ನವದೆಹಲಿ:
ಐಸಿಸಿ ಸೋಮವಾರ ತನ್ನ ವಿಶ್ವಕಪ್ ತಂಡವನ್ನು ಪ್ರಕಟಿಸಿದ್ದು, ಈ ತಂಡದಲ್ಲಿ ಹಾಲಿ ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದ ಭಾರತ ಕ್ರಿಕೆಟ್ ತಂಡದ 6 ಮಂದಿ ಆಟಗಾರರನ್ನೊಳಗೊಂಡಿದೆ.
ಐಸಿಸಿ ವಿಶ್ವಕಪ್ ತಂಡದ ಆಯ್ಕೆ ಸಮಿತಿಯು ವೆಸ್ಟ್ ಇಂಡೀಸ್ ಶ್ರೇಷ್ಠ ಇಯಾನ್ ಬಿಷಪ್, ಆಸ್ಟ್ರೇಲಿಯಾದ ಮಾಜಿ ಬ್ಯಾಟರ್ ಶೇನ್ ವ್ಯಾಟ್ಸನ್ ಮತ್ತು ಐಸಿಸಿ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಸೇರಿದಂತೆ ಇತರರನ್ನು ಒಳಗೊಂಡಿದ್ದ ಸಮಿತಿ ತಂಡವನ್ನು ಪ್ರಕಟಿಸಿದೆ.
ಐಸಿಸಿ ಸೋಮವಾರ ಪ್ರಕಟಿಸಿದ ಟೂರ್ನಿಯ ವಿಶ್ವಕಪ್ ತಂಡದಲ್ಲಿ ಫೈನಲಿಸ್ಟ್‌ಗಳಾದ ಭಾರತದ ಆರು ಆಟಗಾರರು ಮತ್ತು ಚಾಂಪಿಯನ್ ಆಸ್ಟ್ರೇಲಿಯಾದ ಇಬ್ಬರು ಆಟಗಾರರನ್ನು ಆಯ್ಕೆ ಮಾಡಲಾಗಿದೆ. ಪ್ರಮುಖವಾಗಿ ಈ ತಂಡಕ್ಕೆ ಭಾರತ ತಂಡದ ನಾಯಕ ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ಆಯ್ಕೆ ಮಾಡಿದ್ದಾರೆ.
ಟೂರ್ನಿಯ ಗರಿಷ್ಠ ರನ್ ಸ್ಕೋರರ್ ವಿರಾಟ್ ಕೊಹ್ಲಿ ಪಂದ್ಯಾವಳಿಯ ಆಟಗಾರ ಎಂದು ಹೆಸರಿಸಲಾಗಿದೆ. ಅಂತೆಯೇ ನಾಯಕ ರೋಹಿತ್ ಶರ್ಮಾ, ಕೆಎಲ್ ರಾಹುಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ಮತ್ತು ಅಗ್ರ ವಿಕೆಟ್ ಟೇಕರ್ ಮೊಹಮ್ಮದ್ ಶಮಿ ಅವರನ್ನು ತಂಡದಲ್ಲಿ ಸೇರಿಸಲಾಗಿದೆ. ಉಳಿದಂತೆ ಆಸ್ಟ್ರೇಲಿಯಾದ ಆಲ್ ರೌಂಡರ್ ಗ್ಲೆನ್ ಮ್ಯಾಕ್ಸ್‌ವೆಲ್ ಮತ್ತು ಸ್ಪಿನ್ನರ್ ಆಡಮ್ ಝಂಪಾ ಈ ವಿಶ್ವಕಪ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.
ಮ್ಯಾಕ್ಸ್‌ವೆಲ್ ಅಫ್ಘಾನಿಸ್ತಾನ ವಿರುದ್ಧ ದ್ವಿಶತಕ ಸಿಡಿಸಿ ತಂಡಕ್ಕೆ ಗೆಲುವು ತಂದುಕೊಟ್ಟು ತಂಡವನ್ನು ಸೆಮೀಸ್ ಹಂತಕ್ಕೆ ಕೊಂಡೊಯ್ದಿದ್ದರು ಮತ್ತು ನೆದರ್ಲೆಂಡ್ಸ್ ವಿರುದ್ಧ 40 ಎಸೆತಗಳಲ್ಲಿ 100 ರನ್ ಗಳಿಸಿ ವಿಶ್ವಕಪ್ ಇತಿಹಾಸದಲ್ಲಿ ವೇಗದ ಶತಕ ಸಿಡಿಸಿದ್ದರು.
ಆರಂಭದಲ್ಲಿ ಲೀಗ್ ಹಂತದ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿದ್ದರೂ, ಮೊಹಮ್ಮದ್ ಶಮಿ ಕೇವಲ ಏಳು ಪಂದ್ಯಗಳಲ್ಲಿ 24 ವಿಕೆಟ್‌ಗಳೊಂದಿಗೆ ಅತ್ಯುತ್ತಮ ಬೌಲರ್ ಎಂಬ ಕೀರ್ತಿಗೆ ಭಾಜನರಾಗಿದ್ದರು. ಶಮಿ ಕೂಡ ಐಸಿಸಿ ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಶಮಿ ಬಳಿಕದ ಸ್ಥಾನದಲ್ಲಿ ಭಾರತದ ವೇಗಿ ಜಸ್ಪ್ರೀತ್ ಬುಮ್ರಾ ಇದ್ದು, ಬುಮ್ರಾ ಅವರು 11 ಪಂದ್ಯಗಳಲ್ಲಿ 20 ವಿಕೆಟ್‌ಗಳೊಂದಿಗೆ ವಿಶ್ವಕಪ್‌ನಲ್ಲಿ ನಾಲ್ಕನೇ ಅತ್ಯಂತ ಯಶಸ್ವಿ ಬೌಲರ್ ಆಗಿದ್ದರು.
ಐಸಿಸಿ ಪ್ರಕಟಿಸಿರುವ ವಿಶ್ವಕಪ್ ತಂಡ ಇಂತಿದೆ.
1. ಕ್ವಿಂಟನ್ ಡಿ ಕಾಕ್ (ವಿಕೆಟ್ ಕೀಪರ್) (ದಕ್ಷಿಣ ಆಫ್ರಿಕಾ),2. ರೋಹಿತ್ ಶರ್ಮಾ (ನಾಯಕ) (ಭಾರತ)
3. ವಿರಾಟ್ ಕೊಹ್ಲಿ (ಭಾರತ),4. ಡೇರಿಲ್ ಮಿಚೆಲ್ (ನ್ಯೂಜಿಲೆಂಡ್),5. ಕೆಎಲ್ ರಾಹುಲ್ (ಭಾರತ)
6. ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ),7. ರವೀಂದ್ರ ಜಡೇಜಾ (ಭಾರತ),8. ಜಸ್ಪ್ರೀತ್ ಬುಮ್ರಾ (ಭಾರತ)
9. ದಿಲ್ಶನ್ ಮಧುಶಂಕ (ಶ್ರೀಲಂಕಾ),10. ಆಡಮ್ ಝಂಪಾ (ಆಸ್ಟ್ರೇಲಿಯಾ),11. ಮೊಹಮ್ಮದ್ ಶಮಿ (ಭಾರತ),12ನೇ ಆಟಗಾರ: ಜೆರಾಲ್ಡ್ ಕೋಟ್ಜಿ (ದಕ್ಷಿಣ ಆಫ್ರಿಕಾ)
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ