ಬೆಂಗಳೂರು:
ಗುತ್ತಿಗೆದಾರ ಅಂಬಿಕಾಪತಿ ಸ್ವಾಭಾವಿಕವಲ್ಲ, ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಅವರ ಹೇಳಿಕೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕಿದ್ದು, ತನಿಖೆಗೆ ಆದೇಶಿಸಬೇಕು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಆಗ್ರಹಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಆದಾಯ ತೆರಿಗೆ ಇಲಾಖೆಗೆ (Income Tax Department) ಪ್ರಕರಣದ ಕುರಿತು ಹೇಳಿಕೆ ನೀಡಿದ್ದ ಅಂಬಿಕಾಪತಿ ಯಾರ ಹೆಸರುಗಳನ್ನೂ ಹೇಳಿದ್ದಾರೋ, ಆ ಹಣ ಯಾರದ್ದು ಎಂದು ಹೇಳಿದ್ದರೋ ಎಂಬ ಅಂಶವು ತನಿಖೆಯಲ್ಲಿ ಬಯಲಾಗಬೇಕಿದೆ ಎಂದು ಹೇಳಿದ್ದಾರೆ.
ಗುತ್ತಿಗೆದಾರ ಅಂಬಿಕಾಪತಿ ಸಾವು ಸಹಜವಲ್ಲವೆಂದಿರುವ ಕೆಂಪಣ್ಣನವರ ಹೇಳಿಕೆಯನ್ನು ಸರ್ಕಾರ ಹಾಗೂ ಮಾಧ್ಯಮಗಳು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದ್ದಾರೆ.
ಅಂಬಿಕಾಪತಿ ಮನೆಯಲ್ಲಿ 40 ಕೋಟಿ ಹಣ ಆದಾಯ ತೆರಿಗೆ ದಾಳಿಯ ವೇಳೆ ಸಿಕ್ಕಿತ್ತು. ಈ ಹಣ ಸರ್ಕಾರ ಪ್ರಭಾವಿ ಮಂತ್ರಿ ಹಾಗು ಒಬ್ಬ ಪ್ರಭಾವಿ ರಾಜಕಾರಣಿಯ ಮಗನಿಗೆ ಸೇರಿದ್ದು ಎಂಬ ಸುದ್ದಿಯೂ ಇದೆ. ಇದಕ್ಕೆ ಸಾಕ್ಷಿಯಾಗಿ ಆ ಪ್ರಭಾವಿ ರಾಜಕಾರಣಿ ಮಗನ ಆಪ್ತ ಸಹಾಯಕನನ್ನು ಆದಾಯ ತೆರಿಗೆ ಇಲಾಖೆ ವಿಚಾರಣೆಗೆ ಒಳಪಡಿಸಿತ್ತು ಎಂದು ಬರೆದಿದ್ದಾರೆ.
ಗುತ್ತಿಗೆದಾರರ ಸಂಘದ ಉಪಾಧ್ಯಕ್ಷರಾಗಿದ್ದ ಅಂಬಿಕಾಪತಿ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ನವೆಂಬರ್ 27 ರಂದು ಹೃದಯಾಘಾತದಿಂದ ಮೃತಪಟ್ಟಿದ್ದರು. ಅಕ್ಟೋಬರ್‌ನಲ್ಲಿ ಅಂಬಿಕಾಪತಿ ನಿವಾಸಕ್ಕೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದರು. ಐಟಿ ದಾಳಿ ವೇಳೆ ಅಂಬಿಕಾಪತಿ ಮನೆಯಲ್ಲಿ ಬರೋಬ್ಬರಿ 44 ಕೊಟಿ ರೂ. ಪತ್ತೆಯಾಗಿತ್ತು.