ಹಾಸನ:
ಹಾಸನ ಮತ್ತು ಸಕಲೇಶಪುರದಲ್ಲಿ ನಡೆದ ಜಂಟಿ ಪ್ರಚಾರ ಸಭೆಯಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧದ ಹೇಳಿಕೆಗಾಗಿ ಹಾಸನ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಭಾನುವಾರ ಕ್ಷಮೆಯಾಚಿಸಿದ್ದಾರೆ.
ಜೆಡಿಎಸ್ ಯುವ ಕಾರ್ಯಕರ್ತರು ಎಚ್ಚೆತ್ತುಕೊಂಡರೆ ಅವರು (ಆರ್‌ಎಸ್ಎಸ್ ಮತ್ತು ಪದಾಧಿಕಾರಿಗಳು) ಓಡಿ ಹೋಗುತ್ತಾರೆ ಎಂದು ಪ್ರಜ್ವಲ್ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಆರ್‌ಎಸ್‌ಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದರು. ಆರ್‌ಎಸ್‌ಎಸ್ ಅನ್ನು ವ್ಯಂಗ್ಯವಾಡಿದ ಪ್ರಜ್ವಲ್, ಜೆಡಿಎಸ್ ಯುವ ಕಾರ್ಯಕರ್ತರನ್ನು ಸಿಂಹಗಳಿಗೆ ಹೋಲಿಸಿದ್ದರು.
ಬ್ರಾಹ್ಮಣ ಸಮುದಾಯದವರು ಉಪಸ್ಥಿತರಿದ್ದ ಹಾಸನದಲ್ಲಿ ಚುನಾವಣಾ ಪ್ರಚಾರದ ವೇಳೆ ಕ್ಷಮೆಯಾಚಿಸಿದ ಪ್ರಜ್ವಲ್, ತನಗೆ ಆರೆಸ್ಸೆಸ್ ಮತ್ತು ಅದರ ಪದಾಧಿಕಾರಿಗಳ ಜವಾಬ್ದಾರಿಗಳ ಬಗ್ಗೆ ತಿಳಿದಿಲ್ಲ. ಅಜ್ಞಾನದಿಂದ ಆರ್‌ಎಸ್‌ಎಸ್ ಬಗ್ಗೆ ಈ ಹೇಳಿಕೆ ನೀಡಿದ್ದೇನೆ. ನನ್ನ ಗಮನಕ್ಕೆ ಬಾರದೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದೇನೆ. ಆದರೆ, ಇವತ್ತು ಅರಿವಾಗಿದೆ. ಹೀಗಾಗಿ, ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.
ನಂತರ, ಆರೆಸ್ಸೆಸ್ ಮತ್ತು ಅದರ ಕಾರ್ಯಕರ್ತರು ಏನನ್ನೂ ನಿರೀಕ್ಷಿಸದೆ ಸಮಾಜ ಮತ್ತು ರಾಷ್ಟ್ರದ ಕಲ್ಯಾಣಕ್ಕಾಗಿ ಕೆಲಸ ಮಾಡಲು ಬದ್ಧರಾಗಿದ್ದಾರೆ ಎಂಬುದನ್ನು ತಾನು ಅರಿತುಕೊಂಡಿದ್ದೇನೆ ಎಂದರು.