ಹೈವೋಲ್ಟೇಜ್‌ ಕ್ಷೇತ್ರವಾಗಿ ಬದಲಾಯ್ತು ಮೈಸೂರು …!

ಮೈಸೂರು:

    ದಿನಕಳೆಯುತ್ತಿದ್ದಂತೆಯೇ ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಕಾವು ರಂಗೇರತೊಡಗಿದ್ದು, ರಾಜಕೀಯ ಪಕ್ಷಗಳ ಆರೋಪ ಪ್ರತ್ಯಾರೋಪ, ಮತದಾರರನ್ನು ಓಲೈಸಲು ಮಾಡುವ ರಂಗಿನಾಟ ಮೆರುಗು ಪಡೆಯುತ್ತಿದೆ. ಇದರ ಜೊತೆಗೆ ಅರಮನೆ ನಗರಿ ಮೈಸೂರು ರಾಜಕೀಯ ಶಕ್ತಿ ಕೇಂದ್ರವಾಗಿ ಮಾರ್ಪಾಡಾಗಿದೆ.

    ಯುಗಾದಿ ಹಬ್ಬದ ಬಳಿಕ ರಾಜಕೀಯ ನಾಯಕರ ಸಮಾಗಮಕ್ಕೆ ಅರಮನೆ ನಗರಿ ಮೈಸೂರು ಸಾಕ್ಷಿಯಾಗಲಿದ್ದು, ರಾಜಕೀಯ ಪಕ್ಷಗಳ ಘಟಾನುಘಟಿ ನಾಯಕರ ಅಬ್ಬರ ಪ್ರಚಾರಕ್ಕೆ ಮೈಸೂರು ವೇದಿಕೆಯಾಗಲಿದೆ. ಪ್ರಧಾನಿ ಮೋದಿ, ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಇತರ ಪ್ರಮುಖರು ಮೈಸೂರಿನಲ್ಲಿ ಅಬ್ಬರ ಪ್ರಚಾರದಲ್ಲಿ ತೊಡಗಲು ಸಜ್ಜಾಗುತ್ತಿದ್ದಾರೆ.

   ಮಹಾರಾಜ ಕಾಲೇಜಿನಲ್ಲಿ ರಾಜಕೀಯ ಪಕ್ಷಗಳ ಬೃಹತ್ ರ್ಯಾಲಿಗಳು ನಡೆಯಲಿದ್ದು, ಪ್ರತಿಪಕ್ಷಗಳ ಇಂಡಿಯಾ ಮೈತ್ರಿ ಕೂಟ ಮತ್ತು ಎನ್‌ಡಿಎ ಬಣಗಳ ಉನ್ನತ ನಾಯಕರು ಅಬ್ಬರದ ಪ್ರಚಾರ ನಡೆಸಲಿದ್ದಾರೆ.

   ಈ ಬಾರಿಯ ಚುನಾವಣೆಯಲ್ಲಿ ಹಳೆ ಮೈಸೂರಿನಲ್ಲಿ ಹಿಡಿತ ಸಾಧಿಸಲು ಮತ್ತು ಗರಿಷ್ಠ ಸ್ಥಾನಗಳನ್ನು ಗೆಲ್ಲಲು ಬಿಜೆಪಿ-ಜೆಡಿಎಸ್ ಮತ್ತು ಕಾಂಗ್ರೆಸ್ ಭಾರೀ ಪೈಪೋಟಿ ನಡೆಸುತ್ತಿವೆ. ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮತ್ತು ಕಾಂಗ್ರೆಸ್ ಅಭ್ಯರ್ಥಿ ಎಂ ಲಕ್ಷ್ಮಣ್ ಅವರು ಈಗಾಗಲೇ ಮೈಸೂರು ನಗರದಲ್ಲಿ ಒಂದು ಸುತ್ತಿನ ಪ್ರಚಾರ ಮುಗಿಸಿ ಮೈಸೂರು-ಕೊಡಗು ಕ್ಷೇತ್ರದ ಇತರೆ ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುತ್ತಿದ್ದಾರೆ.

   ಏಪ್ರಿಲ್ 19 ರಂದು ಮೈಸೂರಿನಲ್ಲಿ ಬಿಜೆಪಿ ರ್ಯಾಲಿ ನಡೆಸಲಿದ್ದು, ಪ್ರಧಾನಿ ಮೋದಿ, ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಚ್ ಡಿ ಕುಮಾರಸ್ವಾಮಿ ಮತ್ತು ಬಿಎಸ್ ಯಡಿಯೂರಪ್ಪ ಭಾಷಣ ಮಾಡಲಿದ್ದಾರೆ.

   ಹಿಂದುಳಿದ ವರ್ಗಗಳ ನಾಯಕ ಮತ್ತು ಬಿಹಾರ ಸಿಎಂ ನಿತೀಶ್ ಕುಮಾರ್ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕರೆತರಲು ಪಕ್ಷವು ಸಿದ್ಧತೆ ನಡೆಸುತ್ತಿದೆ ಎಂದು ತಿಳಿದುಬಂದಿದೆ.

    ಈ ರ್ಯಾಲಿಯು ಒಗ್ಗಟ್ಟಿನ ಸಂದೇಶವನ್ನು ರವಾನಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಯದುವೀರ್ ಅವರ ಗೆಲುವಿಗೆ ಶ್ರಮಿಸಲು ಬಿಜೆಪಿ ಮತ್ತು ಜೆಡಿಎಸ್ ಕಾರ್ಯಕರ್ತರನ್ನು ಹುರಿದುಂಬಿಸಲು ಸಿದ್ಧತೆ ನಡೆಸಲಾಗಿದೆ ಎನ್ನಲಾಗಿದೆ.

    ಬಿಜೆಪಿಯ ಈ ಅಬ್ಬರ ಪ್ರಚಾರಕ್ಕೆ ಪ್ರತಿಯಾಗಿ ಕಾಂಗ್ರೆಸ್ ಕೂಡ ಸಿದ್ಧತೆ ಆರಂಭಿಸಿದೆ. ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರೊಂದಿಗೆ ಮೈಸೂರು ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಏಪ್ರಿಲ್ 12 ರಿಂದ ಮೂರು ದಿನಗಳ ಕಾಲ ಸಿದ್ದರಾಮಯ್ಯ ಅವರು ಪ್ರಚಾರ ನಡೆಸಲಿದ್ದಾರೆಂದು ತಿಳಿದುಬಂದಿದೆ.

    ಸಚಿವರಾದ ಸತೀಶ್ ಜಾರಕಿಹೊಳಿ, ಜಿ.ಪರಮೇಶ್ವರ್, ಕೆಪಿಸಿಸಿ ಕಾರ್ಯಾಧ್ಯಕ್ಷ ತನ್ವೀರ್ ಸೇಠ್ ನಾಯಕರೊಂದಿಗೆ ಹಿಂದುಳಿದ ಸಮುದಾಯಗಳು, ಅಲ್ಪಸಂಖ್ಯಾತರು ಮತ್ತು ದಲಿತರ ಮತಗಳನ್ನು ಕ್ರೋಢೀಕರಿಸಲು ಪ್ರಚಾರ ನಡೆಸಲಿದ್ದಾರೆ. ಶಿವಕುಮಾರ್ ಕೂಡ ಒಕ್ಕಲಿಗ ಮುಖಂಡರ ಸಭೆ ನಡೆಸಿ ಸಮುದಾಯದ ಬೆಂಬಲ ಪಡೆಯಲು ಯತ್ನ ನಡೆಸಲಿದ್ದಾರೆಂದು ತಿಳಿದುಬಂದಿದೆ.

    ಚಾಮರಾಜನಗರ ಕ್ಷೇತ್ರದ ಕೆಲವು ಭಾಗಗಳಲ್ಲಿ ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟದ ನಾಯಕರೊಂದಿಗೆ ರ್ಯಾಲಿಗಳ ನಡೆಸಲು ಕೆಪಿಸಿಸಿ ಚಿಂತನೆ ನಡೆಸಿದ್ದು, ಸುರ್ಜೆವಾಲಾ, ಕೆಸಿ ವೇಣುಗೋಪಾಲ್ ಮತ್ತು ಇತರರು ಈ ರ್ಯಾಲಿಯಲ್ಲಿ ಪ್ರಚಾರ ಮಾಡುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page SUBSCRIBE ಮಾಡಿ

Recent Articles

spot_img

Related Stories

Share via
Copy link