ನವದೆಹಲಿ:
ಐಟಿ ಇಲಾಖೆಯು ಶುಕ್ರವಾರ 1,823.08 ಕೋಟಿ ರೂ. ಪಾವತಿಸುವಂತೆ ಹೊಸದಾಗಿ ನೋಟಿಸ್ ಜಾರಿ ಮಾಡಿರುವ ಬೆನ್ನಲ್ಲೇ, ‘ಕಳೆದ ರಾತ್ರಿ’ ಕೂಡ ಆದಾಯ ತೆರಿಗೆ ಇಲಾಖೆಯಿಂದ ಮತ್ತೆ ಎರಡು ನೋಟಿಸ್‌ಗಳು ಬಂದಿವೆ ಎಂದು ಕಾಂಗ್ರೆಸ್ ಶನಿವಾರ ಹೇಳಿದೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ನಿನ್ನೆ ರಾತ್ರಿ ನಮಗೆ ಮತ್ತೆರಡು ನೋಟಿಸ್ ಕಳುಹಿಸಲಾಗಿದೆ. ಕಾಂಗ್ರೆಸ್ ಪಕ್ಷ ಬಿಜೆಪಿಯ ತೆರಿಗೆ ಭಯೋತ್ಪಾದನೆಗೆ ಗುರಿಯಾಗಿದೆ ಎಂದು ಆರೋಪಿಸಿದರು.
‘ಪ್ರಧಾನಿ ನರೇಂದ್ರ ಮೋದಿ ಅವರು ವಿರೋಧ ಪಕ್ಷಗಳನ್ನು ನಿಷ್ಕ್ರಿಯಗೊಳಿಸಲು ಬಯಸುತ್ತಿದ್ದಾರೆ. ಹೀಗಾಗಿಯೇ ಕೇಂದ್ರದ ತನಿಖಾ ಸಂಸ್ಥೆಗಳನ್ನು ಮುಂದಿಟ್ಟುಕೊಂಡು ಲೋಕಸಭೆ ಚುನಾವಣೆ ಸಮಯದಲ್ಲಿ ತೊಂದರೆ ನೀಡುತ್ತಿದ್ದಾರೆ’ ಎಂದು ದೂರಿದರು.
ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ಬಂದಿರುವುದಾಗಿ ಹೇಳಿದ್ದಾರೆ.
‘ಆದಾಯ ತೆರಿಗೆ ಇಲಾಖೆಯಿಂದ ನಿನ್ನೆ ರಾತ್ರಿ ನನಗೆ ನೋಟಿಸ್ ಬಂದಿದೆ. ನಾನು ಆಘಾತಕ್ಕೊಳಗಾಗಿದ್ದೇನೆ. ಈ ಪ್ರಕರಣ ಈಗಾಗಲೇ ಇತ್ಯರ್ಥವಾಗಿದೆ. ಬಿಜೆಪಿ ಸರ್ಕಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿ ಈ ರೀತಿಯ ಕ್ರಮ ಕೈಗೊಳ್ಳುತ್ತಿದೆ. ಅವರು (ಬಿಜೆಪಿ) ಕಾಂಗ್ರೆಸ್ ಮತ್ತು ಇಂಡಿಯಾ ಮೈತ್ರಿಕೂಟಕ್ಕೆ ಹೆದರುತ್ತಿದ್ದಾರೆ. ಅದಕ್ಕಾಗಿಯೇ ಅವರು ವಿರೋಧ ಪಕ್ಷದವರನ್ನು ಗುರಿಯಾಗಿಸುತ್ತಿದ್ದಾರೆ’ ಎಂದಿದ್ದಾರೆ.
ಶುಕ್ರವಾರ, ಆದಾಯ ತೆರಿಗೆ ಇಲಾಖೆಯಿಂದ 1,823.08 ಕೋಟಿ ರೂ. ಪಾವತಿಸುವಂತೆ ಹೊಸ ನೋಟಿಸ್ ಬಂದಿವೆ ಎಂದು ಕಾಂಗ್ರೆಸ್ ಹೇಳಿದೆ. ತೆರಿಗೆ ಮರುಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಆರಂಭಿಸಿದ್ದ ಪ್ರಕ್ರಿಯೆಯ ವಿರುದ್ಧ ಕಾಂಗ್ರೆಸ್ ಸಲ್ಲಿಸಿದ್ದ ಮೇಲ್ಮನವಿಯನ್ನು ದೆಹಲಿ ಹೈಕೋರ್ಟ್ ಗುರುವಾರ (ಮಾರ್ಚ್ 28) ವಜಾ ಮಾಡಿದ ಬೆನ್ನಲ್ಲೇ ಹೊಸ ನೋಟಿಸ್ ನೀಡಲಾಗಿದೆ.
2017-18 ಮತ್ತು 2020-21 ರ ಮೌಲ್ಯಮಾಪನ ವರ್ಷಗಳಿಗೆ ನೋಟಿಸ್ ನೀಡಲಾಗಿದೆ ಮತ್ತು ದಂಡ ಮತ್ತು ಬಡ್ಡಿಯನ್ನು ಒಳಗೊಂಡಿದೆ.
ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ ಅನ್ನು ಆರ್ಥಿಕವಾಗಿ ದುರ್ಬಲಗೊಳಿಸಲು ಬಿಜೆಪಿಯು ‘ತೆರಿಗೆ ಭಯೋತ್ಪಾದನೆ’ಯಲ್ಲಿ ತೊಡಗಿದೆ ಎಂದು ಪಕ್ಷ ಆರೋಪಿಸಿದೆ.