ಬೆಂಗಳೂರು:
ನಗರದಲ್ಲಿ ವೃದ್ದೆಯೊಬ್ಬರವನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ಶವವನ್ನು ಐದು ತುಂಡುಗಳಾಗಿ ಕತ್ತರಿಸಿ ಪ್ಲಾಸ್ಟಿಕ್ ಡ್ರಮ್‌ನಲ್ಲಿ ತುಂಬಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೆಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಭಾನುವಾರ ಈ ಪ್ರಕರಣ ವರದಿಯಾಗಿದೆ. ಮೃತರನ್ನು ಸುಶೀಲಮ್ಮ (65) ಎಂದು ಗುರುತಿಸಲಾಗಿದೆ.
ಸಂಜೆ 5 ಗಂಟೆ ಸುಮಾರಿಗೆ ಡ್ರಮ್‌ನಿಂದ ದುರ್ವಾಸನೆ ಬರಲಾರಂಭಿಸಿದ ಹಿನ್ನೆಲೆಯಲ್ಲಿ ಸಮೀಪದ ನಿವಾಸಿಗಳು ಅದನ್ನು ಪರಿಶೀಲಿಸಿದಾಗ ದೇಹದ ಮೇಲ್ಭಾಗವು ಹಾಗೇ ಇದ್ದು, ಕೈಗಳು ಮತ್ತು ಕಾಲುಗಳನ್ನು ನಿಖರವಾಗಿ ಕತ್ತರಿಸಲ್ಪಟ್ಟಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಶನಿವಾರ ಸಂಜೆ ಮತ್ತು ಮಧ್ಯರಾತ್ರಿಯ ನಡುವೆ ಮಹಿಳೆಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಶಂಕೆ ವ್ಯಕ್ತಪಡಿಸಿವೆ. ಕೆಆರ್ ಪುರಂನ ನಿಸರ್ಗ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಶನಿವಾರ ಬೆಳಗ್ಗೆ ಸುಶೀಲಮ್ಮ ತಮ್ಮ ಮಗಳೊಂದಿಗೆ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಸುಶೀಲಮ್ಮ ಮನೆಯವರಿಗೆ ತಿಳಿಸದೆ ಸ್ವಲ್ಪ ಹೊತ್ತು ಮನೆ ಬಿಟ್ಟು ನಂತರ ವಾಪಸ್ಸಾಗುವ ಅಭ್ಯಾಸ ಹೊಂದಿದ್ದರು. ಶನಿವಾರ ಅವರು ಕಣ್ಮರೆಯಾದಾಗ , ಅದೇ ರೀತಿ ಇರಬಹುದೆಂದು ಕುಟುಂಬಸ್ಥರು ಅಂದುಕೊಂಡಿದ್ದರು ಎಂದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಿದ್ದೇವೆ, ಆದರೆ ಈ ಹಂತದಲ್ಲಿ ಯಾವುದೇ ತೀರ್ಮಾನಗಳನ್ನು ತೆಗೆದುಕೊಳ್ಳಲಾಗುವುದಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೆಆರ್ ಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.