಂದ್ರದ ವರಿಷ್ಠರ ಬಗ್ಗೆ ಅತ್ಯಂತ ವಿಶ್ವಾಸವಿದೆ. ಅವರು ಈ ತಿಂಗಳಿನಲ್ಲಿ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ.
ಯಾವ ಪ್ರತಿಷ್ಠೆಯೂ ಇಲ್ಲ, ಅವರಿಗೆ ಗೊತ್ತಿದೆ ಯಾವ ಸಂದರ್ಭದಲ್ಲಿ ಏನು ಮಾಡಬೇಕೆಂದು, ಮುಂದಿನ ತಿಂಗಳು ನಾಲ್ಕರಿಂದ ಬೆಳಗಾಂನಲ್ಲಿ ಅಧಿವೇಶನ ನಡೆಯಲಿದ್ದು, ಅದಕ್ಕೂ ಮೊದಲು ಅಧ್ಯಕ್ಷರ ನೇಮಕ ಆಗುತ್ತದೆ ಎನ್ನುವ ವಿಶ್ವಾಸವಿದೆ. ರಾಷ್ಟ್ರೀಯ ನಾಯಕರು ಡಿ.4 ಕ್ಕಿಂತ ಮುಂಚೆ ವಿರೋಧ ಪಕ್ಷದ ನಾಯಕ, ಬಿಜೆಪಿ ರಾಜ್ಯಾಧ್ಯಕ್ಷರನ್ನು ನೇಮಕ ಮಾಡುತ್ತಾರೆ ಎನ್ನುವ ಭರವಸೆ ಇದೆ ಎಂದರು. ನಾವೇನೂ ಕೈಕಟ್ಟಿ ಕುಳಿತಿಲ್ಲ. ಕಾಂಗ್ರೆಸ್ ಸರ್ಕಾರ ಏನು ಮಾಡುತ್ತಿದೆ ಎಂಬ ಬಗ್ಗೆ ಬೀದಿಗಿಳಿದು ಪ್ರತಿಭಟನೆ ಮಾಡುತ್ತೇವೆ.
ಸಿಎಂ ಸಿದ್ದರಾಮಯ್ಯ ಅವರು ಐದು ವರ್ಷ ಸಿಎಂ ವಿಚಾರಕ್ಕೆ ಉತ್ತರಿಸಿ, ಅದು ಅವರ ಪಕ್ಷಕ್ಕೆ ಸಂಬಂಧಿಸಿದ ವಿಚಾರ. ಅಭಿವೃದ್ಧಿ ಎನ್ನುವುದು ಶೂನ್ಯಕ್ಕೆ ಬಂದಿದೆ. ಇಡೀ ರಾಜ್ಯದ 224 ಕ್ಷೇತ್ರದಲ್ಲಿ ಯಾವ ಕ್ಷೇತ್ರದಲ್ಲಿ ಅಭಿವೃದ್ಧಿ ಆಗುತ್ತಿದೆ, ಎಲ್ಲಿ ಅಭಿವೃದ್ಧಿ ಆಗ್ತಿದೆ ತಾವೇ ತೋರಿಸಬೇಕು. ಸ್ವಾತಂತ್ರ್ಯ ಬಂದಾಗಿನಿಂದ ಯಾವ ಸರ್ಕಾರವೂ ಈ ರೀತಿ ನಡೆದುಕೊಂಡಿರಲಿಲ್ಲ.
ಮುಸ್ಲಿಂರ ಶಕ್ತಿ ಏನು ಎಂದು ತೋರಿಸುತ್ತೇವೆ ಎಂಬ ಸಚಿವ ಜಮೀರ್ ಅಹಮದ್ ಹೇಳಿಕೆ ವಿಚಾರಕ್ಕೆ ಉತ್ತರಿಸಿ, ಚುನಾವಣೆ ಬಂದಾಗ ನಾಡಿನ ಜನತೆ ಯಾರು ಏನು ಮಾಡಿದ್ದಾರೆ ಅನ್ನೋದನ್ನ ನೋಡ್ತಾರೆ. ಒಂದು ಸಮುದಾಯ ನೋಡಲ್ಲ, ನಮಗೆ ವಿಶ್ವಾಸವಿದೆ ಎಂದು ಹೇಳಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ